ರಾಮನಗರ: 2025ರ ಹೊಸ ಆದಾಯ ತೆರಿಗೆ ಕಾಯ್ದೆಯು ಸರಳ ಸ್ಪಷ್ಟ, ಪಾರದರ್ಶಕ ಹಾಗೂ ತೆರಿಗೆದಾರಸ್ನೇಹಿ ವ್ಯವಸ್ಥೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಬೆಂಗಳೂರಿನ ಆದಾಯ ತೆರಿಗೆ ರೇಂಜ್-3ರ ಹೆಚ್ಚುವರಿ ಆಯುಕ್ತ ಆರ್.ಚೇತನ್ ತಿಳಿಸಿದರು
ರಾಮನಗರ: 2025ರ ಹೊಸ ಆದಾಯ ತೆರಿಗೆ ಕಾಯ್ದೆಯು ಸರಳ ಸ್ಪಷ್ಟ, ಪಾರದರ್ಶಕ ಹಾಗೂ ತೆರಿಗೆದಾರಸ್ನೇಹಿ ವ್ಯವಸ್ಥೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಬೆಂಗಳೂರಿನ ಆದಾಯ ತೆರಿಗೆ ರೇಂಜ್-3ರ ಹೆಚ್ಚುವರಿ ಆಯುಕ್ತ ಆರ್.ಚೇತನ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆ, ಕರ್ನಾಟಕ ಮತ್ತು ಗೋವಾ ತೆರಿಗೆ ಇಲಾಖೆ ಸಹಯೋಗದಲ್ಲಿ ಬೆಂಗಳೂರು ವ್ಯಾಪ್ತಿಯ ಆದಾಯ ತೆರಿಗೆ 3ರ ಪ್ರಧಾನ ಆಯುಕ್ತರು ಹಾಗೂ ರಾಮನಗರ ಆದಾಯ ತೆರಿಗೆ ಇಲಾಖೆ ವತಿಯಿಂದ ಪ್ರಾರಂಭ್-2026 ಎಂಬ ಆದಾಯ ತೆರಿಗೆ ಕಾಯ್ದೆ-2025 ರಾಷ್ಟ್ರ ವ್ಯಾಪ್ತಿಯ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.2026ರ ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಸಂಪೂರ್ಣ ಕಾಯ್ದೆಯು ರಾಷ್ಟ್ರಾದ್ಯಂತ ಸಂಪೂರ್ಣ ಜಾರಿಗೆ ಬಂದಿದ್ದು, ಈ ಕುರಿತು ಜಾಗೃತಿ ಮೂಡಿಸಲು ಪ್ರಾರಂಭ್-2026 ಕಾರ್ಯಕ್ರಮದಡಿ ಆದಾಯ ತೆರಿಗೆ ಇಲಾಖೆಯು ದೇಶಾದ್ಯಂತ ಜಾಗೃತಿ ಅಭಿಯಾನ ನಡೆಸುತ್ತಿದೆ. 1961ರ ಆದಾಯ ತೆರಿಗೆ ಕಾಯ್ದೆಗೆ ಬದಲಿಯಾಗಿ ಜಾರಿಗೊಂಡಿರುವ 2025ರ ಹೊಸ ಆದಾಯ ತೆರಿಗೆ ಕಾಯ್ದೆಯು ದೇಶದ ತೆರಿಗೆ ನಿರ್ವಹಣೆಯಲ್ಲಿ ಮಹತ್ವದ ಪರಿವರ್ತನೆಗೆ ಕಾರಣವಾಗಲಿದೆ. ಸರಳ, ಸ್ಪಷ್ಟ, ಪಾರದರ್ಶಕ ಹಾಗೂ ತೆರಿಗೆ ಸ್ನೇಹಿ ಮಾಡುವ ಗುರಿಯನ್ನು ಈ ಹೊಸ ಆದಾಯ ತೆರಿಗೆ ಕಾಯ್ದೆ ಒಳಗೊಂಡಿದೆ ಎಂದು ಹೇಳಿದರು.
