ಮಂಗಳೂರು: ಹೊಸ ವರ್ಷದ ಮೊದಲನೆಯ ದಿನ ಗುರುವಾರ ಕರಾವಳಿ ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತರ ದಂಡು ಸೇರಿತ್ತು.

ಮಂಗಳೂರು: ಹೊಸ ವರ್ಷದ ಮೊದಲನೆಯ ದಿನ ಗುರುವಾರ ಕರಾವಳಿ ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತರ ದಂಡು ಸೇರಿತ್ತು. ಮಂಗಳೂರು ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಭಕ್ತರು ಮೊದಲನೇ ದಿನದ ಮುಂಜಾವಿನಲ್ಲಿ ಗೋಕರ್ಣನಾಥನ ಬೆಳ್ಳಿ ರಥವನ್ನು ಎಳೆಯುವ ಮೂಲಕ ಕೃತಾರ್ಥರಾದರು. ಕೇಂದ್ರ ಮಾಜಿ ಸಚಿವ, ಕುದ್ರೋಳಿ ದೇವಳದ ರೂವಾರಿ ಜನಾರ್ದನ ಪೂಜಾರಿಯವರ ಪರಿಕಲ್ಪನೆಯಂತೆ ಪ್ರತಿ ವರ್ಷ ವರ್ಷದ ಮೊದಲ ದಿನ ಶ್ರೀ ದೇವರ ಬೆಳ್ಳಿರಥೋತ್ಸವ ಈ ಬಾರಿಯೂ ಅದ್ಧೂರಿಯಿಂದ ನಡೆಯಿತು. ವರ್ಷದ ಮೊದಲ ದಿನದ ಸೂರ್ಯೋದಯ ವೇಳೆ ದೇವಸ್ಥಾನದಲ್ಲಿ ಬೆಳ್ಳಿ ರಥೋತ್ಸವ ನಡೆದಿದೆ.ಗಣಪತಿ ದೇವರಿಗೆ ಗಣಹೋಮದ ಬಳಿಕ ಗೋಕರ್ಣನಾಥ ದೇವರಿಗೆ ಧನು ಪೂಜೆ ನೆರವೇರಿತು. ಬೆಳ್ಳಗ್ಗೆ ೬.೧೫ ಗಂಟೆ ಹೊತ್ತಿಗೆ ದೇವಳದ ಒಳಭಾಗದಿಂದ ದೇವರ ಉತ್ಸವ ಮೂರ್ತಿಯನ್ನು ಅರ್ಚಕರು ಹೊರತಂದು ಬೆಳ್ಳಿ ರಥದಲ್ಲಿ ಕೂರಿಸಿದ್ದಾರೆ. ರಥದಲ್ಲಿ ಪೂಜೆ ಆರತಿ ಬಳಿಕ ಬೆಳ್ಳಿ ರಥೋತ್ಸವ ನಡೆಯಿತು.

ದೇವಳದ ಸುತ್ತಾ ಮೂರು ಬಾರಿ ಗೋಕರ್ಣನಾಥ ದೇವರಿರುವ ಬೆಳ್ಳಿ ರಥವನ್ನು ಬಂದಿರುವ ಭಕ್ತರು ಎಳೆದರು. ಈ ಮೂಲಕ ವರ್ಷದ ಮೊದಲನೇಯ ದಿನವನ್ನು ದೇವರ ರಥ ಎಳೆಯುವ ಮೂಲಕ ಭಕ್ತರು ವರ್ಷದ ಶುಭಾರಂಭ ಮಾಡಿದ್ದಾರೆ.

ಈ ಸಂದರ್ಭ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ವೇದಕುಮಾರ್, ಪಿ.ಕೆ.ಗೌರವಿ, ರಾಧಾಕೃಷ್ಣ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಕಾವೂರು, ಜಯರಾಮ‌ ಕಾರಂದೂರು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಟ್ರಸ್ಟಿ ರಾಜೇಂದ್ರ ಚಿಲಿಂಬಿ, ಅಶೋಕ್ ಕುಮಾರ್, ಶ್ರೀ ಗೋಕರ್ಣನಾಥ ಸೇವಾದಳ ಸದಸ್ಯರು ಇದ್ದರು.

ನಸುಕಿನಿಂದಲೇ ದೇವರ ದರ್ಶನ: ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ಕದ್ರಿ ದೇವಸ್ಥಾನದ ಮೇಲ್ಭಾಗದಲ್ಲಿರುವ ಏಳು ಕೆರೆಗಳಲ್ಲಿ ಪವಿತ್ರ ಸ್ನಾನ ಮಾಡಿ, ನಂತರ ಕಲಶ ಸ್ನಾನ ಕೈಗೊಂಡು ಭಕ್ತರು ದೇವರ ದರ್ಶನ ಪಡೆದರು. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಮಂಗಳಾದೇವಿ, ಪುತ್ತೂರು ಶ್ರೀಮಹಾಲಿಂಗೇಶ್ವರ, ಉರ್ವ ಮಾರಿಗುಡಿ, ಬೋಳಾರ ಮಾರಿಗುಡಿ, ಶರವು ಮಹಾಗಣಪತಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು. ಹೊಸ ವರ್ಷವನ್ನು ದೇವರ ಆಶೀರ್ವಾದದೊಂದಿಗೆ ಆರಂಭಿಸಬೇಕೆಂಬ ಸಂಕಲ್ಪದೊಂದಿಗೆ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದ್ದು, ವಿಶೇಷ ಪೂಜೆ ನೆರವೇರಿತು. ಕರಾವಳಿಯ ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಮತ್ತು ಪ್ರವಾಸಿಗರು ಆಗಮಿಸಿದ್ದರು. ಬೀಚ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಇದ್ದು, ಹೊಸ ವರ್ಷದ ದಿನ ದೇವಾಲಯಗಳಿಗೆ ಭೇಟಿ ನೀಡಿದರು.