ಕನ್ನಡಪ್ರಭ ವಾರ್ತೆ ರಾಮನಾಥಪುರ

ಹಾಸನದ ಹೆಸರಾಂತ ಶಾಹಿ ಸಂಸ್ಥೆ ಪ್ರತಿವರ್ಷದ ಸಿಎಸ್ಆರ್‌ ಅನುದಾನದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರ ಹಾಗೂ ಶಾಲಾ ಕಾಲೇಜುಗಳಿಗೆ ಅಗತ್ಯವಿರುವ ಪರಿಕರ ಹಾಗೂ ಯಂತ್ರೋಪಕರಗಳನ್ನು ವಿತರಣೆ ಮಾಡುತ್ತಿರುವುದು ಅತ್ಯುತ್ತಮ ಸಮಾಜಮುಖಿ ಕಾರ್ಯವಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

ದೊಡ್ಡಮಗ್ಗೆ ಹೋಬಳಿ ಹೆತ್ತಗೌಡನಹಳ್ಳಿ ಗ್ರಾಮದಲ್ಲಿ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಅರಕಲಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ ನೀಡಿದ್ದರು. ಅದರ ಹಿಂದಿನ ವರ್ಷ ಸಂತೆಮರೂರು ಪ್ರಾಥಮಿಕ ಶಾಲೆಗೆ ಹೈಟೆಕ್ ಲ್ಯಾಬ್ ಕೊಡುಗೆಯಾಗಿ ಇದೇ ಸಂಸ್ಥೆ ನೀಡಿದೆ. ಮುಂದುವರಿದಂತೆ ಈ ಸಾಲಿನಲ್ಲಿ ಹೆತ್ತಗೌಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಅತ್ಯವಶ್ಯವಿರು ರಕ್ತ ಪರೀಕ್ಷೆಯ ಸಿಬಿಸಿ ಉಪಕರಣಗಳನ್ನು ನೀಡಿರುವುದು. ಗ್ರಾಮೀಣ ಭಾಗದ ಬಡಜನರಿಗೆ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೆತ್ತಗೌಡನಹಳ್ಳಿ ಗ್ರಾಮದಲ್ಲಿರುವ ಈ ಆಸ್ಪತ್ರೆಗೆ ಹೆಚ್ಚಿನ ಜನರು ಚಿಕಿತ್ಸೆಗೆಂದ ಬರುತ್ತಾರೆ. ಈ ಹಿಂದೆ ಪ್ರಥಮ ಹಂತದ ರಕ್ತಪರೀಕ್ಷೆ ನಡೆಸಲಾಗುತ್ತಿರು. ಹೊಸದಾಗಿ ಸಿಬಿಸಿ ಉಪಕರಣ ಇರುವುದರಿಂದ ಮಲೇರಿಯಾ,ಡೆಂಗ್ಯೂ ಹಾಗು ಇತರೆ ರಕ್ತದ ಪರೀಕ್ಷೆಗೆಂದು ತಾಲೂಕು ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ.ಈ ಆಸ್ಪತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಇದ್ದು,ಇದಕ್ಕೆ ಧಕ್ಕೆಯಾಗದಂತೆ ವೈದ್ಯರು,ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕೆಂದು ಅವರು ಸೂಚನೆ ನೀಡಿದರು.

ಹಾಸನದ ಶಾಹಿ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿ ನಮ್ಮ ಸಂತೆಮರೂರು ಗ್ರಾಮದವರೇ ಆದ ನಮ್ಮ ಸ್ನೇಹಿತರ ಮಗ ವಿದ್ಯಾರಾಜೇಅರಸು ಅವರು ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಪ್ರತಿವರ್ಷದ ಸಿಎಸ್‌ಆರ್ ಅನುದಾನದಲ್ಲಿ ಹೆಚ್ಚಿನ ಪಾಲು ಹುಟ್ಟಿದ ತಾಲೂಕಿಗೆ ಕೊಡುತ್ತಾ ಬರುತ್ತಿದ್ದಾರೆ. ಇದಕ್ಕಾಗಿ ಸಂಸ್ಥೆಯ ಮುಖ್ಯಸ್ಥರು, ಅಧಿಕಾರಿಗಳು, ಸಿಬ್ಬಂದಿಗೆ ತಾಲೂಕಿನ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.ಗ್ರಾಮೀಣ ಪ್ರದೇಶದ ಜನರಿಗೆ ತುರ್ತಾಗಿ ಗ್ರಾಮೀಣ ಸೇವೆ ಒದಗಿಸುವ ಉದ್ದೇಶದಿಂದ ತುರ್ತಾಗಿ ರಕ್ತ ಪರೀಕ್ಷೆ ಯಂತ್ರಗಳನ್ನು ನೀಡುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಶಾಹಿ ಸಂಸ್ಥೆಯ ಮುಖ್ಯಸ್ಥರಾದ ವಿದ್ಯಾರಾಜೇ ಅರಸ್ ಅವರು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ,ಅರಕಲಗೂಡು ರೋಟರಿ ಕ್ಲಬ್ ಅಧ್ಯಕ್ಷರು ಸದಸ್ಯರು ಪ್ರಾಥಮಿಕ ಆರೋಗ್ಯ ಕೇಂದ್ರ ರಕ್ಷ ಸಮಿತಿಯ ಉಪಾಧ್ಯಕ್ಷರು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.