ಅನಿವಾಸಿ ಭಾರತೀಯರ ಹಿತಾಸಕ್ತಿ ಕಾಪಾಡಲು ಹೊಸ ಸಚಿವಾಲಯ: ಡಾ. ಅರತಿ ಕೃಷ್ಣ

| Published : Jan 30 2024, 02:00 AM IST

ಅನಿವಾಸಿ ಭಾರತೀಯರ ಹಿತಾಸಕ್ತಿ ಕಾಪಾಡಲು ಹೊಸ ಸಚಿವಾಲಯ: ಡಾ. ಅರತಿ ಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅನಿವಾಸಿ ಭಾರತೀಯ ಕನ್ನಡಿಗರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅನಿವಾಸಿ ಭಾರತೀಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹೊಸ ಸಚಿವಾಲಯ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಮಟ್ಟದ ಅನಿವಾಸಿ ಭಾರತೀಯ ಕನ್ನಡಿಗರ ಕುಂದುಕೊರತೆ ಹಾಗೂ ಅಹವಾಲುಗಳ ಸ್ವೀಕಾರ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅನಿವಾಸಿ ಭಾರತೀಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹೊಸ ಸಚಿವಾಲಯ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅನಿವಾಸಿ ಭಾರತೀಯ ಕನ್ನಡಿಗರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ, ಭಾರತದಿಂದ ಹೊರ ದೇಶಗಳಿಗೆ ಹೋಗುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊರ ದೇಶಗಳಿಗೆ ಹೋಗುವವರಲ್ಲಿ ಅನೇಕರಿಗೆ ಯಾವುದು ನಿಜವಾದ ಏಜೆನ್ಸಿ ಎಂಬ ಅರಿವು ಇರುವುದಿಲ್ಲ. ಹಾಗಾಗಿ ಕೋಟ ಏಜೆನ್ಸಿಗಳಿಗೆ ಲಕ್ಷಗಟ್ಟಲೆ ಹಣ ತೆತ್ತು ಅವರು ಮೋಸ ಹೋಗುತ್ತಿ ದ್ದಾರೆ ವಿದೇಶಗಳಲ್ಲಿ ಸಿಲುಕಿ ನರಳುತ್ತಿದ್ದಾರೆ ಎಂದರು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಜಿಲ್ಲೆಯಿಂದ ಕಾಂಬೋಡಿಯಾಗೆ ಹೋಗಿ ಸಿಲುಕಿದ್ದ ಯುವಕರೊಬ್ಬರನ್ನು ಇತ್ತೀಚೆಗೆ ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ತಿಳಿಸಿದರು. ಕೊರೋನ ನಂತರ ದೇಶದಿಂದ ವಿಯಟ್ನಾಮ್ ಮತ್ತು ಕಾಂಬೋಡಿಯಾಗೆ ಹೋಗುವವರ ಸಂಖ್ಯೆ ಹೆಚ್ಚಿದೆ, ವಿದೇಶಗಳಿಗೆ ಹೋಗುವವರಿಗೆ ಸಂಘದಿಂದ ತರಬೇತಿ ನೀಡಲು ನಿರ್ಧರಿಸಲಾಗಿದೆ. ಹೊಸ ಸಚಿವಾಲಯ ಅನಿವಾಸಿ ಭಾರತೀಯರನ್ನು ಅವರು ತೊಂದರೆಗೆ ಸಿಲುಕಿದಾಗ ಸ್ವದೇಶಕ್ಕೆ ಕರೆ ತರುವ ಕೆಲಸ ಮಾಡುತ್ತದೆ ಅವರ ಹಿತಾಸಕ್ತಿ ಕಾಪಾಡಲು ಶ್ರಮಿಸುತ್ತದೆ ಎಂದು ಹೇಳಿದರು. ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಜಿಲ್ಲೆ ಅಭಿವೃದ್ಧಿಗೆ ಕೈಜೋಡಿಸುವಂತೆ ಹೆಚ್ಚಿನ ಸಹಕಾರ ನೀಡುವಂತೆ ಡಾ ಆರತಿ ಕೃಷ್ಣ ಅವರಿಗೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಅನಿವಾಸಿ ಭಾರತೀಯರ ಹಿತಾಸಕ್ತಿ ಕಾಪಾಡಲು ಅನಿವಾಸಿ ಸಂಘ ಸ್ಥಾಪಿಸುವ ಅಗತ್ಯವಿದೆ ಎಂದರು. ವಿದೇಶಗಳಿಗೆ ತೆರಳುವವರಿಗೆ ವಿಶೇಷವಾಗಿ ಶಿಕ್ಷಣ ಮತ್ತು ಉದ್ಯೋಗಕ್ಕೆ ತೆರಳುವವರಿಗೆ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ, ಅವರಿಗಾಗಿ ತರಬೇತಿ ಕಾರ್ಯಗಾರ ಹೆಚ್ಚು ನಡೆಸಬೇಕು ಎಂದು ಸಲಹೆ ಮಾಡಿದರು. ಅನಿವಾಸಿ ಭಾರತೀಯ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮಮ್ಮ ಮಾತನಾಡಿ, ಜಿಲ್ಲೆಗಳಲ್ಲಿ ಅನಿವಾಸಿ ಭಾರತೀಯ ಮಾಹಿತಿ ಕೇಂದ್ರ ತೆರೆದು ವಿದೇಶಕ್ಕೆ ವ್ಯಾಸಂಗ ಹಾಗೂ ಉದ್ಯೋಗಕ್ಕೆ ತೆರಳುವವರಿಗೆ ಮಾಹಿತಿ ನೀಡಬೇಕು. ಕೆಲವು ಸಂದರ್ಭದಲ್ಲಿ ಅನಧೀಕೃತ ಏಜೆನ್ಸಿಗಳ ಮೂಲಕ ವಿದೇಶಕ್ಕೆ ತೆರಳುತ್ತಾರೆ. ವಿದೇಶಗಳಲ್ಲಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಅವರ ರಕ್ಷಣೆಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ರಕ್ಷಣೆ ಕಷ್ಟವಾಗುತ್ತದೆ. ಆದ್ದರಿಂದ ಹೊರದೇಶಕ್ಕೆ ಹೋಗುವವರಿಗೆ ಜಾಗೃತಿ ಮೂಡಿಸಬೇಕು ಎಂದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 29 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಅನಿವಾಸಿ ಭಾರತೀಯ ಕನ್ನಡಿಗರ ಕುಂದುಕೊರತೆ ಹಾಗೂ ಅಹವಾಲುಗಳ ಸಭೆಯನ್ನು ಡಾ. ಅರತಿ ಕೃಷ್ಣ ಅವರು ಉದ್ಘಾಟಿಸಿದರು.