ಸಾರಾಂಶ
ಎಚ್.ಕೆ.ಅಶ್ವತ್ಥ್ ಹಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯಮಹಿಳೆಯರ ಆರೋಗ್ಯಕ್ಕಾಗಿ ಗ್ರಾಮ ಪಂಚಾಯ್ತಿಯಲ್ಲಿ ಶೇ.5 ರಷ್ಟು ಹಣವನ್ನು ಮೀಸಲಿಟ್ಟು ಪಂಚಾಯ್ತಿ ವ್ಯಾಪ್ತಿಯ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಿಸುವ ಮೂಲಕ ತಾಲೂಕಿನ ಬೇವುಕಲ್ಲು ಪಂಚಾಯ್ತಿ ಜಿಲ್ಲೆಯಲ್ಲೇ ಮಾದರಿಯಾಗಿ ಕೆಲಸ ಮಾಡುತ್ತಿದೆ.
ಮಹಿಳೆಯರ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರದಲ್ಲಿ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮಾಡಿದ ಬೇವುಕಲ್ಲು ಜಿಲ್ಲೆಯ ಏಕೈಕ ಗ್ರಾಮ ಪಂಚಾಯ್ತಿಯಾಗಿದೆ.ಪ್ರಸ್ತುತ ಮಹಿಳೆಯರ ಆರೋಗ್ಯದ ಕುರಿತು ಅನೇಕ ಕಾರ್ಯಕ್ರಮ, ಶಿಬಿರಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಆದರೂ ಬಹುತೇಕ ಆಸ್ಪತ್ರೆಗಳಲ್ಲಿ ಮಹಿಳಾ ರೋಗಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಮಹಿಳೆಯರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಕಾರಣವಾಗಿದೆ.
ಸರ್ಕಾರ ಅನೇಕ ಯೋಜನೆ ಜಾರಿಗೆ ತರುತ್ತವೆ. ಪ್ರತಿಯೊಬ್ಬರಿಗೂ ಯೋಜನೆಗಳು ತಲುಪಲು ಸ್ಥಳೀಯ ಗ್ರಾಮ ಪಂಚಾಯ್ತಿಗಳ ಪಾತ್ರ ಅತೀ ಮುಖ್ಯ. ಜೊತೆಗೆ ಅಧಿಕಾರಿಗಳ ಜೊತೆಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಕೈ ಜೋಡಿಸುವ ಅಗತ್ಯವಿದೆ.ಗ್ರಾಪಂನಲ್ಲಿ ಯಾವುದೇ ಅಭಿವೃದ್ಧಿ ಕ್ರಿಯಾ ಯೋಜನೆ ತಯಾರಿಸಬೇಕಾದರೂ ಪ್ರಮುಖವಾಗಿ ಬಹುತೇಕ ಸದಸ್ಯರ ಆಸಕ್ತಿ ರಸ್ತೆ ಮತ್ತು ಚರಂಡಿಯೇ ಆಗಿರುತ್ತದೆ. ಆದರೆ, ಬೇವುಕಲ್ಲು ಗ್ರಾಪಂ ಸದಸ್ಯರು ಇದಕ್ಕೆ ಭಿನ್ನ ಆಲೋಚನೆ ಮೂಲಕ ಜಿಲ್ಲೆಯ ಇತರೆ ಪಂಚಾಯ್ತಿ ಸದಸ್ಯರಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ.
