ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಚಾಲನೆ

| Published : Nov 16 2025, 02:00 AM IST

ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿಗಳವರೆಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಳೆದ ಮೂರು ವರ್ಷದ ಹಿಂದೆ ಜಿಲ್ಲಾಕೇಂದ್ರ, ಅರಸೀಕೆರೆ ಹಾಗೂ ಸಕಲೇಶಪುರ ಪಟ್ಟಣದ ಬೀದಿನಾಯಿಗಳ ಸಂತಾನಹರಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಜಿಲ್ಲೆಯ ಎಲ್ಲ ಪುರಸಭೆಯಲ್ಲೂ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್‌ನಲ್ಲಿರುವ ನಿಯಮಗಳನ್ನು ಗಮನಿಸಿ ಸಾಕಷ್ಟು ಟೆಂಡರ್‌ದಾರರು ಟೆಂಡರ್ ಸಲ್ಲಿಕೆಯಿಂದ ದೂರವೆ ಉಳಿದಿದ್ದಾರೆ. ಅಂತಿಮವಾಗಿ ಕೇರ್ ಆಫ್ ವಾಯ್ಸಲೆಸ್ ಅನಿಮಲ್ ಟ್ರಸ್ಟ್ ಪ್ರತಿ ನಾಯಿ ಸಂತಾನಹರಣ ಚಿಕಿತ್ಸೆಗೆ ೨೩೦೦ ರೂಗಳ ಧರದಲ್ಲಿ ಟೆಂಡರ್ ಪಡೆದಿದ್ದು ಅಧಿಕೃತವಾಗಿ ಗುರುವಾರದಿಂದ ಸಂತಾನಹರಣ ಚಿಕಿತ್ಸೆಗೆ ಉಪವಿಭಾಗಾಧಿಕಾರಿ ಚಾಲನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರಬೀದಿನಾಯಿಗಳ ಹೆಚ್ಚಳ ತಡೆಗಟ್ಟುವ ನಿಟ್ಟಿನಲ್ಲಿ ಪುರಸಭೆ ಆಡಾಳಿತಾಧಿಕಾರಿಗಳ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಎರಡು ದಶಕಗಳಿಂದ ಬೀದಿ ನಾಯಿಗಳ ಸಂಖ್ಯೆ ಇಳಿಮುಖಕ್ಕೆ ಯಾವುದೆ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಪಟ್ಟಣದ ಪ್ರತಿಬೀದಿಯಲ್ಲೂ ನೂರಾರು ನಾಯಿಗಳು ಸೃಷ್ಟಿಯಾಗಿದ್ದು ಅಬಲರು, ಮಕ್ಕಳು ನಿರ್ಭಿತಿಯಿಂದ ಸಂಚರಿಸುವುದು ಅಸಾಧ್ಯವಾಗಿದೆ. ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಬಾರಿ ಹೋರಾಟಗಳು ಪಟ್ಟಣದಲ್ಲಿ ನಡೆದ ವೇಳೆ ಪ್ರತಿಭಟನೆಗೆ ಮಣಿದ ಪುರಸಭೆ ರಾತ್ರೋರಾತ್ರಿ ನೂರಾರು ಬೀದಿನಾಯಿಗಳಿಗೆ ಚುಚ್ಚುಮದ್ದು ನೀಡಿ ಹತ್ಯೆ ನಡೆಸುವ ಮೂಲಕ ಪಟ್ಟಣದ ಸುಭಾಷ್ ಮ್ಯದಾನದಲ್ಲಿ ಸಮೂಹಿಕವಾಗಿ ಮಣ್ಣು ಮಾಡಲಾಗಿತ್ತು. ಆದರೆ, ಈ ವಿಚಾರ ಪ್ರಾಣಿ ಪ್ರಿಯರ ಗಮನಕ್ಕೆ ಬಂದ ನಂತರ ಪ್ರಾಣಿದಯಾ ಸಂಘದ ಪಾದಾಧಿಕಾರಿಗಳು ಪುರಸಭೆ ಅಧಿಕಾರಿಗಳ ವಿರುದ್ದ ನ್ಯಾಯಾಲಯದಲ್ಲಿ ದೂರು ದಾಖಲಿಸುವ ಮೂಲಕ ಹತ್ತಾರು ವರ್ಷ ನ್ಯಾಯಾಲಯಕ್ಕೆ ಅಲೆಯುವಂತ ಪರಿಸ್ಥಿತಿ ನಿರ್ಮಿಸಿದ್ದರು. ಇದರಿಂದ ಬೇಸತ್ತ ಅಧಿಕಾರಿಗಳು ಬೀದಿನಾಯಿಗಳ ಹಾವಳಿ ವಿರುದ್ದ ಎಷ್ಟೆ ಪ್ರತಿಭಟನೆಗಳು ನಡೆದರು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳವರೆಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಳೆದ ಮೂರು ವರ್ಷದ ಹಿಂದೆ ಜಿಲ್ಲಾಕೇಂದ್ರ, ಅರಸೀಕೆರೆ ಹಾಗೂ ಸಕಲೇಶಪುರ ಪಟ್ಟಣದ ಬೀದಿನಾಯಿಗಳ ಸಂತಾನಹರಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಜಿಲ್ಲೆಯ ಎಲ್ಲ ಪುರಸಭೆಯಲ್ಲೂ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್‌ನಲ್ಲಿರುವ ನಿಯಮಗಳನ್ನು ಗಮನಿಸಿ ಸಾಕಷ್ಟು ಟೆಂಡರ್‌ದಾರರು ಟೆಂಡರ್ ಸಲ್ಲಿಕೆಯಿಂದ ದೂರವೆ ಉಳಿದಿದ್ದಾರೆ. ಅಂತಿಮವಾಗಿ ಕೇರ್ ಆಫ್ ವಾಯ್ಸಲೆಸ್ ಅನಿಮಲ್ ಟ್ರಸ್ಟ್ ಪ್ರತಿ ನಾಯಿ ಸಂತಾನಹರಣ ಚಿಕಿತ್ಸೆಗೆ ೨೩೦೦ ರೂಗಳ ಧರದಲ್ಲಿ ಟೆಂಡರ್ ಪಡೆದಿದ್ದು ಅಧಿಕೃತವಾಗಿ ಗುರುವಾರದಿಂದ ಸಂತಾನಹರಣ ಚಿಕಿತ್ಸೆಗೆ ಉಪವಿಭಾಗಾಧಿಕಾರಿ ಚಾಲನೆ ನೀಡಿದ್ದಾರೆ. ಎಷ್ಟಿವೆ ಬೀದಿನಾಯಿಗಳಿವೆ?

