ಹೊಸಪೇಟೆ: ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕೋಟ್ಯಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೊಸ ಕಳೆ ಬಂದಿದೆ.

ಜಲಾಶಯದ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಮೈಲಿಗಲ್ಲಾಗಿ, ನೂತನವಾಗಿ ಅಳವಡಿಸಲಾದ ಎಲ್ಲ 33 ಕ್ರಸ್ಟ್‌ಗೇಟ್‌ಗಳನ್ನು ಗುರುವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.

ಜಲಾಶಯದ ಒಟ್ಟು 33 ಕ್ರೆಸ್ಟ್‌ಗೇಟ್‌ಗಳ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಸಾಂಕೇತಿಕವಾಗಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು 17ನೇ ಗೇಟ್, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 18ನೇ ಗೇಟ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 19ನೇ ಗೇಟ್ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು 20ನೇ ಕ್ರಸ್ಟ್‌ಗೇಟ್‌ ಅನ್ನು ಬಟನ್ ಒತ್ತುವ ಮೂಲಕ ಲೋಕಾರ್ಪಣೆಗೊಳಿಸಿದರು.

ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ್ ಎಸ್. ಹೊರಟ್ಟಿ, ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್, ಮಾಜಿ ಸಚಿವ ಹಾಗೂ ಶಾಸಕರಾದ ಎಚ್.ಕೆ. ಪಾಟೀಲ, ಶಿವರಾಜ್ ತಂಗಡಗಿ, ಎನ್.ಎಸ್. ಬೋಸರಾಜು, ಆಂಧ್ರಪ್ರದೇಶದ ಜಲಸಂಪನ್ಮೂಲ ಸಚಿವರಾದ ನಿಮ್ಮಲ ರಾಮನಾಯ್ಡು, ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಬಳ್ಳಾರಿ ಸಂಸದ ಈ. ತುಕಾರಂ, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ಕೊಪ್ಪಳ ಸಂಸದ ರಾಘವೇಂದ್ರ ಬಿ. ಹಿಟ್ನಾಳ್, ಶಾಸಕರಾದ ಎಚ್.ಆರ್. ಗವಿಯಪ್ಪ, ಲತಾ ಮಲ್ಲಿಕಾರ್ಜುನ, ಡಾ. ಎನ್.ಟಿ. ಶ್ರೀನಿವಾಸ್, ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಸಿರಗುಪ್ಪ ಶಾಸಕ ಬಿ.ಎಂ. ನಾಗರಾಜ್, ರಾಯಚೂರು ಶಾಸಕ ಬಸನಗೌಡ ದದ್ದಲ್, ಜಲಾಶಯಗಳ ಗೇಟ್ ಪರಿಣಿತ ತಜ್ಞ ಕನ್ನಯ್ಯ ನಾಯ್ಡು, ತುಂಗಭದ್ರಾ ಜಲಾಶಯ ಮಂಡಳಿಯ ಅಧ್ಯಕ್ಷ ಎಸ್.ಎನ್. ಪಾಂಡೆ, ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಹಿರಿಯ ಅಧಿಕಾರಿಗಳು, ತಾಂತ್ರಿಕ ತಜ್ಞರು ಉಪಸ್ಥಿತರಿದ್ದರು.

2024ರ ಆಗಸ್ಟ್‌ 10ರಂದು ರಾತ್ರಿ 10.50ರ ಸುಮಾರಿಗೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಿ ಆತಂಕ ಸೃಷ್ಟಿಸಿತ್ತು. ಸುಮಾರು ₹51 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಜಲಾಶಯದ ಎಲ್ಲ 33 ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದೆ. ಮುಂದಿನ 55ರಿಂದ 60 ವರ್ಷಗಳ ವರೆಗೆ ಅತ್ಯಂತ ಸುರಕ್ಷಿತವಾಗಿ ಇದು ಕಾರ್ಯನಿರ್ವಹಿಸಲಿದೆ.


1953ರಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಡ್ಯಾಂ ಲೋಕಾರ್ಪಣೆ ಮಾಡಿದ ನಂತರ, ದೊಡ್ಡ ಮಟ್ಟದ ಗಣ್ಯರು ಒಟ್ಟಾಗಿ ಟಿ.ಬಿ. ಡ್ಯಾಂನಲ್ಲಿ ಭಾಗವಹಿಸಿದ ಎರಡನೇ ಅತಿ ದೊಡ್ಡ ಐತಿಹಾಸಿಕ ಕಾರ್ಯಕ್ರಮ ಇದಾಗಿದೆ. ನೂತನ ಗೇಟ್‌ಗಳ ಅಳವಡಿಕೆಯಿಂದಾಗಿ ಮುಂಗಾರು ಮಳೆಗೆ ಮುನ್ನವೇ ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಇದ್ದ ಆತಂಕ ದೂರವಾಗಿ ನಿರಾಳತೆ ಮೂಡಿದೆ. ಈ ಐತಿಹಾಸಿಕ ಕಾರ್ಯಕ್ರಮ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ಜಲ ಸೌಹಾರ್ದತೆಗೆ ಸಾಕ್ಷಿಯಾಯಿತು.