ಬಾಗಲಕೋಟೆ: 4 ಬಾರಿ ವಿನ್ನರ್‌ ಗದ್ದಿಗೌಡರಿಗೆ ಹೊಸ ಮುಖ ಸಂಯುಕ್ತಾ ಸವಾಲ್‌!

| Published : Apr 30 2024, 02:03 AM IST / Updated: Apr 30 2024, 12:45 PM IST

BJP CONGRESS FLAG
ಬಾಗಲಕೋಟೆ: 4 ಬಾರಿ ವಿನ್ನರ್‌ ಗದ್ದಿಗೌಡರಿಗೆ ಹೊಸ ಮುಖ ಸಂಯುಕ್ತಾ ಸವಾಲ್‌!
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸತತ 4 ಬಾರಿಯ ಗೆಲುವಿನ ಸರದಾರ, ಸಂಸದ ಪಿ.ಸಿ.ಗದ್ದಿಗೌಡರಿಗೆ ಹೊಸಮುಖ ಸಂಯುಕ್ತಾ ಪಾಟೀಲ ಎದುರಾಳಿ.

ಈಶ್ವರ್ ಶೆಟ್ಟರ್‌

 ಬಾಗಲಕೋಟೆ : ಕೃಷ್ಣ, ಘಟಪ್ರಭಾ, ಮಲಪ್ರಭಾ ನದಿಗಳ ತ್ರಿವೇಣಿ ಸಂಗಮವಾಗಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸತತ ಗೆಲುವಿನ ವೇಗದಲ್ಲಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಾಲ್ಕು ಈ ಬಾರಿ ತಂತ್ರ ಹೂಡಿ ಕೈ ಸುಟ್ಟುಕೊಂಡಿದೆ. ಈ ಬಾರಿಯೂ ಹೊಸ ಮುಖ, ಹೊಸ ತಂತ್ರಕ್ಕೆ ಕೈ ಹಾಕಿದೆ. ವಿಶೇಷವೆಂದರೆ ಅವಿಭಜಿತ ವಿಜಯಪುರ ಜಿಲ್ಲೆಯ ಮಹಿಳೆಗೆ ಅವಕಾಶ ಕಲ್ಪಿಸಿದೆ. ಈ ತಂತ್ರ ಎಷ್ಟು ಫಲಿಸಬಹುದು ಎಂಬುವುದಕ್ಕೆ ಫಲಿತಾಂಶವೇ ಉತ್ತರವಾಗಲಿದೆ.

2004ರಿಂದ ಬಿಜೆಪಿಯಿಂದ ಸ್ಪರ್ಧಿಸಿ ಸತತ 4 ಬಾರಿ ಗೆಲುವನ್ನು ತಮ್ಮದಾಗಿಸಿಕೊಂಡ ಸಂಸದ ಪಿ.ಸಿ.ಗದ್ದಿಗೌಡರ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಯುವ ಮುಖ ಹಾಗೂ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಪಾಟೀಲಗೆ ಮಣೆ ಹಾಕಿದೆ.

ಕಾಂಗ್ರೆಸ್‌ನಿಂದ ಸತತ ಅಭ್ಯರ್ಥಿ ಬದಲು:2004ರಲ್ಲಿ ಅಂದು ಸಂಸದರಾಗಿದ್ದ ಕಾಂಗ್ರೆಸ್‌ನ ಆರ್.ಎಸ್.ಪಾಟೀಲ ಸೋತ ನಂತರ 2008ರಲ್ಲಿ ಶಾಸಕ ಜೆ.ಟಿ.ಪಾಟೀಲರನ್ನು ಅಭ್ಯರ್ಥಿಯನ್ನಾಗಿಸಿತ್ತು. 2013ರಲ್ಲಿ ಮಾಜಿ ಸಚಿವರಾದ ಅಜಯಕುಮಾರ ಸರನಾಯಕ ಹಾಗೂ 2019ರಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಕಣಕ್ಕೆ ಇಳಿದಿದ್ದರು. ಸತತ ನಾಲ್ಕು ಚುನಾವಣೆಯಲ್ಲಿ ಬಿಜೆಪಿ ಎದುರು ಸೋಲು ಕಂಡಿದ್ದ ಕಾಂಗ್ರೆಸ್, 2024ರ ಚುನಾವಣೆಯಲ್ಲಿ ಮತ್ತೆ ಹೊಸಮುಖಕ್ಕೆ ಮಣೆ ಹಾಕುವ ಮೂಲಕ ತನ್ನ ಚುನಾವಣೆಯ ಕಾರ್ಯವೈಖರಿಯ ಪ್ರಯೋಗಕ್ಕೆ ಮುಂದಾಗಿದೆ.ಒಗ್ಗಟ್ಟಿನ ಬಲ:

