ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಇತಿಹಾಸಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಸಂಶೋಧನಾ ಅಧ್ಯಯನವೊಂದು ಬೆಳಕಿಗೆ ಬಂದಿದೆ. ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಅವರು ಸ್ವರ್ಣವಲ್ಲೀ ಮಹಾಸಂಸ್ಥಾನದ ಸಂಗ್ರಹದಲ್ಲಿರುವ ಅಪರೂಪದ ಶಾಸನಪ್ರತಿಯ ಸಮಗ್ರ ಅಧ್ಯಯನ ನಡೆಸಿದ್ದಾರೆ.

ಶಿರಸಿ: ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಇತಿಹಾಸಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಸಂಶೋಧನಾ ಅಧ್ಯಯನವೊಂದು ಬೆಳಕಿಗೆ ಬಂದಿದೆ. ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಅವರು ಸ್ವರ್ಣವಲ್ಲೀ ಮಹಾಸಂಸ್ಥಾನದ ಸಂಗ್ರಹದಲ್ಲಿರುವ ಅಪರೂಪದ ಶಾಸನಪ್ರತಿಯ ಸಮಗ್ರ ಅಧ್ಯಯನ ನಡೆಸಿ, ಇದುವರೆಗೆ ಅನುಮಾನ ಮತ್ತು ನಿರ್ಲಕ್ಷ್ಯದ ನೆರಳಿನಲ್ಲಿ ಉಳಿದಿದ್ದ ಈ ದಾಖಲೆಯ ಐತಿಹಾಸಿಕ ಮಹತ್ವವನ್ನು ಹೊಸ ಸಾಕ್ಷ್ಯಾಧಾರಗಳೊಂದಿಗೆ ಸ್ಥಾಪಿಸಿದ್ದಾರೆ.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಪ್ರಕಟಿಸಿರುವ “ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಐತಿಹಾಸಿಕ ದಾಖಲೆಗಳು ಸಂಪುಟ-1” ಕೃತಿಯಲ್ಲಿ ಶಾಸನಪಾಠ ಪ್ರಕಟವಾಗಿ 30 ವರ್ಷಗಳು ಕಳೆದಿದ್ದರೂ ಅದರ ಕುರಿತು ಇದುವರೆಗೆ ಯಾವುದೇ ಆಳವಾದ ವಿಮರ್ಶಾತ್ಮಕ ಅಧ್ಯಯನ ನಡೆದಿರಲಿಲ್ಲ.

ಶಾಸನದಲ್ಲಿರುವ “ವಿಕ್ರಮಾರ್ಕ ಶಕೇವರ್ಷೇ ಚಂದ್ರರ್ತು ಗ್ರಹಸಮ್ಮಿತೇ” ಎಂಬ ಕಾಲನಿರ್ದೇಶವನ್ನು ಭೂತಸಂಖ್ಯಾ ಪದ್ಧತಿಯ ಆಧಾರದ ಮೇಲೆ ಶ್ಯಾಮಸುಂದರ ಗೌಡ ಮತ್ತು ಪ್ರೊ. ಜಿ.ಕೆ. ದೇವರಾಜ ಸ್ವಾಮಿ ಅವರ ವಿಶ್ಲೇಷಣೆಯಿಂದ ಶಾಸನದ ಕಾಲ ವಿಕ್ರಮ ವರ್ಷ ೯೦೨ಕ್ಕೆ, ಅಂದರೆ ಕ್ರಿ.ಶ. ೮೪೬ರ ಮಾರ್ಚ್ ೯ಕ್ಕೆ ನಿಖರವಾಗಿ ಹೊಂದುತ್ತದೆ ಎಂಬುದು ಸಾಬೀತಾಗಿದೆ. ವಿಶೇಷವಾಗಿ ಶಾಸನದಲ್ಲಿ ಉಲ್ಲೇಖವಾಗಿರುವ “ಕ್ರೋಧನ” ಸಂವತ್ಸರವು ಇದೇ ಕಾಲಕ್ಕೆ ಸರಿಯಾಗಿ ಹೊಂದಿಕೆಯಾಗಿರುವುದು ಈ ಹೊಸ ನಿರ್ಣಯಕ್ಕೆ ಬಲವಾದ ಆಧಾರವಾಗಿದೆ.

