ಹೊಸ ಕಾಯ್ದೆ ಪ್ರಕಾರ 21 ರೀತಿಯ ಅಂಗವೈಕಲ್ಯತೆ ಗುರುತಿಸಿ: ನಂಬುರಾಜನ್

| Published : Jan 08 2024, 01:45 AM IST

ಹೊಸ ಕಾಯ್ದೆ ಪ್ರಕಾರ 21 ರೀತಿಯ ಅಂಗವೈಕಲ್ಯತೆ ಗುರುತಿಸಿ: ನಂಬುರಾಜನ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಹಲವು ಹಳ್ಳಿಗಳು, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರ ಮಧ್ಯೆ ಲಕ್ಷಾಂತರ ಮಂದಿ ಅಂಗವಿಕಲರು ಇದ್ದಾರೆ. ಅಂತಹ ಅಂಗವಿಕಲರನ್ನು ಗುರುತಿಸಿ ಸಮೀಕ್ಷೆ ಮಾಡುವ ಕೆಲಸ ಆಗಿಲ್ಲ. ಹೊಸ ಕಾಯ್ದೆ ಪ್ರಕಾರ ವೈಜ್ಞಾನಿಕ ರೀತಿಯಲ್ಲಿ ಅಂಗವೈಕಲ್ಯ ಗುರುತಿಸುವ ಕೆಲಸ ನಡೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯದೇಶಾದ್ಯಂತ ವೈಜ್ಞಾನಿಕ ರೀತಿಯಲ್ಲಿ ಅಂಗವಿಕಲರನ್ನು ಗುರುತಿಸುವ ಕೆಲಸವಾಗಬೇಕು ಎಂದು ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಕಾರ್ಯಾಧ್ಯಕ್ಷ ತಮಿಳುನಾಡಿನ ನಂಬುರಾಜನ್ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದ ಕುಮಾರ್ ವೇದಿಕೆಯಲ್ಲಿ ಆಯೋಜಿಸಿದ್ದ ಅಂಗವಿಕಲರ ಹಾಗೂ ಪಾಲಕರ 3 ರಾಜ್ಯ ಸಮ್ಮೇಳನದಲ್ಲಿ ಮಾತನಾಡಿ, ದೇಶದಲ್ಲಿ ನಡೆದ 2011 ನೇ ಜನಗಣತಿ ಸಮೀಕ್ಷೆ ಪ್ರಕಾರ 2.68 ಕೋಟಿ ಜನ ಅಂಗವಿಕಲರಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕ ಮತ್ತು ಆಧಾರ ರಹಿತವಾಗಿದೆ ಎಂದು ದೂರಿದರು. ದೇಶದ ಹಲವು ಹಳ್ಳಿಗಳು, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರ ಮಧ್ಯೆ ಲಕ್ಷಾಂತರ ಮಂದಿ ಅಂಗವಿಕಲರು ಇದ್ದಾರೆ. ಅಂತಹ ಅಂಗವಿಕಲರನ್ನು ಗುರುತಿಸಿ ಸಮೀಕ್ಷೆ ಮಾಡುವ ಕೆಲಸ ಆಗಿಲ್ಲ. ಹೊಸ ಕಾಯ್ದೆ ಪ್ರಕಾರ ವೈಜ್ಞಾನಿಕ ರೀತಿಯಲ್ಲಿ ಅಂಗವೈಕಲ್ಯ ಗುರುತಿಸುವ ಕೆಲಸ ನಡೆಯಬೇಕು ಎಂದರು.

