ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ರೈಲು ಸೇವೆ ಪ್ರಾರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು
ಹುಬ್ಬಳ್ಳಿ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ರೈಲು ಸೇವೆ ಪ್ರಾರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಬೆಂಗಳೂರು ಮತ್ತು ಮುಂಬೈ ನಡುವೆ ಆರಂಭವಾದ ಹೊಸ ರೈಲನ್ನು ಸ್ವಾಗತಿಸಿ, ಬಳಿಕ ಮಾತನಾಡಿದರು.ಬೆಂಗಳೂರಿನಿಂದ ಹೊರಡುವ ಈ ರೈಲು ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮೂಲಕ ಮುಂಬೈಗೆ ತೆರಳಲಿದೆ. ಈ ಮಾರ್ಗ ತುಂಬಾ ದೂರವಾದರೂ 24 ಗಂಟೆಯಲ್ಲಿ ಪ್ರಯಾಣವನ್ನು ಮುಕ್ತಾಯಗೊಳಿಸಬಹುದು ಎಂದರು.
ಧಾರವಾಡದಿಂದ ಬೆಳಗಾವಿಗೆ ನೇರ ಸಂಪರ್ಕ ರೈಲು ಆರಂಭಿಸಲು ಈಗಾಗಲೇ ಕೇಂದ್ರ ಸರ್ಕಾರ ₹ 1000 ಕೋಟಿ ಹಣವನ್ನು ಒದಗಿಸಲು ಮುಂದಾಗಿದೆ. ಧಾರವಾಡ ಬೆಳಗಾವಿ ಹಾಗೂ ದಾವಣಗೆರೆ ತುಮಕೂರು ನಡುವಿನ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ತುರ್ತಾಗಿ ಪೂರ್ಣಗೊಳಿಸಬೇಕು. ಇದರಿಂದ ಹುಬ್ಬಳ್ಳಿ ಬೆಂಗಳೂರು ನಡುವೆ ರೈಲು ಸಂಚಾರ ಸಮಯದಲ್ಲಿ ಕಡಿಮೆಯಾಗುವುದು ಎಂದು ತಿಳಿಸಿದರು.ಜಗತ್ತಿನಲ್ಲಿ ರೈಲ್ವೆ ವಿದ್ಯುದೀಕರಣದಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ರೈಲ್ವೆ ಬಜೆಟ್‌ನಿಂದ ರೈಲ್ವೆ ಇಲಾಖೆಗೆ ಸಾಕಷ್ಟು ಹಣ ದೊರೆಯುತ್ತಿರಲಿಲ್ಲ. ಪ್ರಸ್ತುತ ರೈಲ್ವೆ ಇಲಾಖೆಗೆ ₹2 ಲಕ್ಷ ಕೋಟಿಗೂ ಅಧಿಕ ಹಣ ದೊರೆಯುತ್ತಿದೆ. ಕರ್ನಾಟಕಕ್ಕೆ ಸುಮಾರು ₹7 ರಿಂದ 8 ಸಾವಿರ ಕೋಟಿ ದೊರೆಯುತ್ತದೆ. ರೈಲ್ವೆಯಲ್ಲಿ ಪರಿವರ್ತನೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಭಾರತದಲ್ಲಿ ಸುಮಾರು 160ಕ್ಕೂ ಅಧಿಕ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಮೆಟ್ರೋದಲ್ಲಿ ಸಹ ಸಾಕಷ್ಟು ಪ್ರಗತಿ ಸಾಧಿಸಲಾಗುತ್ತಿದೆ. ಅಳ್ನಾವರ ರೈಲು ನಿಲ್ದಾಣವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ರಾಜ್ಯದಲ್ಲಿ ಸುಮಾರು 3,700 ಕಿ.ಮೀ. ರೈಲ್ವೆ ವಿದ್ಯುದೀಕರಣ ಮುಕ್ತಾಯಗೊಂಡಿದೆ. ಪ್ರಯಾಣಿಕರ ಓಡಾಟದ ಸಮಯವನ್ನು ಕಡಿಮೆ ಮಾಡುವುದು ಬಹಳ ಅವಶ್ಯಕವಿದೆ ಎಂದರು.
ರೈಲ್ವೆ ಇಲಾಖೆಯಲ್ಲಿ ಹೊಸ ಯೋಜನೆಗಳು ಕಾರ್ಯಗತವಾಗುತ್ತಿವೆ. ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೆ ಪ್ರಯತ್ನಿಸಲಾಗುತ್ತಿದೆ. ಅಂಕೋಲಾ ಬಂದರು ಅಭಿವೃದ್ಧಿಗೆ ಈ ರೈಲು ಮಾರ್ಗ ಸಹಕಾರಿಯಾಗಲಿದೆ.ನವೀಕರಿಸಬಹುದಾದ ಇಂಧನದಲ್ಲಿ ಭಾರತ ಪ್ರಪಂಚದಲ್ಲಿ 3ನೇ ಸ್ಥಾನದಲ್ಲಿದೆ. ಯುದ್ಧದ ಬಿಕ್ಕಟ್ಟಿನ ನಡುವೆ ಪೆಟ್ರೋಲ್, ಡಿಸೇಲ್ ಪೂರೈಕೆಯಲ್ಲಿ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಇಂಧನಗಳ ಸಮಸ್ಯೆಗಳು ದೂರವಾಗಲಿವೆ. ವಿಕಸಿತ ಭಾರತದ ಕನಸು ನನಸಾಗಲಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಫ್.ಎಚ್. ಜಕ್ಕಪ್ಪನವರ, ಪ್ರದೀಪ ಶೆಟ್ಟರ್, ಮಾಜಿ ಮೇಯರ್ ರಾಮಣ್ಣ ಬಡಿಗೇರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ಸೇರಿದಂತೆ ರೈಲ್ವೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.