ಸಾರಾಂಶ
ಚಿಕ್ಕಮಗಳೂರು: ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಶಾಸಕ ಆರ್.ಮಹೇಶ್ ಉಪಸ್ಥಿತಿಯಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಿ ರಾಜ್ಯ ಸಮಿತಿಗೆ ವರದಿಯನ್ನು ನೀಡಲಿದ್ದಾರೆ. ಬಹುತೇಕ ಜ.5ರಂದು ಜಿಲ್ಲಾಧ್ಯಕ್ಷರ ಪಟ್ಟಿ ಅಂತಿಮವಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆಯ ಕಸರತ್ತು ಶುಕ್ರವಾರ ಅಧಿಕೃತವಾಗಿ ಆರಂಭಗೊಂಡಿತು.ರೇಸಲ್ಲಿ ಯಾರಿದ್ದಾರೆ?: ಪ್ರತಿ ಮೂರ ವರ್ಷಕ್ಕೊಮ್ಮೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧ್ಯಕ್ಷರ ಅವಧಿ ಮೂರು ವರ್ಷಗಳು. ಕಳೆದ ಅವಧಿಯಲ್ಲಿ ಎಚ್.ಸಿ.ಕಲ್ಮರುಡಪ್ಪ ಅವರು ಜಿಲ್ಲಾಧ್ಯಕ್ಷರಾಗಿದ್ದರು. ವಿಧಾನಸಭಾ ಚುನಾವಣಾ ವರ್ಷ ಆಗಿದ್ದರಿಂದ ಅವರ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಅಂದರೆ, 3 ವರ್ಷದ ಬದಲಿಗೆ ಅವರು 4 ವರ್ಷ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿದ್ದರು.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಆಕಾಂಕ್ಷಿಗಳ ಸಾಲಿನಲ್ಲಿ ಸುಮಾರು ಒಂದು ಡಜನ್ ಮುಖಂಡರು ಇದ್ದಾರೆ. ಆದರೆ, ಮುಂದಿನ ಸವಾಲುಗಳನ್ನು ಗಮನದಲ್ಲಿರಿಸಿ ನೂತನ ಅಧ್ಯಕ್ಷರ ಆಯ್ಕೆಯನ್ನು ಫೈನಲ್ ಮಾಡುವ ಅನಿವಾರ್ಯತೆ ಇದೆ. ಕೊನೆ ಹಂತದಲ್ಲಿ ಪ್ರಮುಖವಾಗಿ ದೇವರಾಜ್ ಶೆಟ್ಟಿ, ಪ್ರೇಮ್‌ಕುಮಾರ್ ಹಾಗೂ ರವೀಂದ್ರ ಬೆಳವಾಡಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇವರು ಎರಡು ಅವಧಿಗಳ ಕಾಲ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರೇಮ್‌ಕುಮಾರ್ ಅವರು ಹಾಲಿ ಚಿತ್ರದುರ್ಗದ ಜಿಲ್ಲಾ ಉಸ್ತುವಾರಿಯಾಗಿದ್ದಾರೆ.ಬಿಜೆಪಿಯ ಮಾಜಿ ಶಾಸಕರೊಂದಿಗೆ ನಿಕಟವಾದ ಸಂಪರ್ಕ ಇರುವ ಹಾಗೂ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಇರುವವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ. ಬರೀ ಇಷ್ಟೆ ಅಲ್ಲಾ, ಸಂಸದರಾದ ಶೋಭಾ ಕರಂದ್ಲಾಜೆ ಅವರ ಅಭಿಪ್ರಾಯ ಸಹ ಪಡೆಯುವುದರಿಂದ ಯುವಕರು, ಸಮರ್ಥರು, ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವವರನ್ನು ಆಯ್ಕೆ ಮಾಡುವುದು ಪಕ್ಷದ ಉದ್ದೇಶವಾಗಿದೆ.
ಸವಾಲುಗಳು: ಬಿಜೆಪಿ ನೂತನ ಅಧ್ಯಕ್ಷರ ಮೇಲೆ ಹಲವು ಸವಾಲುಗಳು ಇವೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಎಲ್ಲಾ ಐದು ಕ್ಷೇತ್ರಗಳಲ್ಲಿ ಪರಾಭವಗೊಂಡಿದೆ. 2024ರಲ್ಲಿ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳು ನಡೆಯಲಿವೆ. ಕೆಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು ನಡೆಯಲಿವೆ. ಹಾಗಾಗಿ ಪಕ್ಷದ ನೂತನ ಅಧ್ಯಕ್ಷರ ಮೇಲೆ ದೊಡ್ಡ ಜವಬ್ದಾರಿ ಬೀಳಲಿದೆ.