ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಯೋಜನಾ ವೆಚ್ಚವನ್ನು 185.74 ಕೋಟಿ ರು. ನಿಗದಿ ಮಾಡಲಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಅನುಷ್ಠಾನದ ಮೂಲಕ ರಾಜ್ಯವನ್ನು ಅಪೌಷ್ಟಿಕ ಮುಕ್ತ ರಾಜ್ಯವಾಗಿಸಲಾಗುವುದು. ರಾಜ್ಯದ ಯಾವೆಲ್ಲ ತಾಲೂಕುಗಳಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಜನರು ಹೆಚ್ಚಾಗಿ ಬಳಲುತ್ತಿದ್ದಾರೆ ಎಂಬ ಕುರಿತಂತೆ 2019-20ರಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಅದರ ಆಧಾರದಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ಹೆಚ್ಚಿರುವ ತಾಲೂಕುಗಳಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ. ರಕ್ತಹೀನತೆ ಮತ್ತು ಅಪೌಷ್ಟಿಕತೆ ಪತ್ತೆಗೆ ಸಾಮೂಹಿಕ ತಪಾಸಣೆ, ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಮಾಡಲು, 102 ತಾಲೂಕುಗಳಲ್ಲಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.3 ಜಿಲ್ಲೆಗಳಲ್ಲಿ ಮೆದುಳು ಆರೋಗ್ಯ ಉಪಕ್ರಮ ಅನುಷ್ಠಾನ:
ಬೆಂಗಳೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಿಮ್ಹಾನ್ಸ್ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಮೆದುಳು ಆರೋಗ್ಯ ಉಪಕ್ರಮ ಅನುಷ್ಠಾನಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕಾಗಿ 10 ಕೋಟಿ ರು. ನಿಗದಿ ಮಾಡಲಾಗಿದೆ. ಮೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಕಾರ್ಯಕ್ರಮ ಯಶಸ್ವಿಯಾದರೆ, ರಾಜ್ಯ ಎಲ್ಲ ಜಿಲ್ಲೆಗಳಲ್ಲೂ 25 ಕೋಟಿ ರು. ವೆಚ್ಚದಲ್ಲಿ ಮೆದುಳು ಆರೋಗ್ಯ ಕ್ಲಿನಿಕ್ ತೆರೆಯಲಾಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.-----ಗೃಹ ಮಂಡಳಿ ಭೂ ಅನುಪಾತ ಇನ್ನು ಏಕರೂಪ ಇಲ್ಲ
ರಾಜ್ಯ ಗೃಹ ಮಂಡಳಿ ವತಿಯಿಂದ ಅನುಪಾತದ ಪಾಲುದಾರಿಕೆ ಅಡಿಯಲ್ಲಿ ಭೂಮಿ ಪಡೆದು ಅನುಷ್ಠಾನಗೊಳಿಸುವ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಮಾಲೀಕರೊಂದಿಗೆ ಮಾಡಿಕೊಳ್ಳಲಾಗುವ ಅನುಪಾತವನ್ನು ಆಯಾ ಪ್ರದೇಶ, ಯೋಜನೆಯ ಆಧಾರದಲ್ಲಿ ನಿಗದಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇನ್ನಿತರ ನಗರ ಪ್ರದೇಶಗಳಲ್ಲಿನ ಜಮೀನುಗಳ ಮೌಲ್ಯ ಹಾಗೂ ಗ್ರಾಮೀಣ ಪ್ರದೇಶದ ಜಮೀನುಗಳ ಮೌಲ್ಯ ಭಿನ್ನವಾಗಿದೆ. ಹೀಗಾಗಿ ಅನುಪಾತದ ಪಾಲುದಾರಿಕೆ ಅಡಿಯಲ್ಲಿ ಭೂಮಿ ಪಡೆದು ವಸತಿ ಯೋಜನೆ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಪ್ರತಿ ನಗರಕ್ಕೆ ಒಂದೊಂದು ಅನುಪಾತ ನಿಗದಿ ಪಡಿಸಬೇಕಾಗುತ್ತದೆ. ಹೀಗಾಗಿ ಗೃಹ ಮಂಡಳಿ ಯೋಜನೆಗಳಿಗೆಲ್ಲ ಒಂದೇ ರೀತಿಯ ಸಾಮಾನ್ಯ ನೀತಿ ರೂಪಿಸದೇ, ಆಯಾ ಪ್ರದೇಶದ ಭೂಮೌಲ್ಯವನ್ನಾಧರಿಸಿ ಅನುಪಾತ ನಿಗದಿ ಮಾಡಿ ಭೂಮಾಲೀಕರೊಂದಿಗೆ ಭೂಮಿ ಪಡೆದು ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಯಿತು.--
ಬಳ್ಳಾರಿ ನ್ಯಾಯಾಲಯ ಕಟ್ಟಡಕ್ಕೆ ಹೆಚ್ಚುವರಿ ಅನುದಾನಬಳ್ಳಾರಿ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಯ 121.90 ಕೋಟಿ ರು. ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಳ್ಳಾರಿಯ ಪಾರ್ವತಿ ನಗರದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಿಸಲಾಗಿದೆ. ಆದರೂ, ಕೆಲವೊಂದು ಕಾರ್ಯಗಳನ್ನು ಮಾಡಬೇಕಿದ್ದು, ಹೆಚ್ಚುವರಿ ಅನುದಾನ ಬೇಕಿದೆ. ಹೀಗಾಗಿ ಈ ಹಿಂದಿನ 100 ಕೋಟಿ ರು. ಅಂದಾಜು ವೆಚ್ಚವನ್ನು 121.90 ಕೋಟಿ ರು.ಗೆ ಪರಿಷ್ಕರಿಸಲಾಗಿದೆ.ಬರ, ಶಿಕ್ಷಣದ ಬಗ್ಗೆ ಗಂಭೀರ ಚರ್ಚೆಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿನ ಬರ ಅಧ್ಯಯನಕ್ಕೆ ಬಂದಿರುವ ಕೇಂದ್ರ ತಂಡದ ಮುಂದೆ ಕಂದಾಯ ಇಲಾಖೆಯಿಂದ ಮಂಡಿಸಲಾಗಿರುವ ವಿಷಯಗಳು, ಕೇಂದ್ರ ತಂಡಕ್ಕೆ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯದ ಪರಿಸ್ಥಿತಿಯನ್ನು ಕೇಂದ್ರ ತಂಡದ ಮುಂದೆ ವಿವರವಾಗಿ ತಿಳಿಸಲಾಗಿದೆ ಎಂದು ಹೇಳಿದರು.ಅದರ ಜತೆಗೆ ರಾಜ್ಯದಲ್ಲಿನ ಶಿಕ್ಷಕರು ಮತ್ತು ಮೂಲಸೌಕರ್ಯಗಳ ಕೊರತೆಯ ಬಗ್ಗೆ ಚರ್ಚಿಸಲಾಗಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿಕ್ಷಣ ಇಲಾಖೆಯಲ್ಲಿನ ನ್ಯೂನತೆಯನ್ನು ಪ್ರಸ್ತಾಪಿಸಿ, ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕುರಿತಂತೆ ಸಚಿವರಿಂದ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.