ಕುರಿ ದೊಡ್ಡಿಯಾದ ನೂತನ ಸರ್ಕಾರಿ ಪಿಯು ಕಾಲೇಜು

| Published : Nov 04 2023, 12:30 AM IST

ಕುರಿ ದೊಡ್ಡಿಯಾದ ನೂತನ ಸರ್ಕಾರಿ ಪಿಯು ಕಾಲೇಜು
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಘಾಟನೆ ಭಾಗ್ಯ ದೊರೆತು ಮಕ್ಕಳಿಗೆ ಅನುಕೂಲವಾಗಬೇಕಾದ ಕಟ್ಟಡ ಮದ್ಯಪ್ರಿಯರ ತಾಣವಾಗಿದೆ. ಅಲ್ಲದೇ ಕುರಿಗಳ ದೊಡ್ಡಿಯಾಗಿ ಮಾರ್ಪಟ್ಟಿರುವುದು ಶಿಕ್ಷಣಪ್ರೇಮಿಗಳಲ್ಲಿ ಆಕ್ರೋಶ ಮೂಡಿಸಿದೆ.

ಎನ್. ಪಂಪನಗೌಡ ಬಾದನಹಟ್ಟಿ

ಕನ್ನಡಪ್ರಭ ವಾರ್ತೆ ಕುರುಗೋಡುಇಲ್ಲಿನ ಪಿಯು ಕಾಲೇಜು ನೂತನ ಕಟ್ಟಡ ಉದ್ಘಾಟನೆಗೊಂಡು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಬದಲು ಕುರಿ ದೊಡ್ಡಿಯಾಗಿ ಮಾರ್ಪಟ್ಟಿದೆ!.ಹೌದು, ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿ 2018- 19ನೇ ಸಾಲಿನಲ್ಲಿ ಎಚ್‌ಕೆಆರ್‌ಡಿಬಿ ಯೋಜನೆಯಡಿ ಪ್ರಥಮದರ್ಜೆ ಕಾಲೇಜಿನ ಪಕ್ಕದಲ್ಲಿ ₹1,96 ಕೋಟಿ ವೆಚ್ಚದಲ್ಲಿ 18 ಕೊಠಡಿಗಳ ಸರ್ಕಾರಿ ಪಿಯು ಕಾಲೇಜಿನ ನೂತನ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಗತಿಸಿವೆ. ಉದ್ಘಾಟನೆ ಭಾಗ್ಯ ದೊರೆತು ಮಕ್ಕಳಿಗೆ ಅನುಕೂಲವಾಗಬೇಕಾದ ಕಟ್ಟಡ ಮದ್ಯಪ್ರಿಯರ ತಾಣವಾಗಿದೆ. ಅಲ್ಲದೇ ಕುರಿಗಳ ದೊಡ್ಡಿಯಾಗಿ ಮಾರ್ಪಟ್ಟಿರುವುದು ಶಿಕ್ಷಣಪ್ರೇಮಿಗಳಲ್ಲಿ ಆಕ್ರೋಶ ಮೂಡಿಸಿದೆ. ಕಳೆದ 15 ದಿನಗಳಿಂದ ಕಾಲೇಜಿನ ಆವರಣದಲ್ಲಿ ಕುರಿಗಳನ್ನು ನಿಲ್ಲಿಸಲಾಗುತ್ತಿದೆ. ಆದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಿಲ್ಲ.

ಹಳೆ ಕಟ್ಟಡದ ದುಸ್ಥಿತಿ:ನೂತನ ಕಟ್ಟಡ ಉದ್ಘಾಟನೆ ಆಗದಿರುವ ಹಿನ್ನೆಲೆ ಅನಿವಾರ್ಯವಾಗಿ ಪಟ್ಟಣದ ನಾಡಗೌಡರ ಸರ್ಕಾರಿ ಪ್ರೌಢಶಾಲೆ ಅವರಣದ ಹಿಂದೆ ಇರುವ ಹಳೆಯ ಕಟ್ಟಡಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ದುಸ್ಥಿತಿ ಎದುರಾಗಿದ್ದು, ಮಳೆ ಬಂದರೆ ಸಾಕು ಹಳೆ ಕಟ್ಟಡ ಸೋರುತ್ತದೆ. ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲ. ಉಪನ್ಯಾಸಕರ ಕೊರತೆ ಎದ್ದು ಕಾಣುತ್ತದೆ. ವಿದ್ಯಾರ್ಥಿಗಳಿಗೆ ಸರಿಯಾದ ಲ್ಯಾಬ್ ವ್ಯವಸ್ಥೆ ಇಲ್ಲ.

ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಲಾ, ವಾಣಿಜ್ಯ, ಶಿಕ್ಷಣ, ವಿಜ್ಞಾನ ವಿಭಾಗದಲ್ಲಿ ಒಟ್ಟು 570 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.6 ಕಾಯಂ ಉಪನ್ಯಾಸಕರು, 6 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ, ಇಂಗ್ಲಿಷ್‌, ಇತಿಹಾಸ, ರಾಜಕೀಯಶಾಸ್ತ್ರ ವಿಷಯಗಳಿಗೆ ಸರಿಯಾದ ಉಪನ್ಯಾಸಕರು ಇಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಹಳೆಯ ಕಟ್ಟಡದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವುದರಿಂದ ಕೊಠಡಿಗಳ ಕೊರತೆ ಬಹಳ ಎದ್ದು ಕಾಣುತ್ತಿದೆ.

ಶುದ್ಧ ನೀರಿನ ವ್ಯವಸ್ಥೆ ಇಲ್ಲ:ವಿದ್ಯಾರ್ಥಿಗಳಿಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಒಂದು ವೇಳೆ ನೀರು ಕುಡಿಯಬೇಕಾದರೆ ಪಕ್ಕದ ಪ್ರೌಢಶಾಲೆಗೆ ಹೋಗಬೇಕಾಗಿದೆ. ಇಲ್ಲದಿದ್ದರೆ ಉಪಾಹಾರ ಸಮಯದಲ್ಲಿ ಮುಖ್ಯರಸ್ತೆಯ ಬದಿಯಲ್ಲಿರುವ ಬೇಕರಿ, ಟೀ ಸ್ಟಾಲ್‌ಗಳಿಗೆ ತೆರಳಿ ನೀರು ಕುಡಿಯಬೇಕಾದ ಅನಿವಾರ್ಯತೆ ಇದೆ.

ಶೌಚಾಯಯ ಇಲ್ಲ:ಕಾಲೇಜಿನಲ್ಲಿ ಶೌಚಾಲಯದ ವ್ಯವಸ್ಥೆ ಕೂಡ ಇಲ್ಲದಾಗಿದೆ. ವಿದ್ಯಾರ್ಥಿಗಳು ಶೌಚಾಲಯಕ್ಕಾಗಿ ಸಮೀಪದ ಗುಡ್ಡದ ಕಡೆಗೆ ಬಯಲು ಬಹಿರ್ದೆಸೆಗೆ ತೆರಳುತ್ತಾರೆ. ವಿದ್ಯಾರ್ಥಿನಿಯರು ಪಕ್ಕದ ಪ್ರೌಢಶಾಲೆಯಲ್ಲಿರುವ ಶೌಚಾಲಯವನ್ನು ಉಪಯೋಗಿಸುತ್ತಾರೆ.ಉಗ್ರ ಹೋರಾಟ:

ನೂತನ ಕಾಲೇಜು ಕಟ್ಟಡ ಉದ್ಘಾಟನೆಗೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆಗಳು ಸಂಪೂರ್ಣ ನಿರ್ಲಕ್ಷ್ಯ ತೋರಿವೆ. ಈ ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಶೀಘ್ರ ಉದ್ಘಾಟನೆ ನೆರವೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎನ್ನುತ್ತಾರೆ ರೈತ ಮುಖಂಡ ವಿ.ಎಸ್. ಶಿವಶಂಕರ್.

ಉದ್ಘಾಟನೆಗೆ ಯತ್ನ:ಪಿಯು ಕಾಲೇಜು ಕಟ್ಟಡ ಉದ್ಘಾಟನೆ ವಿಷಯ ನನ್ನ ಗಮನಕ್ಕೆ ಇದೆ. ಶೀಘ್ರದಲ್ಲಿ ಶಿಕ್ಷಣ ಹಾಗೂ ಸಂಬಂಧಿಸಿದ ಅಧಿಕಾರಿಗಳ ಹತ್ತಿರ ಮಾತನಾಡಿ ಉದ್ಘಾಟನೆ ಮಾಡಲು ಪ್ರಯತ್ನಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು ಉಸ್ತುವಾರಿ ಸಚಿವ ಬಿ. ನಾಗೇಂದ್ರ.