ಗ್ರಾಪಂ ಅನುದಾನವನ್ನು ಮಹಿಳಾ ಸಬಲೀಕರಣ ಬಳಸಲು ನಿರ್ಧರಿಸಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ನಂತರ ಗ್ರಾಪಂ ಅಧ್ಯಕ್ಷೆ ಪ್ರತಿಭಾ, ಮಹಿಳಾ ಸದಸ್ಯರಾದ ಸುಮಾ, ಸಂಗೀತಾ, ಪುಟ್ಟತಾಯಮ್ಮ, ಮಹೀಶಿ, ಮಹದೇವಮ್ಮ, ರಾಜೇಶ್ವರಿ, ಲತಮ್ಮ, ಪೂರ್ಣಿಮಾ ಅವರು ಮಹಿಳೆಯರಿಗೆ ಅನುಕೂಲಕ್ಕಾಗಿ ಮುಟ್ಟಿನ ಕಪ್ ನೀಡುವ ಆಲೋಚನೆ ಮಾಡಿದ್ದು, ಗಮನ ಸೆಳೆಯಿತು.ಗ್ರಾಮೀಣ ಪ್ರದೇಶದ ಬಹುತೇಕ ಮಹಿಳೆಯರಿಗೆ ಮುಟ್ಟಿನ ಕಪ್ ಬಳಕೆ ಹೊಸತು. ಇನ್ನು ಎಷ್ಟೋ ಮಂದಿ ಪ್ಯಾಡ್ ಬಳಕೆ ಮಾಡಲು ಹಿಂದು- ಮುಂದು ನೋಡುತ್ತಾರೆ. ಈ ನಡುವೆ ಮುಟ್ಟಿನ ಕಪ್ ಬಳಸುವಂತೆ ಗ್ರಾಮಗಳ ಮಹಿಳೆಯರು, ಯುವತಿಯರಲ್ಲಿ ಅರಿವು ಮೂಡಿಸುವುದು ಸವಾಲಿನ ಕೆಲಸವಾಯಿತು.
ಈ ವೇಳೆ ಗ್ರಾಪಂ ಪಿಡಿಒ ಪ್ರದೀಪ್ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹಾಯ ಪಡೆದು ಮಹಿಳಾ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮುಟ್ಟಿನ ಕಪ್ ಬಳಕೆ, ಮಹಿಳಾ ಆರೋಗ್ಯ ಬಗ್ಗೆ ಅರಿವು ಮೂಡಿಸಲು ಗ್ರಾಪಂ ಉಪಾಧ್ಯಕ್ಷ ರಾಜೇಶ್, ಸದಸ್ಯರಾದ ದಕ್ಷಿಣಮೂರ್ತಿ, ಶಿವಕುಮಾರ್ ಸ್ವಾಮಿ, ನಾಗರಾಜ್, ಶಿವಲಿಂಗಯ್ಯ, ಶಿವಕುಮಾರ್, ಉಮೇಶ್, ಶಿವಣ್ಣ ಜವನಹಳ್ಳಿ, ಶಿವಣ್ಣ ಮಲ್ಲೇನಹಳ್ಳಿ ಅವರು ಗ್ರಾಮವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.ಮಹಿಳಾ ಸ್ವ- ಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಗ್ರಾಪಂನಿಂದ ಆಯೋಜಿಸಿದ್ದ ಆರೋಗ್ಯ ಕಾರ್ಯಕ್ರಮಗಳಿಗೆ ಬರುವಂತೆ ಆಹ್ವಾನಿಸಿ ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮತ್ತು ಬಳಕೆ ಹಾಗೂ ಮಹಿಳಾ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾ ಮನೆ ಮನೆಗೂ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಸುಮಾರು 2.04 ಲಕ್ಷ ರು. ವೆಚ್ಚದಲ್ಲಿ ಗ್ರಾಪಂ ವ್ಯಾಪ್ತಿ ಬರುವ ಬೇವುಕಪ್ಪು, ಬೇವುಕಲ್ಲು ಕೊಪ್ಪಲು, ಬಂಕನಹಳ್ಳಿ, ಬಿ.