ತಾಲೂಕಿನ ಪಶುವೈಧ್ಯಕೀಯ ಇಲಾಖೆ ಸಿಬ್ಬಂದಿ ಪಟ್ಟಣದಲ್ಲಿ ೪೮೦ ಬೀದಿ ನಾಯಿಗಳು ಇರುವುದಾಗಿ ವರದಿ ನೀಡಿದೆ. ಆದರೆ, ವರದಿಗಿಂತ ೧೦ ಪಟ್ಟು ಹೆಚ್ಚಿನ ಬೀದಿನಾಯಿಗಳು ಇರುವುದಾಗಿ ಸ್ವತ ಉಪವಿಭಾಗಾಧಿಕಾರಿಯೇ ಮಾಧ್ಯಮಗಳ ಎದುರು ಹೇಳಿದ್ದಾರೆ. ಆದರೆ, ಇದಕ್ಕಿಂತ ಹೆಚ್ಚಿನ ಬೀದಿನಾಯಿಗಳು ಪಟ್ಟಣದಲ್ಲಿರುವ ಬಗ್ಗೆ ಯಾವುದೆ ಅನುಮಾನವಿಲ್ಲ.

ಸಂತಾನಹರಣ ಹೇಗೆ ?

ತಾಲೂಕಿನ ಮಳಲಿ ಘನತ್ಯಾಜ್ಯ ಘಟಕದ ಆವರಣದಲ್ಲಿ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಹಿಡಿದು ತಂದ ನಾಯಿಗಳನ್ನು ಕಬ್ಬಿಣದ ಪಂಜರದಲ್ಲಿ ಬಂಧಿಸಿಟ್ಟು ಒಂದೆರಡು ದಿನಗಳ ಕಾಲ ಕೇವಲ ನೀರನ್ನಷ್ಟೆ ನೀಡಿ, ನಾಯಿ ಹೊಟ್ಟೆ ಸಂಪೂರ್ಣ ಖಾಲಿಯಾದ ನಂತರ ಶಸ್ತ್ರಚಿಕಿತ್ಸೆ ನಡೆಸಿ ಹೆಣ್ಣುನಾಯಿಗಳನ್ನು ಕನಿಷ್ಠ ಐದು ದಿನಗಳ ಕಾಲ ಹಾಗೂ ಗಂಡುನಾಯಿಗಳಿಗೆ ಮೂರು ದಿನಗಳ ಕಾಲ ಕಣ್ಗಾವಲಿನಲ್ಲಿ ಇರಿಸಿ ಪೌಷ್ಠಿಕಾಂಶ ಹೊಂದಿರುವ ಆಹಾರ ನೀಡಿ ಶುಶ್ರೂಷೆ ನಡೆಸಿ ರೇಬಿಸ್ ಚುಚ್ಚುಮದ್ದು ನೀಡಿದ ನಂತರ ಹಿಡಿದ ಜಾಗದಲ್ಲೆ ಬಿಬೀಡುವ ಯೋಜನೆ ಇದಾಗಿದೆ.ಎಷ್ಟು ಸಮಯ:

