ಸಾರಾಂಶ
ಮಾರುಕಟ್ಟೆಗಳಿಂದ ಖರೀದಿಸಿದ ಅಥವಾ ಮನೆಯಲ್ಲಿಯೇ ತಾವೇ ತಯಾರಿಸಿದ ಮಣ್ಣಿನ ಜೋಡೆತ್ತುಗಳನ್ನು ಮನೆಯ ಜಗುಲಿಯ ಮೇಲೆ ಇಟ್ಟು ವಿಶೇಷವಾಗಿ ಪೂಜೆ
ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ರೈತ ಸಮುದಾಯ ವಿಶೇಷವಾಗಿ ಆಚರಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ ಶುಕ್ರವಾರವಿದ್ದು, ಗದಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆಗೆ ರೈತ ಸಮುದಾಯ ಸಿದ್ಧತೆ ನಡೆಸಿದೆ
ಕಳೆದ ವರ್ಷ ಜಿಲ್ಲೆಯಾದ್ಯಂತ ಸಂಪೂರ್ಣ ಬರಗಾಲ ಆವರಿಸಿ ರೈತ ಸಮುದಾಯ ಸಂಕಷ್ಟದಲ್ಲಿತ್ತು, ಪ್ರಸಕ್ತ ವರ್ಷ ಮುಂಗಾರು ಮಳೆ ತಕ್ಕಮಟ್ಟಿಗೆ ಉತ್ತಮವಾಗಿ ಸುರಿದು ಜಿಲ್ಲೆಯಾದ್ಯಂತ ಭಾಗಶಃ ಬಿತ್ತನೆ ಕಾರ್ಯ ಮುಗಿದಿದೆ. ಬಿತ್ತನೆ ಮಾಡಿದ ಹೆಸರು, ಗೋವಿನ ಜೋಳ, ಶೇಂಗಾ ಸೇರಿದಂತೆ ಇನ್ನಿತರೆ ಬೆಳೆಗಳು ಉತ್ತಮವಾಗಿ ಬೆಳೆದಿದ್ದು ರೈತರು ಸಂತಸದಲ್ಲಿದ್ದಾರೆ. ಈ ಮಧ್ಯ ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಪ್ರದಾಯದಂತೆ ಆಚರಿಸಲು ರೈತ ಸಮುದಾಯ ಸಂಭ್ರಮದಲ್ಲಿದ್ದಾರೆ.ಗದಗ ನಗರ ಸೇರಿದಂತೆ ಜಿಲ್ಲೆಯ ರೋಣ,ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ, ಮುಂಡರಗಿ ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಮಣ್ಣೆತ್ತುಗಳ ಮಾರಾಟ ಜೋರಾಗಿ ನಡೆದಿದ್ದು ಕಂಡು ಬಂದಿತು.
ಮಣ್ಣೆತ್ತಿನ ಅಮವಾಸ್ಯೆ ಅಷ್ಟೊತ್ತಿಗೆ ಮುಂಗಾರು ಬಿತ್ತನೆ ಕಾರ್ಯ ಮುಗಿದು ಬಿತ್ತನೆ ಕಾರ್ಯದಲ್ಲಿ ರೈತನ ಒಡನಾಡಿ ಎತ್ತುಗಳನ್ನು ಮಣ್ಣೆತ್ತಿನ ಅಮಾವಾಸ್ಯೆ ದಿನ ವಿಶೇಷವಾಗಿ ಪೂಜಿಸುವುದು ರೂಢಿ. ಅಮಾವಾಸ್ಯೆ ದಿನ ರೈತರು, ಮಕ್ಕಳು, ಯುವಕರು ಹೊಲದ, ಕೆರೆಯ ಕಪ್ಪು ಜಿಗಟು ಮಣ್ಣನ್ನು ತಂದು ತಾವೇ ಮನೆಯಲ್ಲಿಯೇ ಮಣ್ಣಿನ ಜೋಡೆತ್ತುಗಳನ್ನು ತಯಾರಿಸಿ ಅವುಗಳಿಗೆ ಕೊರಳಲ್ಲಿ ಮಣ್ಣಿನಿಂದ ಮಾಡಿದ ಗೆಜ್ಜೆ ಹಾಕಿ ಅಲಂಕಾರ ಮಾಡಿ ಪೂಜೆಸುತ್ತಿದ್ದರು, ಈಗಲೂ ಗ್ರಾಮೀಣ ಭಾಗದಲ್ಲಿ ಕಾಣಬಹುದು, ಆದರೆ ಕೆಲ ವರ್ಷಗಳಿಂದ ಕುಂಬಾರರು ತಯಾರಿಸಿದ ವರ್ಣರಂಜಿತ ಅಲಂಕಾರಿಕ ಮಣ್ಣಿನ ಜೋಡೆತ್ತುಗಳನ್ನು ಮಾರುಕಟ್ಟೆಗಳಿಂದ ಖರೀದಿಸಿ ಮನೆಗೆ ಒಯ್ಯುವ ಪರಿಪಾಠ ಈಗ ಹೆಚ್ಚು ನಗರ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದೆ.ಮಾರುಕಟ್ಟೆಗಳಿಂದ ಖರೀದಿಸಿದ ಅಥವಾ ಮನೆಯಲ್ಲಿಯೇ ತಾವೇ ತಯಾರಿಸಿದ ಮಣ್ಣಿನ ಜೋಡೆತ್ತುಗಳನ್ನು ಮನೆಯ ಜಗುಲಿಯ ಮೇಲೆ ಇಟ್ಟು ವಿಶೇಷವಾಗಿ ಪೂಜೆ ಸಲ್ಲಿಸಿ ಹಬ್ಬದ ಅಡುಗೆ ತಯಾರಿಸಿ ಮಣ್ಣಿನ ಜೋಡೆತ್ತುಗಳಿಗೆ ನೈವೇದ್ಯ ಸಲ್ಲಿಸಿ ಮಳೆ ಬೆಳೆ ಸಮೃದ್ಧವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಮನೆಮಂದಿಯೆಲ್ಲ ಸಂಭ್ರಮದಿಂದ ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ.
ಕುಂಬಾರರು ತಯಾರಿಸಿದ ವರ್ಣರಂಜಿತ ಮಣ್ಣಿನ ಜೋಡೆತ್ತುಗಳನ್ನು ಮಾರುಕಟ್ಟೆಯಲ್ಲಿ ₹80 ರಿಂದ 100ರ ವರೆಗೆ ಮಾರಾಟ ಮಾಡುತ್ತಿದ್ದು ಕಂಡು ಬಂದಿತು.