ಸಾರಾಂಶ
ರಾಣಿಬೆನ್ನೂರು: ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹಾಗೂ ಕಾನೂನು ಬಾಹಿರವಾಗಿ ತೆರೆದಿರುವ ಮದ್ಯದ ಅಂಗಡಿಯನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆ ಹಾಗೂ ಮಹಿಳೆಯರು ಗುರುವಾರ ತಾಲೂಕಿನ ಕುಮಾರಪಟ್ಟಣಂ ಗ್ರಾಮದ ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ದಲಿತ ಸಂಘಟನೆಯ ಮುಖಂಡ ಕೆ.ಆರ್. ಉಮೇಶ ಮಾತನಾಡಿ, ಉತ್ತರ ಕರ್ನಾಟಕ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿರುವ ಕುಮಾರಪಟ್ಟಣಂ ಗ್ರಾಮದ ಮಧ್ಯ ಭಾಗದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹಾಗೂ ಕಾನೂನು ಬಾಹಿರವಾಗಿ ಮದ್ಯದಂಗಡಿಗೆ ಪರವಾನಗಿ ನೀಡಲಾಗಿದೆ. ಅಬಕಾರಿ ಇಲಾಖೆಯ ಕಾನೂನಿನ ಪ್ರಕಾರ ಗ್ರಾಮದಲ್ಲಿ ತೆರೆದಿರುವ ಮದ್ಯದ ಅಂಗಡಿಗೆ ಮದ್ಯ ಮಾರಾಟ ಮಾಡುವ ಅವಕಾಶವಿಲ್ಲ. ಆದರೂ ಅಬಕಾರಿ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿನಿಂದ ಮದ್ಯ ಮಾರಾಟ ಮಾಡಲಾಗುತ್ತದೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದು ಅವರೆಲ್ಲಾ ಮದ್ಯದ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುವ ಸಂಭವ ಹೆಚ್ಚಾಗಿದೆ. ಕೂಡಲೇ ಈ ಮದ್ಯ ಅಂಗಡಿಯನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.ಅಬಕಾರಿ ಇಲಾಖೆಯ ಅಧಿಕಾರಿಗಳು ಕಾನೂನಿನ ಪ್ರಕಾರ ಇದ್ದರೆ ಮಾತ್ರ ಮಾರಾಟ ಮಾಡಿಸಲಿ. ಆದರೆ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಇದನ್ನು ಬಂದ್ ಮಾಡದೆ ಇದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಹನುಮಂತ ಹರಿಹರ, ಸಂಗಪ್ಪ ಬಾರ್ಕಿ, ಗೋವಿಂದ ಹರಿಹರ, ರೇಣುಕಾ ಲಮಾಣಿ, ಭಾಗ್ಯಮ್ಮ ತುಮ್ಮಿನಕಟ್ಟಿ, ಮಮತಾ ತುಮ್ಮಿನಕಟ್ಟಿ, ಬಸಮ್ಮ ಬನ್ನಿಹಟ್ಟಿ, ರುದ್ರಮ್ಮ ತುಮ್ಮಿನಕಟ್ಟಿ, ಗಂಗಮ್ಮ ಉಪ್ಪಾರ, ಯಲ್ಲಮ್ಮ ನೇಕಾರ ಮತ್ತಿತರರಿದ್ದರು. ನಾವು ಸರ್ಕಾರದ ನಿಯಮಾವಳಿ ಪ್ರಕಾರವೇ ಪರವಾನಗಿ ಪಡೆದು ಅಂಗಡಿ ನಡೆಸುತ್ತಿದ್ದೇವೆ ಎಂಬುದು ಮದ್ಯದ ಅಂಗಡಿ ಮಾಲೀಕರ ವಾದವಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))