ಇಂದಿರಾ ಕ್ಯಾಂಟೀನ್‌ ನಲ್ಲಿ ಹೊಸ ಮೆನು ಜಾರಿ

| Published : Jun 21 2024, 01:01 AM IST

ಸಾರಾಂಶ

ಉಪಹಾರ, ಊಟದಲ್ಲಿ ಬಗೆ ಬಗೆಯ ಆಹಾರ ವಿತರಣೆ. ದರದಲ್ಲಿ ಬದಲಾವಣೆ ಇಲ್ಲ: ಡಿಸಿ ಜಾನಕಿ ಸ್ಪಷ್ಟನೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್‌ ನಲ್ಲಿ ಜೂನ್ 19 ರಿಂದ ಹೊಸ ಮೆನು ಜಾರಿಗೆ ಬರಲಿದ್ದು, ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಸಾಕಷ್ಟು ಬಗೆ ಬಗೆಯ ಋಚಿಕರ ಆಹಾರ ಪದಾರ್ಥಗಳು ಇರಲಿವೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ಸರ್ಕಾರದಿಂದ ನಿಗದಿಪಡಿಸಿದ ಮೊದಲಿನ ದರದಂತೆ ಸಾರ್ವಜನಿಕರಿಂದ ಬೆಳಗಿನ ಉಪಹಾರಕ್ಕೆ ₹ 5 ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ₹ 10 ಮಾತ್ರ ಪಡೆಯಲಾಗುತ್ತಿದ್ದು, ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವಾರದಲ್ಲಿ ಪೂರೈಸಬೇಕಾದ ಆಹಾರದ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಮೆನುವನ್ನು ಸರ್ಕಾರ ನಿಗದಿಪಡಿಸಿದೆ. ಯಾವುದೇ ಹೆಚ್ಚುವರಿ ದರ ನಿಗದಿಪಡಿಸಿಲ್ಲ. ಪ್ರತಿಯೊಬ್ಬ ಫಲಾನುಭವಿಗೆ ಪ್ರತಿ ದಿನಕ್ಕೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಹೆಚ್ಚುವರಿ ಪಾವತಿಸಬೇಕಾದ ಮೊತ್ತ ₹ 36.45ನ್ನು ಸರ್ಕಾರ ಭರಿಸಲಿದೆ.

ಸಾರ್ವಜನಿಕರು ಕ್ಯಾಂಟೀನದಲ್ಲಿ ಸಿಗುವ ಉಪಹಾರ ಮತ್ತು ಊಟದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ಬೆಳಗಿನ ಉಪಹಾರ: ಬೆಳಗಿನ ಉಪಹಾರದ ಐಟಂ-1ರಲ್ಲಿ ಭಾನುವಾರದಿಂದ ಮಂಗಳವಾರ ಮತ್ತು ಗುರುವಾರದಿಂದ ಶನಿವಾರದ ವರೆಗೆ 3 ಇಡ್ಲಿ ಜೊತೆಗೆ ಸಾಂಬಾರ್, ಬುಧವಾರ ಮಾತ್ರ 3 ಇಡ್ಲಿ ಜೊತೆ ಕರಿಬೇವು ಚಟ್ನಿ ನೀಡಲಾಗುತ್ತದೆ. ಐಟಂ-2ನಲ್ಲಿ ಭಾನುವಾರ ಕೇಸರಿ ಬಾತ್, ಖಾರಾ ಬಾತ್ ಜೊತೆ ಚಟ್ನಿ, ಸೋಮವಾರ ಮಂಡಕ್ಕಿ, ಬಜ್ಜಿ, ಮಂಗಳವಾರ ಖಾರಾಬಾತ್ ಜೊತೆ ಚಟ್ನಿ, ಬುಧವಾರ ಅವಲಕ್ಕಿ ಜೊತೆ ಚಟ್ನಿ, ಗುರುವಾರ ವೆಜ್ ಫಲಾವ್ ಜೊತೆ ರೈತಾ, ಶುಕ್ರವಾರ ಚಿತ್ರಾನ್ನ ಜೊತೆ ಚಟ್ನಿ, ಶನಿವಾರ ಆಲೂ ಬಾತ್ ಜೊತೆ ಚಟ್ನಿ ನೀಡಲಾಗುವುದು.