ಕೇವಲ 2011 ರ ಸಮೀಕ್ಷೆ ಆಧಾರವಾಗಿಟ್ಟುಕೊಂಡು ಹಳೆ ಕಾಯ್ದೆಯ ಪ್ರಕಾರ 7 ರೀತಿಯ ಅಂಗವಿಕಲತೆಯನ್ನು ಮಾತ್ರ ಗುರುತಿಸಲಾಗಿದೆ. ಹೊಸ ಕಾಯ್ದೆ ಪ್ರಕಾರ 21 ರೀತಿಯ ಅಂಗವೈಕಲ್ಯತೆ ಗುರುತಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಹೊಸ ಕಾಯ್ದೆಯ ಪ್ರಕಾರ ಅಂಗವೈಕಲ್ಯತೆ ಗುರುತಿಸಿ ಸವಲತ್ತುಗಳನ್ನು ಕೊಡುವ ಕೆಲಸ ಮಾಡಬೇಕಾಗಿದೆ ಎಂದರು. ಕಳೆದ ಮಾರ್ಚ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಸಮೀಕ್ಷಾ ವರದಿಯಲ್ಲಿನ ಅಂಶಗಳು ಆತಂಕಕಾರಿಯಾಗಿವೆ. ಅದರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.16 ರಷ್ಟು ಅಂಗವಿಕಲರು ಇದ್ದಾರೆ. ಈ ಅಂಗವಿಕಲರ ಸಮಸ್ಯೆಗಳ ಬಗ್ಗೆ ಹೇಳುತ್ತಾ ಬಹಳಷ್ಟು ಅಂಗವಿಕಲರು 20ನೇ ವಯಸ್ಸಿನೊಳಗೆ ಸಾಯುತ್ತಿದ್ದಾರೆ. ಭಾರತದಲ್ಲಿ ಬದುಕುವ ವಯಸ್ಸು 70 ವರ್ಷ ಇದ್ದರೆ ಅಂಗವಿಕಲರ ಸರಾಸರಿ ಆಯಸ್ಸು 20 ವರ್ಷ ಮಾತ್ರ ಎಂದು ಕಳವಳ ವ್ಯಕ್ತಪಡಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಎನ್.ನಾಗರಾಜು ಮಾತನಾಡಿ, ರಾಜ್ಯದಲ್ಲಿ ಸಾಮಾಜಿಕ,ಆರ್ಥಿಕ, ರಾಜಕೀಯ ನ್ಯಾಯದ ಪರಿಕಲ್ಪನೆಯಲ್ಲಿ ಅಂಗವಿಕಲರಿಗೆ ಸ್ವತಂತ್ರ ಜೀವನ ನಡೆಸುವ, ಸಮಾನತೆಯಿಂದ ಬಾಳುವ ಅವಕಾಶ ಸಿಕ್ಕಿಲ್ಲ ಎಂದು ವಿಷಾದಿಸಿದರು. ಅಂಗವಿಕಲರನ್ನು ಸೋದರತ್ವದಿಂದ ಕಾಣುತ್ತಿಲ್ಲ. ಅಂಗವಿಕಲರಿಗೆ ಯಾವುದೇ ಸೌಲಭ್ಯಗಳನ್ನು ಕೊಡುತ್ತಿಲ್ಲ. ಶಿಕ್ಷಣ ಉದ್ಯೋಗ ಜೊತೆಗೆ ಘನತೆಯ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು. ಪ್ರತಿ ತಿಂಗಳು ಕನಿಷ್ಠ 5 ಸಾವಿರ ರು. ಜೀವನ ನಿರ್ವಹಣಾ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು. ಸಮಾರಂಭಕ್ಕೂ ಮುನ್ನ ಹೆಲೆನ್ ಕೆಲರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ನಗರದ ಸಿಲ್ವರ್ ಜುಬಿಲಿ ಪಾರ್ಕಿನಿಂದ ಸಮ್ಮೇಳನದ ಆವರಣದವರೆಗೆ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾಧು, ಮುಖಂಡ ಕೃಷ್ಣೆಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ರಂಗಪ್ಪ ದಾಸರ್, ಮಂಜುನಾಥ ಹೆಬ್ಬಾರ್, ರಾಜನ್, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ದೊಡ್ಡ ಮರಿಗೌಡ, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ವೆಂಕಟೇಶ್, ಯಶಸ್ವಿ, ವೆಂಕಟೇಶ್ ಕೋಣಿ, ಕರಿಯಪ್ಪ ಅಚ್ಚೊಳ್ಳಿ, ರೈತ ಸಂಘದ ಅಧ್ಯಕ್ಷ ಎ.ಎಲ್. ಕೆಂಪೂಗೌಡ ಉಪಸ್ಥಿತರಿದ್ದರು.6ಕೆಎಂಎನ್ ಡಿ36

ಮಂಡ್ಯದಲ್ಲಿ ನಡೆದ ಅಂಗವಿಕಲರ ಹಾಗೂ ಪಾಲಕರ 3 ರಾಜ್ಯ ಸಮ್ಮೇಳನದಲ್ಲಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಕಾರ್ಯಾಧ್ಯಕ್ಷ ತಮಿಳುನಾಡಿನ ನಂಬುರಾಜನ್ ಮಾತನಾಡಿದರು.