ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಕೆ.ಎನ್.ರಾಮಕೃಷ್ಣ ಅವರು ಫೆ.23ರಂದು ಬೆಳಗ್ಗೆ 10.30ಕ್ಕೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮಾಜಿ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯಸಮಿತಿ ಸಭೆಯಲ್ಲಿ 15 ಜಿಲ್ಲೆಯ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದು, ನನಗೆ ವಯಸ್ಸಾಗಿದೆ, ಒಂದು ವರ್ಷ ಮಾತ್ರ ಅಧ್ಯಕ್ಷನಾಗಿರುತ್ತೇನೆ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಕಳೆದ ಮೂರು ವರ್ಷದಿಂದ ನಾನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಕೆ.ಎನ್.ರಾಮಕೃಷ್ಣ ಅವರು ಕಳೆದ 42 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮುಂದಾಳತ್ವದಲ್ಲಿ ಪಕ್ಷದ ಎಲ್ಲಾ ಕಾರ್ಯಗಳು ನಡೆದಿವೆ ಎಂದರು.

ಕೆ.ಎನ್.ರಾಮಕೃಷ್ಣ ಅವರು ಕಳೆದ 42 ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದಾರೆ. ಅನುಭವಿ ರಾಜಕಾರಣಿಯಾಗಿರುವ ಅವರ ಸಹಕಾರದಿಂದ ನಾನು ಮೂರು ವರ್ಷ ಅಧ್ಯಕ್ಷನಾಗಿ ಪಕ್ಷವನ್ನು ಸಂಘಟಿಸಿದ್ದೇನೆ. ನನ್ನ ಅವಧಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಲೋಕಸಭಾ ಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅತ್ಯಧಿಕ ಮತಗಳಿಂದ ಜಯಗಳಿಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆಗಳು ನಡೆದಿವೆ. ಹಾಗೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗಿದೆ ಎಂದರು.

ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಎನ್.ರಾಮಕೃಷ್ಣ ಮಾತನಾಡಿ, 42 ವರ್ಷಗಳಿಂದ ಜನತಾದಳ, ಜಾತ್ಯತೀತ ಜನತಾದಳದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು, 16 ವರ್ಷ ಶಿವಮೊಗ್ಗ ತಾಲೂಕು ಅಧ್ಯಕ್ಷನಾಗಿ, 8 ವರ್ಷ ಜಿಲ್ಲಾ ಘಟಕದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ಈ ನನ್ನ ಸಾಧನೆ ಗುರುತಿಸಿ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಅಧ್ಯಕ್ಷನನ್ನಾಗಿ ನೇಮಕಮಾಡಿದ್ದಾರೆ ಎಂದು ತಿಳಿಸಿದರು.


ವರಿಷ್ಠರ ಆದೇಶದಂತೆ ಜಿಲ್ಲೆಯಲ್ಲಿ ಪ್ರವಾಸ ಮಾಡಿ ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ ಪಕ್ಷವನ್ನು ಸಂಘಟಿಸುತ್ತೇನೆ. ನಂತರ ದೊಡ್ಡಮಟ್ಟದ ಸಮಾರಂಭದಲ್ಲಿ ಅಧಿಕೃತವಾಗಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಲಿದ್ದೇನೆ. 33 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿದ್ದು, ಕಳೆದ 20 ವರ್ಷಗಳಿಂದ ಮಲೆನಾಡು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ನನ್ನ ಸಾಧನೆಗಾಗಿ ಹಲವು ಪ್ರಶಸ್ತಿಗಳು ಬಂದಿವೆ ಎಂದರು.

ಫೆ.23 ರಂದು ನಡೆಯುವ ಸರಳ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಶಾಸಕಿ ಶಾರದಾಪೂರ್‍ಯನಾಯ್ಕ, ಮಾಜಿ ಶಾಸಕ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಶಾರದಾ ಅಪ್ಪಾಜಿಗೌಡ ಇನ್ನಿತರ ಮುಖಂಡರು ಭಾಗವಹಿಸಲಿದ್ದು, ನಂತರ ನಡೆಯುವ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ಜಿಲ್ಲೆಯಲ್ಲಿ ಪಕ್ಷ ದಿನದಿಂದ ದಿನಕ್ಕೆ ಸದೃಢವಾಗುತ್ತಿದೆ ಎಂದರು.

ಜೆಡಿಎಸ್ ಪಕ್ಷದ ರಜತ ಮಹೋತ್ಸವ ಸಮಾರಂಭವು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದು, ಫೆ.27ರಂದು ವಿಜಯಪುರದಲ್ಲಿ ನಡೆಯುವ ರಜತ ಮಹೋತ್ಸವ ಸಮಾರಂಭದಲ್ಲಿ ಜಿಲ್ಲೆಯಿಂದಲೂ ಸಹ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಪಕ್ಷದ ಹಿರಿಯ ಮುಖಂಡ ಎಸ್.ಮುಕುಂದ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯೊಂದಿಗೆ ಕಳೆದ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದರಿಂದ ಪಕ್ಷ ಸಾಕಷ್ಟು ಬಲಿಷ್ಠಗೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದರು.

ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಕೇಶ್ ಡಿಸೋಜಾ, ದಾದಾಪೀರ್, ಅಬ್ದುಲ್ ವಾಜೀದ್, ತ್ಯಾಗರಾಜ್, ಎಂ.ಉಮಾಶಂಕರ ಉಪಾಧ್ಯ, ಎಚ್.ಎಂ.ಸಂಗಯ್ಯ, ಪ್ರೇಮ್‌ಕುಮಾರ್, ನರಸಿಂಹ ಗಂಧದಮನೆ, ನಾಗೇಶ್, ನಿಖಿಲ್ ಇನ್ನಿತರರು ಉಪಸ್ಥಿತರಿದ್ದರು.