ತಂತ್ರಜ್ಞಾನದಿಂದ ನಿತ್ಯವೂ ಹೊಸ ಬೆಳವಣಿಗೆ

| Published : Nov 03 2025, 02:45 AM IST

ಸಾರಾಂಶ

ತಂತ್ರಜ್ಞಾನದ ಕಾಲದಲ್ಲಿ ನಿತ್ಯವೂ ಹೊಸ ಬೆಳವಣಿಗೆ ಆಗುತ್ತಿದ್ದು, ಅವುಗಳನ್ನು ಗಮನಿಸಿ ತಮ್ಮ ಅಧ್ಯಯನದಲ್ಲಿ ಅಳವಡಿಸಿಕೊಂಡರೆ ಮುಂದಿನ ಭವಿಷ್ಯ ಉತ್ತಮವಾಗಲಿದೆ.

ಧಾರವಾಡ:

ವಿದ್ಯಾರ್ಥಿಗಳು ತಮ್ಮ ಸುತ್ತಲೂ ನಡೆಯುತ್ತಿರುವ ಚಟುವಟಿಕೆ ಗಮನಿಸುತ್ತಿರಬೇಕು. ಜೀವನಕ್ಕೆ ಸಂಬಂಧಿಸಿದ, ವೈಜ್ಞಾನಿಕ ಪರಿಕಲ್ಪನೆ ಹುಡುಕಿ ಕುತೂಹಲ ಬೆಳೆಸಿಕೊಂಡು ಅಭ್ಯಾಸ ಮಾಡಬೇಕು ಎಂದು ಮಕ್ಕಳ ಅಕಾಡೆಮಿ ಅಧ್ಯಕ್ಷ ಡಾ. ರಾಜನ್‌ ದೇಶಪಾಂಡೆ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಯೋಗಾಧಾರಿತ ತರಗತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ತಂತ್ರಜ್ಞಾನದ ಕಾಲದಲ್ಲಿ ನಿತ್ಯವೂ ಹೊಸ ಬೆಳವಣಿಗೆ ಆಗುತ್ತಿದ್ದು, ಅವುಗಳನ್ನು ಗಮನಿಸಿ ತಮ್ಮ ಅಧ್ಯಯನದಲ್ಲಿ ಅಳವಡಿಸಿಕೊಂಡರೆ ಮುಂದಿನ ಭವಿಷ್ಯ ಉತ್ತಮವಾಗಲಿದೆ ಎಂದರು.

ಕ್ಲಿನಿಕಲ್‌ ಮೈಕ್ರೋಬಯಾಲಾಜಿಸ್ಟ್‌ ಡಾ. ಪಲ್ಲವಿ ದೇಶಪಾಂಡೆ ಮಾತನಾಡಿ, ವಿಜ್ಞಾನ ಎಂದರೆ ಕೇವಲ ಅಂಕಗಳಿಗಾಗಿ ಓದುವುದಲ್ಲ. ವಿಜ್ಞಾನದಿಂದ ಹೊಸ ಅನ್ವೇಷಣೆ ಮಾಡುವತ್ತ ಗಮನಹರಿಸಿ ಅರ್ಥೈಸಿಕೊಂಡು ಕಲಿಯಬೇಕು ಎಂದರು. ನಿವೃತ್ತ ಪ್ರಾಚಾರ್ಯ ಅರುಣ್‌ ಹೆಬ್ಬಳ್ಳಿ, ವಿಜ್ಞಾನವನ್ನು ಕಲಿಯುವ ಆಸಕ್ತಿ ಇದ್ದರೆ ಸಾಕು. ನಮ್ಮ ಸುತ್ತಲೂ ಸಿಗುವ ಕಡಿಮೆ ವೆಚ್ಚದ ವಸ್ತುಗಳನ್ನು ಬಳಸಿಕೊಂಡು ಮಾದರಿ ತಯಾರಿಸಿ ವಿಜ್ಞಾನದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು ಎಂದು ಹೇಳಿದರು.

ಇದೇ ವೇಳೆ ತಾವು ತಯಾರಿಸಿದ 30ಕ್ಕೂ ಹೆಚ್ಚು ವಿಜ್ಞಾನದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಡಾ. ವಿಜಯಕುಮಾರ ಎಂ.ವಿ. ಮಾತನಾಡಿದರು. ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸಹಾಯಕರಾದ ವಿಶಾಲಾಕ್ಷಿ ಎಸ್.ಜೆ. ಮತ್ತು ಚಂದ್ರಕಾಂತ ಚಂಡೂರ, ವಿಜ್ಞಾನ ಮಾದರಿಗಳನ್ನು ಮತ್ತು ಪ್ರಾತ್ಯಕ್ಷಿಕೆ ತೋರಿಸಿದರು.