ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಜಗತ್ತಿನಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಅರಿತಿರುವ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಹೊಸ ಬುನಾದಿ ಹಾಕಿ ಮೌಲ್ಯಯುತ ಶಿಕ್ಷಣ ನೀಡುತ್ತಿವೆ ಎಂದು ಸಿದ್ದಗಂಗ ಮಠದ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದಿಂದ ನಡೆದ ಶ್ರೀಮರೀದೇವರು ಸ್ವಾಮೀಜಿಗಳ 17ನೇ ವರ್ಷದ ಹಾಗೂ ಶ್ರೀಸದಾಶಿವ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಹಾಗೂ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಮಠಗಳು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮುದಾಯಕ್ಕೆ ಧರ್ಮಪ್ರಜ್ಞೆ ಮೂಡಿಸುತ್ತಿವೆ. ತ್ರಿವಿಧ ದಾಸೋಹ, ನಿರುದ್ಯೋಗ ಸಮಸ್ಯೆ ನಿವಾರಣೆ, ನೆರೆಯ ಸಂದರ್ಭದಲ್ಲಿ ಸರ್ಕಾರಗಳ ಜತೆಗೆ ಕೈಜೋಡಿಸುವುದು. ಸಾಮಾಜಿಕ ನೆಲೆಕಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸಾಹಿತ್ಯ, ಸಂಗೀತ ಕ್ಷೇತ್ರಕ್ಕೂ ಆದ್ಯತೆ ನೀಡುತ್ತಿವೆ. ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠವು ಸಹ ಈ ಸಾಲಿನಲ್ಲಿ ಕೆಲಸ ಮಾಡುವ ಮೂಲಕ ಭಕ್ತರ ಮನಸ್ಸಿಗೆದಿದೆ ಎಂದು ಬಣ್ಣಿಸಿದರು.ವಿರೋಧ ಪಕ್ಷದ ಉಪನಾಯಕ ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿ, ಮಠಗಳು ಹಲವು ಚಿಂತನೆಗಳ ಮೂಲಕ ಸಮಾಜವನ್ನು ಬದಲಾವಣೆ ಮಾಡಿ ಪರಿವರ್ತನೆ ಮಾಡಬೇಕು. ಕನಸ್ಸುಗಳನ್ನು ಹೊತ್ತು ಶ್ರೀಗಳು ಕೆಲಸ ಮಾಡುತ್ತಾರೆ. ಮಠಗಳ ಸದಾ ಜನ, ಸಮಾಜದ ಪರವಾಗಿ ಕೆಲಸ ಮಾಡುತ್ತಿವೆ. ಅದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಬೇಬಿಬೆಟ್ಟದ ಶ್ರೀಗಳ ಕೋರಿಕೆಯ ಮೇರೆಗೆ ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ. ಶ್ರೀರಾಮಯೋಗೀಶ್ವರ ಮಠವು ಮತ್ತಷ್ಟು ಉತ್ತಂಗಸ್ಥಿತಿಗೆ ಬೆಳೆಯಲಿ ಎಂದು ಹಾರೈಸಿದರು.ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಚೌಧರಿ ಮಾತನಾಡಿ, ಹೆಣ್ಣುಮಕ್ಕಳು ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಆ ಸಮಾಜ, ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಹಾಗಾಗಿ ಸಮಾಜದಲ್ಲಿ ಪ್ರತಿಯೊಬ್ಬರು ಹೆಣ್ಣು ಮಕ್ಕಳನ್ನು ಪ್ರೀತಿ ಗೌರವದಿಂದ ಕಾಣಬೇಕು. ಜೊತೆಗೆ ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.