ಹೊನ್ನೇನಹಳ್ಳಿ, ಹಟ್ನ, ಕೊಂತ್ತೇಗೌಡನಕೊಪ್ಪಲು, ಗಿಡ್ಡೇಗೌಡನಕೊಪ್ಪಲು, ಜವನಹಳ್ಳಿ, ಮಲ್ಲೇನಹಳ್ಳಿ, ಛತ್ರನಹಳ್ಳಿ, ಬಿಲ್ಲೇನಹಳ್ಳಿಗಳ 602 ಮಹಿಳೆಯರು, ಯುವತಿಯರು, ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ವಿತರಿಸಲಾಗಿದೆ.ಈ ಮೂಲಕ ಮಂಡ್ಯ ತಾಲೂಕಿನ ಬೇವುಕಲ್ಲು ಗ್ರಾಪಂ ವಿಶಿಷ್ಟ ಆರೋಗ್ಯ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮಾಡಿದ ಜಿಲ್ಲೆಯ ಏಕೈಕ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಅವರು ಕೂಡ ಇತ್ತೀಚೆಗೆ ನಡೆದ ಪಂಚಾಯ್ತಿ ಸಿಬ್ಬಂದಿ ತರಬೇತಿಯಲ್ಲಿ ಎಲ್ಲಾ ಗ್ರಾಪಂಗಳು ಮುಟ್ಟಿನ ಕಪ್ ವಿತರಣೆ ಮಾಡಲು ಕ್ರಮವಹಿಸಲು ಸೂಚಿಸಿರುವುದು ಬೇವುಕಲ್ಲು ಪಂಚಾಯ್ತಿ ಕಾರ್ಯಕ್ಕೆ ಸಿಕ್ಕ ಗೌರವವಾಗಿದೆ.ಮಹಿಳೆಯರ ಆರೋಗ್ಯದ ವಿಚಾರವಾಗಿ ಪಿಡಿಒ ಪ್ರದೀಪ್ ಅವರು ನೀಡಿದ ಸಲಹೆಯಿಂದ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮಾಡಲು ಸಹಕಾರಿಯಾಗಿದೆ. ಯಾವಾಗಲೂ ವಿಭಿನ್ನ, ವಿಶಿಷ್ಟ ಆಲೋಚನೆ ಮೂಲಕ ಕ್ರಿಯಾಶೀಲವಾಗಿ ಕೆಲಸ ಮಾಡುವ ಅಧಿಕಾರಿಗಳಿಂದ ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ.
- ಪ್ರತಿಭಾ, ಅಧ್ಯಕ್ಷರು, ಬೇವುಕಲ್ಲು ಗ್ರಾಪಂತಮ್ಮ ಆಡಳಿತದಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮಗಳ ಆಯೋಜನೆಯಿಂದ ಮಹಿಳೆಯರಲ್ಲಿ ಗ್ರಾಪಂ ಬಗ್ಗೆ ಗೌರವ ಇಮ್ಮಡಿಗೊಂಡಿದೆ. ಇದಕ್ಕೆ ಕಾರಣರಾದ ಗ್ರಾಪಂ ಪಿಡಿಒಗೆ ಅಭಿನಂದನೆ ಸಲ್ಲಿಸುತ್ತೇನೆ.- ರಾಜೇಶ್, ಉಪಾಧ್ಯಕ್ಷರು, ಬೇವುಕಲ್ಲು ಗ್ರಾಪಂಯಾವುದೇ ಕಾರ್ಯಕ್ರಮಗಳಾಗಲಿ ಅವುಗಳು ಯಶಸ್ವಿಯಾಗಲು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಹಕಾರ ಅಗತ್ಯ. ಇದಕ್ಕೆ ಬೇವುಕಲ್ಲು ಪಂಚಾಯ್ತಿ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಕೈ ಜೋಡಿಸಿದ್ದರಿಂದ ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಯೋಜನೆ ರೂಪಿಸಲು ಸಹಕಾರಿಯಾಯಿತು.
- ಸಿ.ಎಸ್.ಪ್ರದೀಪ್, ಗ್ರಾಪಂ ಪಿಡಿಒ