ಹೆಣ್ಣುನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಕನಿಷ್ಠ ೨೦ರಿಂದ ೩೦ ನಿಮಿಷ ಹಾಗೂ ಗಂಡು ಬೀದಿನಾಯಿಗಳ ಶಸ್ತ್ರಚಿಕಿತ್ಸೆಗೆ ೧೦ರಿಂದ ೧೫ ನಿಮಿಷಗಳು ಸಮಯ ಹಿಡಿಯಲಿದ್ದು ಘನತ್ಯಾಜ್ಯ ಘಟಕದಲ್ಲಿ ನಿರ್ಮಿಸಲಾಗಿರುವ ಐಸಿಯು ನಲ್ಲಿ ನಡೆಯಲಿರುವ ಸಂತಾನ ಹರಣ ಚಿಕಿತ್ಸೆ ನೇರ ದೃಶ್ಯ ಉಪವಿಭಾಗಾಧಿಕಾರಿಗಳಿಗೆ ತಲುಪಲಿದ್ದು ಚಿಕಿತ್ಸೆ ನೀಡಲಾದ ಪ್ರತಿನಾಯಿಗಳ ಕಿವಿಯನ್ನು ಸಣ್ಣ ಪ್ರಮಾಣದಲ್ಲಿ ಕತ್ತರಿಸುವ ಮೂಲಕ ಗುರುತಿಸಲಾಗುವುದು. ಈ ಪ್ರಕ್ರಿಯೆ ನಿರಂತರ ೨ ತಿಂಗಳು ಪಟ್ಟಣದಲ್ಲಿ ನಡೆಯಲಿದೆ. ಕಜ್ಜಿನಾಯಿಗಳಿಗೆ ಬೇಕಿದೆ ಚಿಕಿತ್ಸೆ:

ಪಟ್ಟಣದಲ್ಲಿರುವ ಪ್ರತಿಶತ 70ರಷ್ಟು ಬೀದಿನಾಯಿಗಳು ತೆವಳೆ ರೋಗದಿಂದ ಬಳಲುತಿದ್ದು ಆಹಾರ ಹುಡುಕುವುದರೊಂದಿಗೆ ರೋಗದೊಂದಿಗೆ ಹೋರಾಟ ನಡೆಸುವ ಅನಿವಾರ್ಯತೆ ಬೀದಿನಾಯಿಗಳನ್ನು ಕಾಡುತ್ತಿದೆ. ದೇಹದ ರೋಮಗಳೆಲ್ಲ ಉದುರಿ ಚರ್ಮದಲ್ಲಿ ಕಜ್ಜಿಗಳು ಮೂಡಿ ಗಾಯಗಳಾಗಿರುವ ಬೀದಿನಾಯಿಗಳು ಭಯ ಹುಟ್ಟಿಸುವಂತಿವೆ.ಸಾಕುನಾಯಿಗಳ ಮಾಲೀಕರಿಗೆ ನಿಯಮ:

ಪಟ್ಟಣದ ಸಾಕಷ್ಟು ಶ್ವಾನ ಪ್ರಿಯರಿದ್ದಾರೆ. ಆದರೆ, ಸಾಕಷ್ಟು ಶ್ವಾನಪ್ರಿಯರು ಕೊರಳಿಗೆ ಬೆಲ್ಟ್ ಕಟ್ಟಿ ಬೀದಿಯಲ್ಲಿ ಬಿಡುವುದನ್ನು ಹೊರತುಪಡಿಸಿದರೆ ಮತ್ತೆ ಯಾವ ಎಚ್ಚರಿಕೆಯನ್ನು ಪಾಲಿಸುವುದಿಲ್ಲ. ಇನ್ನೂ ಕೆಲವು ಶ್ವಾನ ಪ್ರಿಯರು ರಸ್ತೆಯಲ್ಲೆ ಸಾಕುನಾಯಿಗಳ ಮಲಮೂತ್ರ ವಿಸರ್ಜಿನೆ ಮಾಡಿಸುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಶ್ವಾನ ಸಾಕಾಣಿಕೆದಾರರಿಗೆ ನಿಯಮ ಜಾರಿಗೊಳಿಸಬೇಕು ಎಂಬ ಆಗ್ರಹ ಪಟ್ಟಣದಲ್ಲಿ ಕೇಳಿಬರುತ್ತಿದೆ.

--- *ಹೇಳಿಕೆ1

ಬೀದಿನಾಯಿಗಳ ಹಾವಳಿ ತಪ್ಪಿಸಿ ಎಂಬ ಕೂಗು ಹಲವು ದಿನಗಳಿಂದ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೀದಿನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕುವ ಪ್ರಕ್ರಿಯೆ ಆರಂಭಿಸಿದ್ದು ಇನ್ನೆರಡು ತಿಂಗಳು ಈ ಪ್ರಕ್ರೀಯೆ ನಡೆಯಲಿದೆ.

ರಾಜೇಶ್, ಉಪವಿಭಾಗಾಧಿಕಾರಿ, ಸಕಲೇಶಪುರ ಉಪವಿಭಾಗ

*ಹೇಳಿಕೆ2

ಬೀದಿನಾಯಿ ಸಂತಾನಹರಣ ಚಿಕಿತ್ಸೆಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಯೋಜನೆ ಜಾರಿಗೊಂಡಿದೆ.

ಸಿಮೆಂಟ್ ಮಂಜು ಶಾಸಕ