ಸಂಶೋಧನೆಯ ಪ್ರಕಾರ, ಶಾಸನದಲ್ಲಿನ “ಉಜ್ಜಯಿನ್ಯಧಿಪೋ ರಾಜಾ ವಿಕ್ರಮಾಂಕೋ ಮಹೀಪತಿಃ” ಎಂಬ ಉಲ್ಲೇಖವನ್ನು ನೇರವಾಗಿ ಪೌರಾಣಿಕ ವಿಕ್ರಮಾದಿತ್ಯನೊಂದಿಗೆ ಸಂಬಂಧಿಸುವ ಅಗತ್ಯವಿಲ್ಲ. ಕ್ರಿ.ಶ. ೮೪೬ರ ವೇಳೆಗೆ ಉಜ್ಜಯಿನಿ ಪ್ರದೇಶವು ಗುರ್ಜರ-ಪ್ರತಿಹಾರ ಸಾಮ್ರಾಜ್ಯದ ಅಧೀನದಲ್ಲಿದ್ದು, ಆ ಕಾಲದ ಪ್ರಬಲ ಚಕ್ರವರ್ತಿಯಾಗಿದ್ದ ಮೊದಲನೆಯ ಮಿಹಿರ ಭೋಜನು ತನ್ನನ್ನು “ವಿಕ್ರಮಾದಿತ್ಯ” ಪರಂಪರೆಯ ರಾಜನೆಂದು ಗುರುತಿಸಿಕೊಂಡಿದ್ದಾನೆ ಎಂಬುದನ್ನು ಉತ್ತರ ಭಾರತದ ಶಾಸನಗಳು ಮತ್ತು ನಾಣ್ಯಗಳು ಸೂಚಿಸುತ್ತವೆ. ಹೀಗಾಗಿ ಶಾಸನದಲ್ಲಿನ “ವಿಕ್ರಮಾಂಕ” ಎಂಬ ಹೆಸರು ಮಿಹಿರ ಭೋಜನಿಗೆ ಸಂಬಂಧಿಸಿದ್ದೆಂದು ಹೊಸ ಐತಿಹಾಸಿಕ ನಿರ್ಣಯವನ್ನು ಸಂಶೋಧನೆ ಮುಂದಿರಿಸಿದೆ. ಜತೆಗೆ ಮಿಹಿರ ಭೋಜನು “ಆದಿವರಾಹ” ಎಂಬ ಬಿರುದಿನಿಂದ ಪ್ರಸಿದ್ಧನಾಗಿದ್ದನು. ಸ್ವರ್ಣವಲ್ಲೀ ಶಾಸನದ ಆರಂಭದಲ್ಲಿಯೂ ವರಾಹಸ್ತುತಿ ಕಾಣಿಸಿಕೊಳ್ಳುತ್ತದೆ. ಈ ಶಾಸನದಲ್ಲಿ ಕುವನಾವರಾಹಃ ಎಂದು ಹೇಳಲಾಗಿದೆ. ಈ ಸಾಮ್ಯತೆ ಕೇವಲ ಯಾದೃಚ್ಛಿಕವಲ್ಲದೆ, ಶಾಸನದ ರಾಜಕೀಯ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಮಹತ್ವದ ಸುಳಿವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದುವರೆಗೆ ಕೃತಕ ಅಥವಾ ಕೂಟಶಾಸನವಾಗಿರಬಹುದೆಂಬ ಅನುಮಾನದಲ್ಲಿದ್ದ ಈ ದಾಖಲೆ ವಾಸ್ತವವಾಗಿ ಐತಿಹಾಸಿಕವಾಗಿ ನೈಜವಾದ ದಾನಶಾಸನವಾಗಿದೆ ಎಂದು ಧೃಡೀಕರಿಸಿದೆ.

