ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಪಡೆಯುವ ರೈತರು ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲ ಪಡೆದಿಲ್ಲ ಎಂಬ ದೃಢೀಕರಣ ಪತ್ರ ಸಲ್ಲಿಸಬೇಕೆಂಬ ಕೃಷಿ ಇಲಾಖೆಯ ಹೊಸ ಆದೇಶ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದ ಶೇ. 90ರಷ್ಟು ರೈತರು ಬೆಳೆ ವಿಮೆಯಿಂದ ವಂಚಿತರಾಗುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೆಲವು ಜಿಲ್ಲೆಗಳಲ್ಲಿ ಸಾಲ ಪಡೆದ ರೈತರು ಬ್ಯಾಂಕ್‌ಗಳಲ್ಲಿ ಅರ್ಜಿಗಳನ್ನು ಸಲ್ಲಿಸಿ, ನಂತರ ಅದೇ ಬೆಳೆ ಮತ್ತು ಜಮೀನಿಗೆ ಸಂಬಂಧಿಸಿ ಈ ಯೋಜನೆಯಡಿ ಸಾಲ ಪಡೆಯದ ರೈತರಾಗಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರದ ಪತ್ರದನ್ವಯ ಪಿಎಂಎಫ್‌ಬಿವೈ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ಸಾಲ ಪಡೆಯದ ರೈತರು ಕಡ್ಡಾಯವಾಗಿ ಸ್ವಯಂ-ಘೋಷಣೆಯನ್ನು ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಆದೇಶ ಹೊರಡಿಸಿದೆ. ಆದ್ದರಿಂದ ಬೆಳೆ ವಿಮೆಯಡಿ ಅಧಿಸೂಚಿತ ಬೆಳೆಗೆ ನೋಂದಾಯಿಸಿಕೊಳ್ಳಲು ಯಾವುದೇ ವಾಣಿಜ್ಯ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ಯಾವುದೇ ಕೃಷಿ ಸಾಲ ಮಂಜೂರಾಗಿರುವುದಿಲ್ಲ ಎಂದು ರೈತರು ಸ್ವಯಂ ದೃಢೀಕರಣ ಸಲ್ಲಿಸಬೇಕಿದೆ. ರೈತರು ಸಲ್ಲಿಸಿದ ದೃಢೀಕರಣ ಸುಳ್ಳು ಎಂದು ಸಾಬೀತಾದರೆ ವಿಮಾ ಸಂಸ್ಥೆಯು ರೈತರ ಅರ್ಜಿ ತಿರಸ್ಕರಿಸುವ ಅಧಿಕಾರ ಹೊಂದಲಿದೆ. ಈ ಷರತ್ತು ಒಪ್ಪಿದ್ದೇನೆ ಎಂದು ರೈತರು ಸ್ವಯಂ ದೃಢೀಕರಣ ಸಲ್ಲಿಸಬೇಕಿದೆ. ಆದರೆ, ಇದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಕ್ರಮವು ಅವೈಜ್ಞಾನಿಕವಾಗಿದ್ದು, ಸಾವಿರಾರು ರೈತರು ಬೆಳೆ ವಿಮೆಯಿಂದ ವಂಚಿತರಾಗುವ ಅಪಾಯವಿದೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.ರೈತರ ವಾದವೇನು?: ಬೆಳೆ ಸಾಲದ ಮಾಹಿತಿ, ಬ್ಯಾಂಕ್ ದಾಖಲೆಗಳು ಹಾಗೂ ಬೆಳೆ ವಿಮೆ ಅರ್ಜಿಯಲ್ಲಿನ ಸಣ್ಣಪುಟ್ಟ ತಾಂತ್ರಿಕ ವ್ಯತ್ಯಾಸಗಳನ್ನು ನೆಪವನ್ನಾಗಿ ಮಾಡಿಕೊಂಡು ವಿಮಾ ಕಂಪನಿಗಳು ಪರಿಹಾರವನ್ನು ನಿರಾಕರಿಸುವ ಸಾಧ್ಯತೆ ಹೆಚ್ಚಿದೆ. ಸೈಬರ್ ಕೇಂದ್ರಗಳಲ್ಲಿ ಡೇಟಾ ಎಂಟ್ರಿ ವೇಳೆ ಹೆಸರು, ಆಧಾರ್ ಸಂಖ್ಯೆ ಅಥವಾ ಸರ್ವೆ ಸಂಖ್ಯೆಯಲ್ಲಿ ಉಂಟಾಗುವ ಸಣ್ಣ ತಪ್ಪುಗಳನ್ನೂ ಸುಳ್ಳು ಘೋಷಣೆ ಎಂದು ಪರಿಗಣಿಸಿ ಕ್ಲೇಮ್ ತಿರಸ್ಕರಿಸುವ ಭೀತಿ ವ್ಯಕ್ತವಾಗಿದೆ. ಬ್ಯಾಂಕ್‌ಗಳಲ್ಲಿ ಸಾಲ ಮರುಪಾವತಿಯಾದರೂ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ನವೀಕರಿಸದ ಕಾರಣ ರೈತರಿಗೆ ಅನಗತ್ಯ ತೊಂದರೆ ಉಂಟಾಗಲಿದೆ. ಜಂಟಿ ಖಾತೆ, ಗೇಣಿದಾರ ರೈತರು, ಖಾತೆ ಬದಲಾವಣೆ ಪ್ರಕ್ರಿಯೆಯಲ್ಲಿರುವ ಜಮೀನು, ಎರಡೆರಡು ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವವರು ಹಾಗೂ ಮರುಚಾಲನೆ ಹಂತದಲ್ಲಿರುವ ಸಾಲ ಖಾತೆಗಳ ಕುರಿತು ಸ್ಪಷ್ಟ ಮಾರ್ಗಸೂಚಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ರೈತರು ತಿಳಿಸಿದ್ದಾರೆ.
