ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪುಣ್ಯಕ್ಷೇತ್ರ ಬಸದಿ ಹೊಸಕೋಟೆಯ ಬಸದಿ ಗೊಮ್ಮಟನಿಗೆ (ಬಾಹುಬಲಿ) ನವ ಕಳಸಗಳಿಂದ ಪಾದಪೂಜೆ ಹಾಗೂ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ನಡೆಯಿತು.ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿಗಳು ಭಾಗವಹಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಕಾವೇರಿ ನದಿಗೆ ನವ ಬಾಗಿನಗಳನ್ನು ಸಮರ್ಪಿಸಿದರು.
ಶ್ರವಣ ಬೆಳಗೊಳದ ಬಾಹುಬಲಿ ಆನಂತರ ಕರ್ನಾಟಕ ರಾಜ್ಯದಲ್ಲಿ ನಿರ್ಮಾಣಗೊಂಡ 3ನೇ ಪ್ರಮುಖ ಶಿಲ್ಪ ಇದಾಗಿದೆ. ಕೆ.ಆರ್.ಎಸ್ ಹಿನ್ನೀರಿಗೆ ಹೊಂದಿಕೊಂಡಂತೆ ತಾಲೂಕಿನ ಬಸದಿ ಹೊಸಕೋಟೆ ಗ್ರಾಮದಲ್ಲಿ ಅನಾಥವಾಗಿದ್ದ ಬಸದಿ ಗೊಮ್ಮಟನಿಗೆ ಕಳೆದ ಎರಡು ದಶಕಗಳ ಹಿಂದೆ ಕೆಲವು ಜೈನ ಸಂಘಟನೆಗಳು ಸ್ಥಳೀಯರ ನೆರವಿನಿಂದ ಮಹಾಮಸ್ತಕಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪುನರುತ್ಥಾನ ಕಾರ್ಯಗಳನ್ನು ಆರಂಭಿಸಿದವು.ಆನಂತರ ಗುಜರಾತಿನ ಯುಗಳ ಮುನಿಗಳಾದ ಅಮೋಘಕೀರ್ತಿ ಮಹಾರಾಜರು ಮತ್ತು ಅಮರಕೀರ್ತಿ ಮಹಾರಾಜರ ದೃಷ್ಟಿ ಇಲ್ಲಿನ ಅನಾಥ ಗೊಮ್ಮಟನ ಮೇಲೆ ಹರಿಯಿತು. ಮೂಲಸ್ಥಳದಲ್ಲಿ ಅವಸಾನದ ಅಂಚಿನಲ್ಲಿದ್ದ ಗೊಮ್ಮಟ ಮೂರ್ತಿಯನ್ನು ಯುಗಳ ಮುನಿಗಳು ಕಳೆದ ವರ್ಷ ಮೂಲಸ್ಥಳದಿಂದ ಕೆಲವು ಮೀಟರ್‌ಗಳಷ್ಟು ದೂರಕ್ಕೆ ಸ್ಥಳಾಂತರಿಸಿ ಎತ್ತರದ ಪೀಠ ರಚಿಸಿ ಪೀಠದ ಮೇಲೆ ಪ್ರತಿಷ್ಠಾಪಿಸಿದ್ದಾರೆ.
ಸ್ಥಳಾಂತರಗೊಂಡ ಬಾಹುಬಲಿ ಮೂರ್ತಿಗೆ ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಮಹಾ ಸ್ವಾಮೀಜಿಗಳು ಜೈನ ಶ್ರಾವಕ - ಶ್ರಾವಕಿಯರ ನೆರವಿನೊಂದಿಗೆ ನವ ಪಾದಪೂಜೆ ಮತ್ತು ಕೆ.ಆರ್.ಎಸ್ ಹಿನ್ನೀರಿಗೆ ಸೇರಿದ ಕಾವೇರಿ ನದಿಗೆ ನವ ಬಾಗಿನ ಮರ್ಪಣೆ ಮಾಡಿ ನಾಡಿನ ಜನರಿಗೆ ಸುಖ, ಶಾಂತಿ ಮತ್ತು ಸಂವೃದ್ದಿಯ ಜೀವನಕ್ಕೆ ಹಾರೈಸಿದರು.ವೇದಿಕೆ ಕಾರ್ಯಕ್ರಮದಲ್ಲಿ ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ ಮಾತನಾಡಿ, ಶಾಂತಿ ಮತ್ತು ಸಹಬಾಳ್ವೆಯ ಬದುಕಿನಲ್ಲಿ ನಮ್ಮ ನೆಮ್ಮದಿ ಅಡಗಿದೆ. ಧರ್ಮ ನಮ್ಮ ಬುದಕಿನ ಮಾರ್ಗವನ್ನು ನಿರ್ದೇಶಿಸಿ ಮುನ್ನಡೆಸುತ್ತದೆ. ಧರ್ಮ ಮಾರ್ಗದಲ್ಲಿ ಸಾಗಿದರೆ ನಾವು ಜೀವನ್ಮುಕ್ತರಾಗಲು ಸಾಧ್ಯ ಎಂದರು.
ಅಹಿಂಸೆಯೇ ಜೀವನದ ಪರಮೋಧರ್ಮ. ಸಮಸ್ತ ಜೀವಿಗಳಿಗೂ ಬದುಕು ಹಕ್ಕಿದೆ. ಜಿನ ಮಾರ್ಗದಲ್ಲಿ ಜಗತ್ತು ಸಾಗಿದರೆ ಜಗತ್ತಿನ ಎಲ್ಲಾ ಕ್ಷೆಬೆಗಳು ನಾಶವಾಗುತ್ತವೆ. ಹಿಂಸಾತ್ಮಕ ಜಗತ್ತು ಮಾಯವಾಗಿ ನಿಜವಾದ ಮಾನವ ಧರ್ಮ ನಮ್ಮನ್ನು ಮುನ್ನಡೆಸುತ್ತದೆ ಎಂದರು.ಈ ವೇಳೆ ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ್ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಸುರೇಂದ್ರ ಜೈನ್, ನ.ಪ್ರಸನ್ನ ಕುಮಾರ್, ವಜ್ರಪ್ರಸಾದ್ ಸೇರಿದಂತೆ ನೆರೆಯ ಮಂಡ್ಯ, ಬೆಳ್ಳೂರು, ಸಾಲಿಗ್ರಾಮ, ಮೈಸೂರು ಮುಂತಾದ ಕಡೆಗಳಿಮದ ಆಗಮಿಸಿದ್ದ ನೂರಾರು ಜಿನ ಧರ್ಮೀಯರು, ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ್ ಟ್ರಸ್ಟ್‌ನ ನಿರ್ದೇಶಕರು ಹಾಗೂ ಬಸದಿ ಹೋಸಕೋಟೆ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.