ಆರಂಭದಲ್ಲಿ ಸಚಿವ ಶಿವಾನಂದ ಪುತ್ರಿಗೆ ಟಿಕೆಟ್ ಘೋಷಣೆಯಾದಾಗ ಪ್ರಬಲ ಆಕಾಂಕ್ಷಿಯಾಗಿದ್ದ ವೀಣಾ ಅಸಮಾಧಾನಗೊಂಡಿದ್ದರು. ನಂತರ ಅವರ ಅಸಮಾಧಾನ ಶಮನಗೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರಿಂದ ಸಹಜವಾಗಿ ಕಾಂಗ್ರೆಸ್‌ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಜೊತೆಗೆ ಜಿಲ್ಲೆಯಲ್ಲಿನ ಐದು ಕಾಂಗ್ರೆಸ್ ಶಾಸಕರ ಬೆಂಬಲ, ಮಾಜಿ ಸಚಿವರಾದಿಯಾಗಿ ಎಲ್ಲ ಹಂತದ ನಾಯಕರು ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಜತೆಗೆ ಕಾಂಗ್ರೆಸ್‌ ಗ್ಯಾರಂಟಿಗಳು ಕೂಡ ಈ ಬಾರಿ ವರವಾಗುವ ಸಾಧ್ಯತೆಗಳಿವೆ.

ಬಿಜೆಪಿಯಲ್ಲಿಯೂ ಹಲವು ನಿರೀಕ್ಷೆ:ಸತತ ನಾಲ್ಕು ಬಾರಿ ಗೆಲವು ಕಂಡ ಬಿಜೆಪಿ ಈ ಬಾರಿಯೂ ಮತ್ತೆ ಕೇಸರಿ ಧ್ವಜ ಹಾರಿಸಲು ಇನ್ನಿಲ್ಲದ ಕಸರತ್ತು ಮುಂದುವರಿಸಿದೆ. ನಾಲ್ಕು ಅವಧಿಯ ಸಾಧನೆಯನ್ನು ಮುಂದಿಟ್ಟುಕೊಂಡು ಹೊರಟಿರುವ ಸಂಸದ ಗದ್ದಿಗೌಡರ ಅವರಿಗೆ ಲೋಕಸಭಾ ವ್ಯಾಪ್ತಿಯ ಮೂವರು ಶಾಸಕರು, ಮಾಜಿ ಸಚಿವರು, ಶಾಸಕರ ಜೊತೆಯಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿಯೂ ಮೋದಿ ಅವರ ಅಲೆಯನ್ನೇ ಬಂಡವಾಳವಾಗಿಟ್ಟುಕೊಂಡು ಪ್ರಚಾರದಲ್ಲಿದೆ ಕೇಸರಿ ಪಡೆ.

ಸಮಬಲದ ಹೋರಾಟ:ಕಳೆದ ನಾಲ್ಕು ಚುನಾವಣೆಗಳಲ್ಲಿ ಅಂತಹ ತೀವ್ರ ಸ್ಪರ್ಧೆ ಇಲ್ಲದೆ ಗೆಲುವು ಕಂಡಿದ್ದ ಬಿಜೆಪಿಗೆ ಈ ಬಾರಿ ಗೆಲುವು ಅಷ್ಟೊಂದು ಸರಳವಾಗಿಲ್ಲ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್ ಅಧಿಕಾರದಲ್ಲಿದೆ. ಜತೆಗೆ ಗ್ಯಾರಂಟಿ ಯೋಜನೆಗಳ ಅಬ್ಬರದ ಪ್ರಚಾರ, ಪಕ್ಷದ ನಾಯಕರ ಒಗ್ಗಟ್ಟು, ಮಹಿಳಾ ಮತದಾರರ ನಿರ್ಣಾಯಕ ಪಾತ್ರ, ಚುನಾವಣೆಯಲ್ಲಿ ಚಾಣಾಕ್ಷ ಹೆಜ್ಜೆ ಇಡುವಲ್ಲಿ ನಿಸ್ಸಿಮರಾಗಿರುವ ಸಚಿವ ಶಿವಾನಂದ ಪಾಟೀಲ ಅವರ ತಂತ್ರಗಾರಿಕೆಯನ್ನು ಬಿಜೆಪಿ ಹೇಗೆ ಎದುರಿಸುತ್ತದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಕ್ಷೇತ್ರದಲ್ಲಿ ಕೆಲವೆಡೆ ಮೋದಿ ಅಲೆ ಕಂಡರೆ ಇನ್ನೂ ಕೆಲವೆಡೆ ಜಾತಿ ಸಮೀಕರಣ, ಅಭ್ಯರ್ಥಿಗಳ ಕುರಿತಾಗಿ ಪರವಿರೋಧದ ಮಾತುಗಳು ಸಹ ಕೇಳಿ ಬರುತ್ತಿವೆ. ಸದ್ಯ ಕಾಂಗ್ರೆಸ್ ಬಿಜೆಪಿ ಸಮಬಲದ ಪ್ರಚಾರ ಹಾಗೂ ಫಲಿತಾಂಶದ ನಿರೀಕ್ಷೆ ಕಾಣುತ್ತಿದೆ.ಜಾತಿವಾರು ಮತದಾರರು:

