ಚಿಕ್ಕಮಗಳೂರುಚಿಕ್ಕಮಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ನಿರ್ಮಿಸುವ ಹೊಸ ವೃತ್ತಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ಹೆಸರಿಡಲು ಜಿಲ್ಲಾಡಳಿತದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಭರವಸೆ ನೀಡಿದರು.
ಶಾಸಕ ತಮ್ಮಯ್ಯ ಭರವಸೆ । ಮಹರ್ಷಿ ವಾಲ್ಮೀಕಿ ಜಯಂತಿ ಅಧ್ಯಕ್ಷತೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಿಕ್ಕಮಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ನಿರ್ಮಿಸುವ ಹೊಸ ವೃತ್ತಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ಹೆಸರಿಡಲು ಜಿಲ್ಲಾಡಳಿತದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಭರವಸೆ ನೀಡಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಈಗಿನ ಪ್ರತಿಯೊಂದು ವೃತ್ತಕ್ಕೂ ಮಹನೀಯರ ಹೆಸರಿಡಲಾಗಿದೆ. ಅವುಗಳ ಹೆಸರು ಬದಲಿಸಲು ಮುಂದಾದರೆ ಅನಗತ್ಯ ಗೊಂದಲ ಸೃಷ್ಟಿಯಾಗಬಹುದು. ಹೀಗಾಗಿ, ಮುಂದಿನ ದಿನಗಳಲ್ಲಿ ನಿರ್ಮಿಸುವ ಹೊಸ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ಕ್ರಮ ವಹಿಸಲಾಗುವುದು ಎಂದರು.ಬುದ್ಧ, ಬಸವ, ಅಂಬೇಡ್ಕರ್ ಹಾಗೂ ವಾಲ್ಮೀಕಿಯಂತಹ ಮಹಾಪುರುಷರನ್ನು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸಬಾರದು. ಶೋಷಿತ ವರ್ಗಗಳ ಏಳಿಗೆ,ಸಮಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಮಹನೀಯರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಶ್ರೀ ರಾಮನ ಆದರ್ಶಗಳು ಹಾಗೂ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ತಪ್ಪು ತಿದ್ದಿಕೊಂಡು ಪಶ್ಚಾತ್ತಾಪದ ಮೂಲಕ ಸರಿದಾರಿಯಲ್ಲಿ ನಡೆವ ಮಹತ್ವವನ್ನು ಅವರ ಜೀವನ ತಿಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ, ರಾಮಾಯಣ ಕೇವಲ ಧಾರ್ಮಿಕ ಗ್ರಂಥವಲ್ಲ, ಅದು ಆದರ್ಶ ಜೀವನದ ಸಂಹಿತೆ. ಶ್ರೀರಾಮನ ಕರ್ತವ್ಯನಿಷ್ಠೆ, ಸೀತೆಯ ಪಾತಿವ್ರತ್ಯ, ಲಕ್ಷ್ಮಣನ ಸೇವೆ ಹಾಗೂ ಭರತನ ತ್ಯಾಗದ ಮೂಲಕ ವಾಲ್ಮೀಕಿ ಜಗತ್ತಿಗೆ ಶ್ರೇಷ್ಠ ಮೌಲ್ಯ ನೀಡಿದ್ದಾರೆ ಎಂದರು. ಸರ್ಕಾರದ ಸೌಲಭ್ಯ ಬಳಸಿಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆ ಮೂಲಕ ತಳಸಮುದಾಯದ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕರಿಸಬೇಕು ಎಂದು ಕರೆ ನೀಡಿದರು.ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ ವಾಲ್ಮೀಕಿ ಅವರ ಆದರ್ಶಗಳು ಆಡಳಿತದಲ್ಲೂ ಅನುಷ್ಠಾನವಾಗಬೇಕು. ಸರ್ಕಾರದ ಯೋಜನೆಗಳು ಕಟ್ಟಕಡೆ ವ್ಯಕ್ತಿಗೂ ತಲುಪಿದಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತಕ್ಕೆ ಆದ್ಯತೆ ನೀಡಬೇಕು ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಅರ್ಹರಿಗೆ ತಲುಪಬೇಕು. ನ್ಯೂಟ್ರಿಷನ್ ಕಿಟ್ ಟೆಂಡರ್ ಸಮಸ್ಯೆ ಪರಿಹರಿಸಿ ಪೂರೈಕೆ ಆರಂಭಿಸಲಾಗಿದೆ. ವಾಲ್ಮೀಕಿ ಭವನದ ನಿಧಾನಗತಿ ಹಾಗೂ ಕಳಪೆ ಕಾಮಗಾರಿ ಕುರಿತು ಶಾಸಕರೊಂದಿಗೆ ಸ್ಥಳ ಪರಿಶೀಲಿಸಿ, ವಿಶೇಷ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಮಕ್ಕಳಲ್ಲಿ ವಾಲ್ಮೀಕಿ ಆದರ್ಶಗಳ ಅರಿವು ಮೂಡಿಸಲು ಪ್ರದರ್ಶನ ಮಳಿಗೆ ಹಾಗೂ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಅಣಜಿ ನಾಗವಂದ ಶ್ರೀ ಮಾರುತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವಿ ಕುಮಾರ್ ಎಚ್.ಇ. ಉಪನ್ಯಾಸ ನೀಡಿದರು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹಾಗೂ ಪಿಎಚ್ಡಿ ಪದವಿ ಪಡೆದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಜಿಲ್ಲಾ ಎಸ್ಪಿ ಜಿತೇಂದ್ರ ಕುಮಾರ್ ದಯಾಮ, ತಹಸೀಲ್ದಾರ್ ರೇಶ್ಮಾ ಶೆಟ್ಟಿ, ಜಿಲ್ಲಾ ವಾಲ್ಮೀಕಿ ನಾಯಕ ಯುವಕ ಸಂಘದ ಅಧ್ಯಕ್ಷ ಜಗದೀಶ್ ಕೋಟೆ ಉಪಸ್ಥಿತರಿದ್ದರು.---ಬಾಕ್ಸ್---ದರೋಡೆ ಕಾಯಕ ಹೇಳಿಕೆಗೆ ಆಕ್ಷೇಪವಾಲ್ಮೀಕಿ ಮಹರ್ಷಿ ಜೀವನ ಕುರಿತು ಮಾತನಾಡುವಾಗ ರತ್ನಾಕರರು ದರೋಡೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು ಎಂದು ಎ.ಎನ್. ಮಹೇಶ್ ಹೇಳಿದ್ದಕ್ಕೆ ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಜಿ.ಕೆ. ಭೀಮಪ್ಪ ವೇದಿಕೆಯಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಾಲ್ಮೀಕಿ ಅವರು ದರೋಡೆ ಕಾಯಕದಲ್ಲಿ ತೊಡಗಿದ್ದರು ಎಂಬುದಕ್ಕೆ ಆಧಾರಗಳಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆ ನೀಡಬಾರದು ಎಂದು ಆಕ್ಷೇಪಿಸಿದರು. ಇದೇ ವೇಳೆ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿರುವುದಕ್ಕೂ ಬೇಸರ ವ್ಯಕ್ತಪಡಿಸಿದರು.