ಇನ್ನುಳಿದ ಗೇಟ್‌ಗಳನ್ನು ಟಿಬಿ ಡ್ಯಾಮ್‌ನಲ್ಲಿ ನಿರ್ಮಿಸಲಾಗುತ್ತದೆ.ಇನ್ನೂ ಒಂದೆರಡು ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ ಎನ್ನಲಾಗಿದೆ

ಮುನಿರಾಬಾದ್: ತುಂಗಭದ್ರಾ ಜಲಾಶಯದ ನೂತನ ಗೇಟ್‌ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಏಪ್ರಿಲ್‌ ಅಂತ್ಯಕ್ಕೆ ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳನ್ನು ಬದಲಿಸಿ ನೂತನ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತುಂಗಭದ್ರಾ ಮಂಡಳಿಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಏ.11ರ ಶನಿವಾರದವರೆಗೆ ತುಂಗಭದ್ರಾ ಜಲಾಶಯಕ್ಕೆ 26 ನೂತನ ಗೇಟ್‌ ಅಳವಡಿಸಲಾಗಿದ್ದು, ಬಾಕಿ ಉಳಿದ 7 ಗೇಟ್‌ಗಳ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಅದು ಏಪ್ರಿಲ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಲಾಶಯದ ನೂತನ ಗೇಟ್‌ಗಳ ನಿರ್ಮಾಣ ಕಾರ್ಯ ಟಿಬಿ ಡ್ಯಾಮ್‌ ಹಾಗೂ ಗದಗನಲ್ಲಿ ನಡೆಯುತ್ತಿದ್ದು, ಇದುವರೆಗೆ 32 ನೂತನ ಗೇಟ್‌ಗಳನ್ನು ನಿರ್ಮಿಸಲಾಗಿದ್ದು,ಇನ್ನುಳಿದ ಗೇಟ್‌ಗಳನ್ನು ಟಿಬಿ ಡ್ಯಾಮ್‌ನಲ್ಲಿ ನಿರ್ಮಿಸಲಾಗುತ್ತದೆ.ಇನ್ನೂ ಒಂದೆರಡು ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಹಳೆ ಗೇಟ್‌ ತೆರವು ಕಾರ್ಯ: ತುಂಗಭದ್ರಾ ಜಲಾಶಯದ 33 ಹಳೆ ಗೇಟ್‌ ತೆರವುಗೊಳಿಸುವ ಕಾರ್ಯ ಮುಕ್ತಾಯವಾಗಿದ್ದು, ಜಲಾಶಯದ ಒಂದೇ ಗೇಟ್‌ ನಿರ್ಮಾಣ ಕಾರ್ಯ ಬಾಕಿ ಇದ್ದು, ಅದು ಮುಗಿದರೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ.

ಮೇ 15 ರವರೆಗೆ ನೂತನ ಗೇಟ್‌ಗಳಿಗೆ ಪೇಂಟಿಂಗ್ ಕಾರ್ಯ ಹಾಗೂ ಇತರೆ ಸಣ್ಣಪುಟ್ಟ ಕಾಮಗಾರಿ ಜರುಗಲಿದೆ. ಮೇ ಅಂತ್ಯದ ವೇಳೆಗೆ ಜಲಾಶಯದ ಎಲ್ಲ 33 ಗೇಟ್ ಗಳಿಗೆ ಚೈನ್ ಅಳವಡಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಸಚಿವ ಭೇಟಿಯಿಂದ ಅಧಿಕಾರಿಗಳಲ್ಲಿ ಹುಮ್ಮಸ್ಸು: ಆಂಧ್ರ ಪ್ರದೇಶದ ಹಣಕಾಸು ಸಚಿವ ಕೇಶವ ಹಾಗೂ ಸರ್ಕಾರದ ಮುಖ್ಯ ಸಚೇತಕ ಶ್ರೀನಿವಾಸಲು ಫೆ.28ಕ್ಕೆ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ನೂತನ ಗೇಟ್‌ ಅಳವಡಿಕೆ ಕಾಮಗಾರಿ ಪರಿಶೀಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕ ರಾಜ್ಯವು ಈ ಕಾಮಗಾರಿಗೆ ನೀಡುತ್ತಿರುವ ಸಹಕಾರ ಹಾಗೂ ಜಲಾಶಯದ ನೂತನ ಗೇಟುಗಳ ಜೋಡಣೆ ವಿಷಯದಲ್ಲಿ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಹಾಗೂ ಇಂಜಿನಿಯರ್ ಅಚ್ಚುಕಟ್ಟಾಗಿ ಮಾಡುತ್ತಿರುವ ಕಾರ್ಯವನ್ನು ಸಚಿವರು ಹಾಗೂ ಮುಖ್ಯ ಸಚೇತಕರು ಮುಕ್ತ ಕಂಠದಿಂದ ಹೊಗಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸಚಿವರು ಹಾಗೂ ಮುಖ್ಯ ಸಚೇತಕರ ಹೊಗಳಿಕೆಯಿಂದ ತುಂಗಭದ್ರಾ ಮಂಡಳಿಯ ಅಧಿಕಾರಿಗಳಿಗೆ ಮತ್ತಷ್ಟು ಉತ್ಸಾಹ ಮತ್ತು ಹುಮ್ಮಸ್ಸು ದೊರೆಯಿತು.

ಏಪ್ರಿಲ್ ಅಂತ್ಯದ ವೇಳೆಗೆ ತುಂಗಭದ್ರಾ ಜಲಾಶಯದ ಎಲ್ಲ 33 ಹಳೆ ಗೇಟ್‌ ಬದಲಿಸಿ ನೂತನ ಗೇಟ್‌ ಅಳವಡಿಕೆ ಕಾರ್ಯ ಪೂರ್ಣವಾಗಲಿದೆ. ಇನ್ನು ಮುಂದೆ ಕೆಲಸಕ್ಕೆ ವೇಗ ಸಿಗಲಿದೆ ಎಂದು ಮುಖ್ಯ ಅಭಿಯಂತರ ಮಲಗಿವಾಡ್ ತಿಳಿಸಿದ್ದಾರೆ.