ಕ್ಷೇತ್ರದಲ್ಲಿ ಲಿಂಗಾಯತರೆ ನಿರ್ಣಾಯಕರು. ನಂತರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ನೇಕಾರರು, ಹಿಂದುಳಿದ ವರ್ಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಲಿಂಗಾಯತರೆ ಆಗಿದ್ದು ಅದರಲ್ಲಿಯೂ ಲಿಂಗಾಯತ ಒಳ ಪಂಗಡಗಳ ರಾಜಕೀಯ ಜೋರಾಗಿದೆ. ಬಿಜೆಪಿಯ ಪಿ.ಸಿ.ಗದ್ದಿಗೌಡರ ಲಿಂಗಾಯತ ಗಾಣಿಗ ಸಮುದಾಯದವರಾದರೆ, ಕಾಂಗ್ರೆಸ್ಸಿನಿಂದ ಸ್ಪರ್ಧಿಸಿರುವ ಸಂಯುಕ್ತಾ ಪಾಟೀಲ ಅವರು ಲಿಂಗಾಯತ ಪಂಚಮಸಾಲಿ ಸಮುದಾಯವರಾಗಿದ್ದಾರೆ.2019ರ ಪಲಿತಾಂಶ:

1. ಪಿ.ಸಿ.ಗದ್ದಿಗೌಡರ- 6,64,638, ಬಿಜೆಪಿ2. ವೀಣಾ ಕಾಶಪ್ಪನವರ- 4,96,451, ಕಾಂಗ್ರೆಸ್‌

ಮತದಾರರ ವಿವರ:

ಪುರುಷರು- 8.95,436ಮಹಿಳೆಯರು- 9,10,650ಇತರರು- 101ಒಟ್ಟು ಮತದಾರರು- 1806183

ಅಭ್ಯರ್ಥಿಗಳ ಪರಿಚಯ:

1. ಪಿ.ಸಿ ಗದ್ದಿಗೌಡರ, ಬಿಜೆಪಿಮೂಲತಃ ಜನತಾ ಪರಿವಾರದ ಪಿ.ಸಿ.ಗದ್ದಿಗೌಡರ ಅವರು ಲೋಕಸಭಾ ಸದಸ್ಯರಾಗುವ ಮುನ್ನ ವಿಧಾನ ಪರಿಷತ್ ಸದಸ್ಯರಾಗಿ, ಜಿಲ್ಲಾ ಪುನರ್‌ವಿಂಗಡಣಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2004ರ ಸಂದರ್ಭದಲ್ಲಿ ಜನತಾ ಪರಿವಾರವನ್ನು ತೊರೆದು ಬಿಜೆಪಿ ಸೇರಿ, ಸತತ ನಾಲ್ಕು ಬಾರಿ ಸಂಸದರಾಗಿ ಬಾಗಲಕೋಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

2. ಸಂಯುಕ್ತಾ ಪಾಟೀಲ, ಕಾಂಗ್ರೆಸ್ವಿಜಯಪುರದ ಸಚಿವ ಶಿವಾನಂದ ಪಾಟೀಲರ ಪುತ್ರಿಯಾಗಿರುವ ಸಂಯುಕ್ತಾ ಪಾಟೀಲ, ಎಲ್ಎಲ್‌ಬಿ ಪದವಿಧರರು. ವಿಜಯಪುರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರು, ಯುವ ಕಾಂಗ್ರೆಸ್ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿರುವ ಅವರು ಹಲವು ಜನಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೆ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.