ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಬೆಳಗೋಡು ಹೋಬಳಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಪಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಬೆಳಗೋಡು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿ, ಬೆಳಗೋಡು ಹೋಬಳಿ ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ಬಸ್ ನಿಲ್ದಾಣ ಇಲ್ಲದ ಹಿನ್ನೆಲೆಯಲ್ಲಿ ಸುಮಾರು ೪.೫ ಲಕ್ಷ ರು. ವೆಚ್ಚದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗಿದೆ. ಇದೇ ರೀತಿ ಕೂಲಿ ಕಾರ್ಮಿಕ ಮಹಿಳೆಯರು ಹೆಚ್ಚಿರುವ ಬೆಳಗೋಡು ಗ್ರಾಮದ ಮಹಿಳೆಯರ ಅನುಕೂಲಕ್ಕಾಗಿ ಕೂಸಿನ ಮನೆಯನ್ನು ತೆರೆಯಲಾಗಿದೆ. ಇದು ಶಿಶುಪಾಲನಾ ಕೇಂದ್ರವಾಗಿದ್ದು ೩ ವರ್ಷದ ಒಳಗಿನ ಮಕ್ಕಳನ್ನು ಬಿಡಬಹುದಾಗಿದೆ. ಇದರಿಂದ ಕೂಲಿ ಕಾರ್ಮಿಕ ಮಹಿಳೆಯರು ಕೆಲಸಕ್ಕೆ ನೆಮ್ಮದಿಯಾಗಿ ಹೋಗಿ ಬರಬಹುದಾಗಿದೆ. ಇದನ್ನು ಕೂಲಿ ಕಾರ್ಮಿಕ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ವ್ಯಾಪ್ತಿಯ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಶಾಸಕರು ವಿತರಿಸಿದರು.ಬೆಳಗೋಡು ಗ್ರಾ.ಪಂ ವ್ಯಾಪ್ತಿಯ ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇದರಿಂದಾಗಿ ಗ್ರಾಮದ ಬಡವರು, ಕೂಲಿಕಾರ್ಮಿಕರು ದುಡಿದ ಸಂಪೂರ್ಣ ಹಣವನ್ನು ಮದ್ಯಪಾನ ಮಾಡಲು ವಿನಿಯೋಗಿಸುತ್ತಿದ್ದಾರೆ. ಕೂಡಲೆ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಕೆಲವು ಸದಸ್ಯರು ಶಾಸಕರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಶಾಸಕರು ಪಿಡಿಒ ಲಕ್ಷ್ಮೀನರಸಯ್ಯರವರ ಕೇಳಿದಾಗ ಸಾರ್ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದರು. ಇದಕ್ಕೆ ಗರಂ ಆದ ಶಾಸಕರು "ಅಲ್ಲರೀ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಜಿಲ್ಲಾಧಿಕಾರಿಗಳು ಬರಬೇಕಿನ್ರಿ, ಅಬಕಾರಿ ಇಲಾಖೆಯ ಗಮನಕ್ಕೆ ತನ್ನಿ ಹಾಗೂ ನೇರವಾಗಿ ನೀವೇ ಕ್ರಮ ತೆಗೆದುಕೊಳ್ಳಿ " ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ಧರಣೇಶ್, ಉಪಾಧ್ಯಕ್ಷೆ ಪ್ರೇಮ, ಗ್ರಾ.ಪಂ ಸದಸ್ಯರಾದ ಮಂಜುಳಾ, ರುದ್ರಕುಮಾರ್, ಉಮಾ ಜಗದೀಶ್, ಸೇರಿದಂತೆ ಇತರ ಸದಸ್ಯರು, ತಾ.ಪಂ ಇ.ಒ ರಾಮಕೃಷ್ಣ, ತಾ.ಪಂ ಸಹಾಯಕ ನಿರ್ದೇಶಕ ಆದಿತ್ಯ, ಬಿಜೆಪಿ ಮುಖಂಡ ದೊಡ್ಡದೀಣೆ ಜಯಪ್ರಕಾಶ್ ಹಾಜರಿದ್ದರು.