ನೂತನ ಡಯಾಲಿಸೀಸ್ ಕೇಂದ್ರವನ್ನು ನಗರದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಉದ್ಘಾಟಿಸಲಾಯಿತು. ಇತ್ತೀಚಿನ ಜೀವನಶೈಲಿ ಮತ್ತು ಆಹಾರ ಪದ್ಧತಿ ಬದಲಾವಣೆಗಳ ಪರಿಣಾಮವಾಗಿ ಕಿಡ್ನಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ. ಫ್ಲೋರೈಡ್ ಪ್ರಮಾಣ ಅಧಿಕವಾಗಿರುವ ನೀರನ್ನು ಸೇವಿಸಿರುವ ಕಾರಣದಿಂದಲೂ ಅನೇಕರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಹಲವು ದುರ್ಘಟನೆಗಳನ್ನು ಮನಗಂಡು, ಸಾರ್ವಜನಿಕರಿಗೆ ಉಚಿತ ಮತ್ತು ಸಕಾಲದ ಸೇವೆ ಒದಗಿಸುವ ಉದ್ದೇಶದಿಂದ ಈ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಜನತೆಗೆ ಅತೀ ಅಗತ್ಯವಾಗಿದ್ದ ನೂತನ ಡಯಾಲಿಸೀಸ್ ಕೇಂದ್ರವನ್ನು ನಗರದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಉದ್ಘಾಟಿಸಲಾಯಿತು.

12 ಹಾಸಿಗೆಗಳನ್ನು ಹೊಂದಿರುವ ಈ ಆಧುನಿಕ ಘಟಕವನ್ನು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನುಷ್ಯನಿಗೆ ಐಶ್ವರ್ಯ, ಸಂಪತ್ತಿಗಿಂತ ಆರೋಗ್ಯವೇ ಮುಖ್ಯವಾದ ಧನ. ಇತ್ತೀಚಿನ ಜೀವನಶೈಲಿ ಮತ್ತು ಆಹಾರ ಪದ್ಧತಿ ಬದಲಾವಣೆಗಳ ಪರಿಣಾಮವಾಗಿ ಕಿಡ್ನಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ. ಫ್ಲೋರೈಡ್ ಪ್ರಮಾಣ ಅಧಿಕವಾಗಿರುವ ನೀರನ್ನು ಸೇವಿಸಿರುವ ಕಾರಣದಿಂದಲೂ ಅನೇಕರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಹಲವು ದುರ್ಘಟನೆಗಳನ್ನು ಮನಗಂಡು, ಸಾರ್ವಜನಿಕರಿಗೆ ಉಚಿತ ಮತ್ತು ಸಕಾಲದ ಸೇವೆ ಒದಗಿಸುವ ಉದ್ದೇಶದಿಂದ ಈ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗಾಗಿ ಪ್ರತಿಸಾರಿ 5ರಿಂದ 8ಸಾವಿರದವರೆಗೆ ವೆಚ್ಚವಾಗುವುದನ್ನು ಉಲ್ಲೇಖಿಸಿದ ಅವರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ವೆಚ್ಚ ಭಾರವಾಗಿತ್ತು. ಈಗ ಸರ್ಕಾರಿ ಆಸ್ಪತ್ರೆಗೆ ಸ್ಥಾಪಿಸಿದ 12 ಹಾಸಿಗೆಗಳ ಡಯಾಲಿಸಿಸ್ ಘಟಕದಲ್ಲಿ ಪ್ರತಿದಿನ 40–50 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ತುರ್ತು ಪರಿಸ್ಥಿತಿಗಳಿಗೆ 2 ವಿಶೇಷ ಹಾಸಿಗೆಗಳನ್ನು ಕೂಡ ಒದಗಿಸಲಾಗಿದೆ. ರೋಗಿಗಳು ತಮ್ಮ ಹೆಸರು ನೋಂದಾಯಿಸಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸರ್ಕಾರಿ ಜೆ.ಸಿ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಿಡ್ನಿ ಕಾಯಿಲೆಗಳ ಪ್ರಮಾಣ ಭಾರಿಯಾಗಿ ಏರಿಕೆಯಾಗಿದೆ. ಸಮಯಕ್ಕೆ ತಕ್ಕ ಚಿಕಿತ್ಸೆ ದೊರಕದೇ ಅನೇಕರು ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭಗಳಲ್ಲಿ, ಶಾಸಕರ ಪರಿಶ್ರಮದಿಂದ 14 ಹಾಸಿಗೆಗಳ ಅತ್ಯಾಧುನಿಕ ಡಯಾಲಿಸಿಸ್ ಘಟಕ ಆರಂಭವಾಗಿರುವುದು ತಾಲೂಕಿನ ಜನತೆಗೆ ದೊಡ್ಡ ಅನುಗ್ರಹ ಎಂದು ಹೇಳಿದರು.ಪ್ರತಿಯೊಬ್ಬರೂ ಸಮಯಾವಧಿ ಪ್ರಕಾರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ತಾವು ಆರೋಗ್ಯವಾಗಿದ್ದರೆ ಸಮಾಜವೂ ಆರೋಗ್ಯವಾಗಿರುತ್ತದೆ ಎಂದು ಮನವಿ ಮಾಡಿದರು.ಶೀಘ್ರದಲ್ಲೇ ಸಿಟಿ ಸ್ಕ್ಯಾನ್ ಕೇಂದ್ರ:

ನಗರದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಇನ್ನೊಂದು 6 ಹಾಸಿಗೆಗಳ ವಿಶೇಷ ವಾರ್ಡ್‌ ಪ್ರಾರಂಭವಾಗಿದೆ. ಅತ್ಯಂತ ಶೀಘ್ರದಲ್ಲಿ ಸಿಟಿ ಸ್ಕ್ಯಾನ್ ಕೇಂದ್ರವನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಪ್ರದೀಪ್, ಡಾ. ರಾಕೇಶ್, ಡಾ. ದೀಪಕ್, ರಕ್ಷಾ ಸಮಿತಿ ಸದಸ್ಯರು ಹೇಮಂತ್ ಕುಮಾರ್, ರೇಖಾ ಜಯಣ್ಣ, ಎಂ.ವೈ. ಖಾನ್, ಮಂಜುನಾಥ್, ರೇವಣ್ಣ, ವಿಭವ್ ಇಟಗಿ, ಇಮ್ರಾನ್ ಖಾನ್, ನೇಪ್ರೊ ಪ್ಲಸ್ ಸಂಸ್ಥೆಯ ವ್ಯವಸ್ಥಾಪಕ ಸೌರವ್ ಮುಖರ್ಜಿ, ರವಿ, ದಿಲೀಪ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಜರಿದ್ದರು.