ಮಧ್ಯಾಹ್ನದ ಮೆನು: ಐಟಂ-1ರಲ್ಲಿ ಭಾನುವಾರ ಅನ್ನ ಜೊತೆಗೆ ಅಲಸಂದೆ ಕಾಳು ಸಾಂಬಾರ್, ಸೋಮವಾರ ಅನ್ನದ ಜೊತೆ ಮೂಲಂಗಿ ಸಾಂಬಾರ್, ಮಂಗಳವಾರ ಅನ್ನದ ಜೊತೆ ಬದನೆಕಾಯಿ ಹಾಗೂ ರಾಗಿ ಅಂಬಲಿ, ಬುಧವಾರ ಅನ್ನದ ಜೊತೆ ಬೀನ್ಸ್‌ ಸಾಂಬಾರ್ ಹಾಗೂ ಮೊಸರನ್ನ, ಗುರುವಾರ ಅನ್ನದ ಜೊತೆ ಮೊಳಕೆ ಕಾಳು ಸಾಂಬಾರ್ ಹಾಗೂ ಕೀರ್, ಶುಕ್ರವಾರ ಅನ್ನದ ಜೊತೆ ಹೀರೆಕಾಯಿ ಸಾಂಬಾರ್ ಹಾಗೂ ರಾಗಿ ಅಂಬಲಿ, ಶನಿವಾರ ಅನ್ನದ ಜೊತೆಗೆ ಕುಂಬಳಿಕಾಯಿ ಸಾಂಬಾರ್ ಹಾಗೂ ಕೀರ್ ನೀಡಲಾಗುತ್ತಿದೆ.

ಐಟಂ-2ನಲ್ಲಿ 2 ಭಾನುವಾರ ಜೋಳದ ರೊಟ್ಟಿ ಜೊತೆ ಸೊಪ್ಪು ಪಲ್ಯ ಹಾಗೂ ಕೀರ್, ಮಂಗಳವಾರ 2 ಚಪಾತಿ ಜೊತೆ ಸಾಗು ಹಾಗೂ ರಾಗಿ ಅಂಬಲಿ, ಬುಧವಾರ 2 ಚಪಾತಿ ಜೊತೆ ಸಾಗು ಹಾಗೂ ಮೊಸರನ್ನ, ಗುರುವಾರ 2 ಜೋಳದ ರೊಟ್ಟಿ ಜೊತೆ ಸೊಪ್ಪು ಪಲ್ಯ ಹಾಗೂ ಕೀರ್, ಶುಕ್ರವಾರ 2 ಚಪಾತಿ ಜೊತೆ ಸಾಗು ಹಾಗೂ ರಾಗಿ ಅಂಬಲಿ, ಶನಿವಾರ 2 ಜೋಳದ ರೊಟ್ಟಿ ಜೊತೆ ಸೊಪ್ಪು ಪಲ್ಯ ಹಾಗೂ ಕೀರ್ ನೀಡಲಾಗುತ್ತದೆ.

ರಾತ್ರಿ ಊಟದ ಮೆನು

ಐಟಂ-1ರಲ್ಲಿ ಭಾನುವಾರ ಅನ್ನದ ಜೊತೆ ಮೊಳಕೆ ಕಾಳು ಸಾಂಬಾರ್, ಸೋಮವಾರ ಅನ್ನದ ಜೊತೆಗೆ ಹಿರೇಕಾಯಿ ಸಾಂಬಾರ್, ಮಂಗಳವಾರ ಅನ್ನದ ಜೊತೆ ಕುಂಬಳಕಾಯಿ ಸಾಂಬಾರ್, ಬುಧವಾರ ಅನ್ನದ ಜೊತೆ ಮೂಲಂಗಿ ಸಾಂಬಾರ್, ಗುರುವಾರ ಅನ್ನದ ಜೊತೆ ಬದನೆಕಾಯಿ, ಶುಕ್ರವಾರ ಅನ್ನದ ಜೊತೆ ಅಲಸಂದೆ ಕಾಳು ಸಾಂಬಾರ್, ಶನಿವಾರ ಅನ್ನದ ಜೊತೆ ನುಗ್ಗೆಕಾಯಿ ಸಾಂಬಾರ್. ಐಟಂ-2ನಲ್ಲಿ ಭಾನುವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ 2 ಜೋಳದ ರೊಟ್ಟಿ ಜೊತೆ ಸೊಪ್ಪು ಪಲ್ಯ, ಸೋಮವಾರ, ಬುಧವಾರ ಮತ್ತು ಶುಕ್ರವಾರ 2 ಚಪಾತಿ ಜೊತೆ ಸಾಗು ನೀಡಲಾಗುತ್ತದೆ.