ಮುಖ್ಯಮಂತ್ರಿಗಳು ಕೊಟ್ಟಿರುವ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ಮಹಿಳಾ ಆಯೋಗ, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮೂವರು ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡುತ್ತಿದ್ದೇವೆ ಎಂದರು.ಜನರ ರಕ್ಷಣೆಗಾಗಿಯೇ ಪೊಲೀಸ್ ಇಲಾಖೆ ಇರೋದು. ಹಾಗಾಗಿ ಜನರು ಪೊಲೀಸರ ಬಗ್ಗೆ ಭಯ ಬೇಡ. ಬಸವಣ್ಣ ಅವರ ತತ್ವದಡಿಯಲ್ಲಿ ನಾವೆಲ್ಲರು ಬದುಕಬೇಕು. ಪೂಜೆ ಮಾಡುವ ಕೈಗಳಿಗಿಂತ ದಾನ ಮಾಡುವ ಕೈಗಳೇ ಶ್ರೇಷ್ಠ ಎಂಬಂದತೆ ನಾವೆಲ್ಲರು ಕೆಲಸ ಮಾಡಬೇಕು ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬೇಬಿ ಜಾತ್ರೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಶ್ರೀಗಳು ಜಾತ್ರೆ ಜತೆಗೆ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಠವನ್ನು ಬೆಳೆಸಬೇಕು ಎಂಬ ಆಲೋಚನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಸಮಾಜಕ್ಕೆ ಮಠಗಳ ಸೇವೆ ಸಾಕಷ್ಟಿದೆ. ರಾಜ್ಯ, ರಾಷ್ಟ್ರ, ವಿದೇಶದಲ್ಲಿ ವಸತಿ, ಶೈಕ್ಷಣಿಕ ಸೇವೆ ದೇಶಕ್ಕೆ ಮಾದರಿಯಾಗಿದೆ. ಮಠಗಳು ಶಿಕ್ಷಣ ಸಂಸ್ಥೆಗಳನ್ನು ಮಾಡಿ ಮಕ್ಕಳ ಶೈಕ್ಷಣಿಕೆ ಪ್ರಗತಿಗೆ ಕಾರಣರಾಗಿದ್ದಾರೆ ಎಂದರು.
ಶಿಕ್ಷಣ ಇದ್ದರೆ ಏನು ಬೇಕಾದರು ಸಾಧನೆ ಮಾಡಬಹುದು, ಸಮಾಜದಲ್ಲಿ ಆವಿಸ್ಕಾರ, ತಂತ್ರಜ್ಞಾನ ಮುಂದುವರೆದಂತೆ ಸಮಾಜವು ಬದಲಾವಣೆಯಾಗಿದೆ. ನಾವು ಸಹ ನಾವೆಲ್ಲರು ಬದಲಾವಣೆಯಾಗಬೇಕಾದ ಅನಿರ್ವಾಯತೆ ಇದೆ ಎಂದರು.ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಮಠ-ಮಂದಿರಗಳು ಜೀವನಕ್ಕೆ ಪ್ರೇರಕ ಶಕ್ತಿಯಾಗಿವೆ. ಸಂಸ್ಕೃತಿ, ಮಾನವೀಯ ಮೌಲ್ಯಗಳು, ಹೃದಯವಂತಿಗೆ ಬೆಳವಣಿಗೆಗೆ ಸಹಕಾರಿಯಾಗಿವೆ. ಹಾಗಾಗಿ ಮಠಗಳ ಬೆಳವಣಿಗೆ ಪ್ರತಿಯೊಬ್ಬ ನಾಗರೀಕರು ಶ್ರಮಿಸಬೇಕು ಎಂದರು.
ಮಠಾಧೀಶರು ದೂರದೃಷ್ಟಿಯಿಂದ ಮಠಗಳನ್ನು ಕಟ್ಟಿ ಬೆಳೆಸಿದ್ದಾರೆ. ಬಸವಣ್ಣ ಅವರ ತತ್ವ, ಆಲೋಚನೆ, ಚಿಂತನೆಗಳೊಂದಿಗೆ ಕೆಲಸ ಮಾಡುತ್ತಿವೆ. ಇಂತಹ ಮಠಗಳಿಗೆ ಭೇಟಿಕೊಡುವುದರಿಂದ ಧಾರ್ಮಿಕ ಪ್ರಜ್ಞೆಯ ಜತೆಗೆ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಲಿದ್ದಾರೆ ಎಂದರು.ಇದೇ ವೇಳೆ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಠದ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಆದಿಚುಂಚನಗಿರಿ ಕ್ಷೇತ್ರದ ಕಿರಿಯ ಶ್ರೀ ಸತ್ಯಕೀರ್ತಿ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ಆರ್‌ಟಿಒ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಶ್ರೀನಿವಾಸ್, ತಹಸೀಲ್ದಾರ್ ಬಸವರೆಡ್ಡಪ್ಪರೋಣದ ಸೇರಿದಂತೆ ಅನೇಕ ಮಠಾಧೀಶರು, ಗಣ್ಯರು ಭಾಗವಹಿಸಿದ್ದರು.