ಸಾರಾಂಶ
ಜಿಲ್ಲೆಯ ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ಆಗಿರುವ ಕಹಿ ಘಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ಈ ಘಟನೆ ಯಾವ ರೀತಿ ಆಗಿದೆ ಎಂಬ ವಿಮರ್ಶೆ ಮಾಡುತ್ತಿದ್ದು, ಅಧಿಕಾರಿಗಳಿಂದ ಅಗತ್ಯ ವರದಿ ಕೇಳಿದ್ದೇವೆ.
ಕನ್ನಡಪ್ರಭ ವಾರ್ತೆ ತುಮಕೂರು
ಕೇಂದ್ರದ ನೂತನ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಎನ್‌ಡಿಎ ಒಕ್ಕೂಟದಿಂದ ನನ್ನನ್ನು ರಾಷ್ಟ್ರದ ಮಂತ್ರಿಯಾಗಿ ನೇಮಕ ಮಾಡುವ ಮೂಲಕ ಎರಡು ಉಪಯುಕ್ತವಾದ ಇಲಾಖೆಗಳ ಜವಾಬ್ದಾರಿ ನೀಡಿದ್ದಾರೆ. ದೇಶದ ಜನತೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ತಕ್ಕಂತೆ ಕೆಲಸ ಮಾಡಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಪ್ರಚಲಿತ ರಾಷ್ಟ್ರದಲ್ಲಿರುವ ಎರಡು ಇಲಾಖೆಗಳಿಂದ ಜನಸಾಮಾನ್ಯರಿಗೆ ಸಿಗಬೇಕಾಗಿರುವ ಅವಶ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಜಿಲ್ಲೆಯ ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ಆಗಿರುವ ಕಹಿ ಘಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ಈ ಘಟನೆ ಯಾವ ರೀತಿ ಆಗಿದೆ ಎಂಬ ವಿಮರ್ಶೆ ಮಾಡುತ್ತಿದ್ದು, ಅಧಿಕಾರಿಗಳಿಂದ ಅಗತ್ಯ ವರದಿ ಕೇಳಿದ್ದೇವೆ. ನನ್ನನ್ನು ಕೇಂದ್ರ ಸಚಿವನನ್ನಾಗಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಎಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಭಾನುವಾರ ಎರಡೂ ಪಕ್ಷದ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ನಾನು ಸಹ ಭಾಗಿಯಾಗುತ್ತಿದ್ದೇನೆ ಎಂದು ತಿಳಿಸಿದರು.ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಚಿದಾನಂದ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ, ಎಂ.ವಿ. ವೀರಭದ್ರಯ್ಯ, ದಿಲೀಪ್‌ಕುಮಾರ್, ಅನಿಲ್‌ಕುಮಾರ್, ವೈ.ಹೆಚ್. ಹುಚ್ಚಯ್ಯ, ಕೊಂಡವಾಡಿ ಚಂದ್ರಶೇಖರ್, ಸಿ.ಎಂ. ರಾಜಪ್ಪ, ವಿಶ್ವನಾಥಗೌಡ, ಸ್ಫೂರ್ತಿ ಚಿದಾನಂದ್ ಇತರರು ಇದ್ದರು.