ಈ ನಿರ್ಣಯವು ಸ್ವರ್ಣವಲ್ಲೀ ಮಠದ ಗುರುಪರಂಪರೆಯೊಂದಿಗೂ ಗಮನಾರ್ಹವಾಗಿ ಹೊಂದಿಕೆಯಾಗುತ್ತದೆ. ಮಠದ ಸ್ಥಾಪಕರೆಂದು ಪರಿಗಣಿಸಲ್ಪಡುವ ವಿಶ್ವವಂದ್ಯ ಯತಿಗಳ ನಂತರದ ಗುರುಗಳಾದ ನಾರಾಯಣೇಂದ್ರ ಯತಿಗಳಿಗೆ ಈ ದಾನ ನೀಡಲಾಗಿದೆ ಎಂಬುದನ್ನು ಶಾಸನ ಸ್ಪಷ್ಟಪಡಿಸುತ್ತದೆ. ಹೀಗಾಗಿ ಸ್ವರ್ಣವಲ್ಲೀ ಮಠದ ಆರಂಭಿಕ ಇತಿಹಾಸದ ಪ್ರಾಚೀನತೆಗೆ ಅಧಿಕೃತತೆಯನ್ನು ಒದಗಿಸುವ ವಿಶ್ವಾಸಾರ್ಹ ಸಾಕ್ಷಿಯಾಗಿ ಹೊರಹೊಮ್ಮಿದೆ.

ಅಧ್ಯಯನದ ಮತ್ತೊಂದು ಮಹತ್ವದ ಅಂಶವೆಂದರೆ, ಸ್ವರ್ಣವಲ್ಲೀ ಮಠದ ಮೂಲ ಪರಂಪರೆಯು ಕಾಶಿ, ಉಜ್ಜಯಿನಿ, ಗೋಕರ್ಣ, ಕಡತೋಕ, ಸಹಸ್ರಲಿಂಗ ಮತ್ತು ಸ್ವರ್ಣವಲ್ಲೀ ಎಂಬ ಸ್ಥಳಾಂತರಗಳ ಮೂಲಕ ಬೆಳೆದಿದೆ ಎಂಬ ಮಠದ ಗುರುಪರಂಪರೆಯ ವಿವರಗಳಿಗೆ ಈ ಶಾಸನವು ಪೂರಕ ಸಾಕ್ಷ್ಯ ಒದಗಿಸುತ್ತಿರುವುದು. ಉಜ್ಜಯಿನಿಯಲ್ಲಿ ಮಠದ ಅಸ್ತಿತ್ವವಿದ್ದುದಕ್ಕೆ ಹಾಗೂ ಅಲ್ಲಿನ ರಾಜಾಶ್ರಯ ದೊರೆತಿದ್ದುದಕ್ಕೆ ಈ ದಾಖಲೆ ಮಹತ್ವದ ಐತಿಹಾಸಿಕ ಬೆಂಬಲ ನೀಡುತ್ತದೆ.

ಸಂಶೋಧಕರಾದ ಶ್ಯಾಮಸುಂದರ ಗೌಡ, ಅಂಕೋಲಾ ಅವರ ಅಭಿಪ್ರಾಯದಂತೆ, ಈ ಶಾಸನಪ್ರತಿ ಕೇವಲ ಧಾರ್ಮಿಕ ದಾನಪತ್ರವಲ್ಲ; ಅದು ಉತ್ತರ ಭಾರತದ ಉಜ್ಜಯಿನಿ ಪರಂಪರೆ ಮತ್ತು ದಕ್ಷಿಣ ಭಾರತದ ಶಂಕರ ಮಠ ಪರಂಪರೆಯ ನಡುವಿನ ಸಂಪರ್ಕವನ್ನು ಸೂಚಿಸುವ ಅಪರೂಪದ ದಾಖಲೆಯಾಗಿದೆ.