ಏಪ್ರಿಲ್‌ ಅಂತ್ಯದೊಳಗೆ ಹೊಸ ಡಿಸಿ ಕಾಂಪ್ಲೆಕ್ಸ್‌ ಲೋಕಾರ್ಪಣೆ: ದಿನೇಶ್‌ ಗುಂಡೂರಾವ್‌

| Published : Apr 06 2025, 01:50 AM IST

ಏಪ್ರಿಲ್‌ ಅಂತ್ಯದೊಳಗೆ ಹೊಸ ಡಿಸಿ ಕಾಂಪ್ಲೆಕ್ಸ್‌ ಲೋಕಾರ್ಪಣೆ: ದಿನೇಶ್‌ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಡೀಲ್‌ನಲ್ಲಿ ನಿರ್ಮಾಗೊಳ್ಳುತ್ತಿರುವ ಜಿಲ್ಲಾಧಿಕಾರಿ ಕಚೇರಿಯ ಹೊಸ ಕಟ್ಟಡ ಕಾಮಗಾರಿ ಏಪ್ರಿಲ್ 20ರ ಒಳಗೆ ಪೂರ್ಣಗೊಳ್ಳಲಿದೆ. ಏಪ್ರಿಲ್‌ ಅಂತ್ಯದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಲೋಕಾರ್ಪಣೆಗೊಳಿಸುವರು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುನಗರದ ಹೊರ ವಲಯದ ಪಡೀಲ್‌ನಲ್ಲಿ ನಿರ್ಮಾಗೊಳ್ಳುತ್ತಿರುವ ಜಿಲ್ಲಾಧಿಕಾರಿ ಕಚೇರಿಯ ಹೊಸ ಕಟ್ಟಡ ಕಾಮಗಾರಿ ಏಪ್ರಿಲ್ 20ರ ಒಳಗೆ ಪೂರ್ಣಗೊಳ್ಳಲಿದೆ. ಏಪ್ರಿಲ್‌ ಅಂತ್ಯದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಲೋಕಾರ್ಪಣೆಗೊಳಿಸುವರು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕಾಮಗಾರಿ ಪ್ರದೇಶಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ಅವರು ಕೆಲಸದ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದರು.ಮುಖ್ಯಮಂತ್ರಿ ಅವರು ಭೇಟಿ ನೀಡುವ ಸಂದರ್ಭ ಜಿಲ್ಲಾಧಿಕಾರಿ ಕಚೇರಿಯ ಹೊಸ ಕಟ್ಟಡ ಉದ್ಘಾಟನೆ ಜೊತೆಗೆ ಒಳಾಂಗಣ ಕ್ರೀಡಾಂಗಣ, ಮೂಡುಬಿದಿರೆಯ ಪ್ರಜಾಸೌಧ ಸಹಿತ ವಿವಿಧ ಯೋಜನೆಗಳ ಉದ್ಘಾಟನೆಯನ್ನು ಅವರು ನೆರವೇರಿಸಲಿದ್ದಾರೆ. ಕಾಮಗಾರಿಯ ಯೋಜನಾ ವೆಚ್ಚ ಆರಂಭದಲ್ಲಿ 56 ಕೋಟಿ ರು. ಇದ್ದುದು, ಈಗ 76 ಕೋಟಿ ರು.ಗೆ ಏರಿಕೆಯಾಗಿದೆ. ಹೆಚ್ಚುವರಿ ಮೊತ್ತ 20 ಕೋಟಿ ರು. ವನ್ನು ಸ್ಮಾರ್ಟ್ ಸಿಟಿ ಯೋಜನೆಯಿಂದ ಬಳಸಿಕೊಳ್ಳಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಸಹಾಯಕ ಆಯುಕ್ತ ಹರ್ಷವರ್ಧನ್, ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜು, ಪಾಲಿಕೆ ಸದಸ್ಯರಾದ ಅನಿಲ್ ಕುಮಾರ್, ಎ.ಸಿ.ವಿನಯರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್ ಮತ್ತಿತರರು ಇದ್ದರು.

ಬಾಕ್ಸ್‌---

ಹೊಸ ಡಿಸಿ ಕಚೇರಿಗೆ ಎಲ್ಲ ಕಚೇರಿಗಳ ಸ್ಥಳಾಂತರ

ಉದ್ಘಾಟನೆಯಾದ ಕೂಡಲೇ ಹಳೆ ಕಟ್ಟಡದಿಂದ ಕಚೇರಿ ವ್ಯವಸ್ಥೆಗಳು ಸ್ಥಳಾಂತರವಾಗಲಿವೆ. ಜಿಲ್ಲಾಧಿಕಾರಿ ಕೊಠಡಿ, ಜಿಲ್ಲಾಧಿಕಾರಿ ಆಪ್ತ ಸಹಾಯಕರು, ಜಿಲ್ಲಾಧಿಕಾರಿಗಳ ನ್ಯಾಯಾಲಯ, ಕಂದಾಯ ಶಾಖೆ, ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಹೆಚ್ಚುವರಿ ಜಿಲ್ಲಾಧಿಕಾರಿಗಳ ಕೊಠಡಿ, ಆಡಳಿತ ಶಾಖೆ, ಟಪ್ಪಾಲು ಶಾಖೆ, ಭೂಮಾಪನ ಇಲಾಖೆ, ಸಭಾಂಗಣ, ಚುನಾವಣೆ ಶಾಖೆ, ಧಾರ್ಮಿಕ ದತ್ತಿ ಶಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರ ವಸತಿ ಶಾಖೆ, ರಾಷ್ಟ್ರೀಯ ಹೆದ್ದಾರಿ ಆರ್ಬಿಟೇಶನ್ ಶಾಖೆ, ವೀಡಿಯೋ ಕಾನ್ಫರೆನ್ಸ್ ಕೊಠಡಿ, ಸ್ಪಂದನ ಕೇಂದ್ರ/ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ದತ್ತು ಮಕ್ಕಳ ಮಾರ್ಗದರ್ಶನ ಕೇಂದ್ರ, ಪಹಣಿ (ಆರ್‌ಟಿಸಿ) ವಿತರಣೆ/ ಅಟಲ್ ಜೀ ಜನಸ್ನೇಹಿ ಕೇಂದ್ರ, ಆಧಾರ್ ನೋಂದಣಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಪಡಿತರ ಚೀಟಿ ಶಾಖೆ, ಸಹಾಯಕ ನಿರ್ದೇಶಕರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಸಂಸದರ ಕಚೇರಿ, ಜಿಲ್ಲಾ ಖಜಾನೆ ಮುಂತಾದ ಕಚೇರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ ಎಂದು ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ವಿವರಿಸಿದರು.

ಹಾಲಿ ಡಿಸಿ ಕಚೇರಿಗೆ ಬೇರೆ ಕಚೇರಿಗಳು ಸ್ಥಳಾಂತರಗೊಳ್ಳಲಿವೆ. ಹಿಂದಿನ ಡಿಸಿ ಕಚೇರಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು ಎಂದರು.