ಆದೇಶ ಹಿಂಪಡೆಯಲು ಆಗ್ರಹ: ಘೋಷಣಾ ಪತ್ರವನ್ನು ರಾಷ್ಟ್ರೀಯ ಬೆಳೆ ವಿಮೆ ಪೋರ್ಟಲ್‌ಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆಯಿಂದ ಸರ್ವರ್ ಸಮಸ್ಯೆ, ತಪ್ಪು ದಾಖಲೆ ಅಪ್‌ಲೋಡ್, ಅರ್ಜಿ ವಿಳಂಬ ಸೇರಿದಂತೆ ಹಲವು ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ. ಇದರಿಂದ ಬಡ ಹಾಗೂ ಸಣ್ಣ ರೈತರು ಬೆಳೆ ವಿಮೆ ಯೋಜನೆಯಿಂದಲೇ ಹೊರಗುಳಿಯುವ ಅಪಾಯವಿದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ ಈ ಆದೇಶವನ್ನು ತಕ್ಷಣ ಹಿಂಪಡೆದು, ಈಗಾಗಲೇ ಕೃಷಿ ಇಲಾಖೆಯಿಂದ ನೀಡಲಾಗಿರುವ ಎಫ್‌ಐಡಿ ಹಾಗೂ ಆಧಾರ್ ಆಧಾರಿತ ಬಯೋಮೆಟ್ರಿಕ್, ಐರಿಸ್ ಅಥವಾ ಫೇಸ್ ದೃಢೀಕರಣದ ಮೂಲಕವೇ ಬೆಳೆ ವಿಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಜು.31ರವರೆಗೆ ಬೆಳೆ ವಿಮೆ ಕಂತು ತುಂಬಲು ಅವಕಾಶವಿದ್ದು, ಅಷ್ಟರೊಳಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ರೈತರಿಗೆ ವಿಮೆ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕಿದೆ.
ಹಿಂದೆ ಪಡೆದ ಸಾಲವನ್ನು ಚುಕ್ತಾ ಮಾಡಿದ್ದರೂ ಬ್ಯಾಂಕಿನವರು ಅದನ್ನು ಕ್ಲೋಸ್ ಎಂದು ಅಪ್ಡೇಟ್ ಮಾಡದಿದ್ದರೆ ರೈತರು ಸಾಲ ಪಡೆದಿಲ್ಲ ಎಂದು ಸುಳ್ಳು ಘೋಷಣೆ ಮಾಡಿದ್ದಾರೆ ಎಂಬ ಕಾರಣ ನೀಡಿ ಕಟ್ಟಿದ ಪ್ರೀಮಿಯಂ ಹಣವನ್ನು ಮುಟ್ಟುಗೋಲು ಹಾಕಿ ಪರಿಹಾರವನ್ನು ನೀಡದಿರುವ ಸಾಧ್ಯತೆಯಿದೆ. ಸರ್ಕಾರದ ಈ ಆದೇಶ ಪಾಲಿಸಿದರೆ ಶೇ.90ರಷ್ಟು ರೈತರು ವಿಮೆ ಕಂತು ಕಟ್ಟಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸರ್ಕಾರ ವಾರದೊಳಗೆ ಆದೇಶ ಹಿಂಪಡೆದು ರೈತರ ನೆರವಿಗೆ ಬರಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.