ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಗುರುವಾರ ಅಧಿಕಾರ ಸ್ವೀಕರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನನಗೆ ಸರ್ಕಾರ ದೊಡ್ಡ ಜವಾಬ್ದಾರಿ ನೀಡಿದೆ. ಈ ಹಿಂದೆ ನಾನು ತರಬೇತಿ ವೇಳೆ ಬೆಳಗಾವಿಗೆ ಬಂದಿದ್ದೆ. 5 ದಿನ ಇಲ್ಲಿಯೇ ಕಳೆದಿದ್ದೇನೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಗುರುವಾರ ಅಧಿಕಾರ ಸ್ವೀಕರಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನನಗೆ ಸರ್ಕಾರ ದೊಡ್ಡ ಜವಾಬ್ದಾರಿ ನೀಡಿದೆ. ಈ ಹಿಂದೆ ನಾನು ತರಬೇತಿ ವೇಳೆ ಬೆಳಗಾವಿಗೆ ಬಂದಿದ್ದೆ. 5 ದಿನ ಇಲ್ಲಿಯೇ ಕಳೆದಿದ್ದೇನೆ. ಹುಬ್ಬಳ್ಳಿಯಲ್ಲಿಯೂ 1 ವರ್ಷ ಕಾಲ ಡಿಸಿಪಿ ಆಗಿ ಸೇವೆ ಸಲ್ಲಿಸಿದ್ದೇನೆ. ಈ ಭಾಗದ ಪರಿಚಯ ನನಗಿದೆ. ನಮ್ಮ ಹೊಸ ತಂಡದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಆಯಾ ಠಾಣೆಗಳಲ್ಲಿ ಜನತೆಯ ಸಮಸ್ಯೆಯನ್ನು ಪ್ರತ್ಯೇಕವಾಗಿ ಆಲಿಸಲಾಗುವುದು. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇವೆ. ನಮ್ಮ ಕಚೇರಿಗೆ ಯಾರ ಬೇಕಾದರೂ ನೇರವಾಗಿ ಬರಬಹುದು. ಯಾರಿಗೆ ಆಗಲಿ ಅನ್ಯಾಯವಾಗಿದ್ದರೆ, ಯಾವುದೇ ಘಟನೆ ಆದರೆ, ನಾವು ಯಾವುದೇ ರಾಜೀ ಪಂಚಾಯಿತಿಗೆ ಅವಕಾಶ ನೀಡುವುದಿಲ್ಲ. ಎಫ್‌ಐಆರ್ ದಾಖಲಿಸುತ್ತೇವೆ. ನಾವು ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತೇವೆ. ಪೊಲೀಸರನ್ನು ನೋಡಿ ಯಾರೂ ಭಯ ಪಡುವ ಅಗತ್ಯ ಇಲ್ಲ. ಜನತೆಗೆ ಕಾನೂನು ಭಯ ಇರಬೇಕು. ಸಂಚಾರ ನಿಮಯಗಳ ಕುರಿತು ಜನತೆಗೆ ಅರಿವು ಮೂಡಿಸಲಾಗುವುದು ಎಂದರು.ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.