ಹಳೆಯ ತೆರಿಗೆ ಕಾಯ್ದೆ ಅನೇಕ ತಿದ್ದುಪಡಿಗಳು, ಗೊಂದಲಗಳು ಹಾಗೂ ವ್ಯಾಜ್ಯಗಳಿಗೆ ಕಾರಣವಾಗಿತ್ತು. ಆದರೆ ಹೊಸ ತೆರಿಗೆ ಕಾಯ್ದೆಯು ತೆರಿಗೆಯ ನಿಶ್ಚಿತತೆ ಹಾಗೂ ಡಿಜಿಟಲ್ ಸುಗಮತೆಗೆ ಆದ್ಯತೆ ನೀಡಿದೆ ಎಂದರು.ತೆರಿಗೆದಾರರ ತೊಡಗಿಸಿಕೊಳ್ಳುವಿಕೆ ಮತ್ತು ಅನುಕೂಲಕ್ಕಾಗಿ ಕರಸೇತು (ಕರ್‌ಸಾಥಿ) ಎಂಬ 247 ಕೃತಕ ಬುದ್ದಿ ಮತ್ತೆ (ಎಐ) ಆಧಾರಿತ ಚಾಟ್‌ಬಾಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಚಾರ್ಟರ್ಡ್ ಅಕೌಂಟಂಟ್‌ಗಳು, ತೆರಿಗೆ ವೃತ್ತಿಪರರು ಹಾಗೂ ಲೆಕ್ಕಪತ್ರ ವಿಭಾಗದ ಸಿಬ್ಬಂದಿ ಈ ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಸಲ್ಲಿಕೆ ದೋಷಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಹಳೆಯ ಕಾಯ್ದೆಯಲ್ಲಿದ್ದ ಅನಗತ್ಯ ನಿಬಂಧನೆಗಳು ಮತ್ತು ಸಂಕೀರ್ಣ ಭಾಷೆಯನ್ನು ಹೊಸ ತೆರಿಗೆ ಕಾಯ್ದೆಯಲ್ಲಿ ತೆಗೆದು ಹಾಕಲಾಗಿದೆ. 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ 819 ಸೆಕ್ಷನ್‌ಗಳಿದ್ದವು. 2025ರ ಹೊಸ ತೆರಿಗೆ ಕಾಯ್ದೆಯಲ್ಲಿ 536 ಸೆಕ್ಷನ್‌ಗಳಿಗೆ ಇಳಿಸಲಾಗಿದೆ. ಅಧ್ಯಾಯಗಳು ಸಹ 47 ರಿಂದ 23ಕ್ಕೆ ಇಳಿದಿದೆ. ಹಳೆಯ ಕಾಯ್ದೆಯಲ್ಲಿ 5.12 ಲಕ್ಷ ಪದಗಳಿದ್ದವು. ಈಗಿನ ಕಾಯಿದೆಯಲ್ಲಿ 2.6 ಲಕ ಪದಗಳಿಗೆ ಕಡಿಮೆಯಾಗಿದೆ. ಕಾಯ್ದೆ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮೂಡಿಸಲು 57 ಕೋಷ್ಟಕಗಳು, 16 ಶೆಡ್ಯೂಲ್ ಮತ್ತು 46 ಸೂತ್ರಗಳಿಗೆ ಇಳಿಸಲಾಗಿದೆ ಎಂದು ವಿವರಿಸಿದರು.ಹೊಸ ಆದಾಯ ತೆರಿಗೆ ಕಾಯ್ದೆ ಯಾವುದೇ ಹೊಸ ತೆರಿಗೆ ದರವನ್ನು ವಿಧಿಸುವುದಿಲ್ಲ ಸಂಕೀರ್ಣವಾಗಿರುವ ಹಳೆಯ ಆದಾಯ ತೆರಿಗೆ ಕಾಯ್ದೆಯ ಭಾಷೆಯು ತೆರಿಗೆದಾರರಿಗೆ ಸರಳವಾಗಿ ಅರ್ಥಮಾಡಿಕೊಳ್ಳುವಂತೆ ಭಾಷೆಯನ್ನು ಸರಳೀಕರಿಸಲಾಗಿದೆ ಎಂದರು.
ರಾಮನಗರ ಜಿಲ್ಲಾ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರಾದ ಶ್ರೀವಿದ್ಯಾ, ಜಿಲ್ಲೆಯ ಚಾರ್ಟಡ್ ಅಕೌಂಟಂಟ್‌ಗಳು, ತೆರಿಗೆ ವೃತ್ತಿ ಪರರ ಸಂಘಗಳ ಪ್ರತಿನಿಧಿಗಳು, ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು, ತೆರಿಗೆ ವೃತ್ತಿ ಪರರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.10ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾರಂಭ್-2026 ಆದಾಯ ತೆರಿಗೆ ಕಾಯ್ದೆ-2025 ರಾಷ್ಟ್ರ ವ್ಯಾಪ್ತಿಯ ಜಾಗೃತಿ ಅಭಿಯಾನದಲ್ಲಿ ಆದಾಯ ತೆರಿಗೆ ಇಲಾಖೆಯ ಬೆಂಗಳೂರಿನ ಆದಾಯ ತೆರಿಗೆ ರೇಂಜ್-3ರ ಹೆಚ್ಚುವರಿ ಆಯುಕ್ತ ಆರ್.ಚೇತನ್ ಮಾತನಾಡಿದರು.