ಅರಸೀಕೆರೆ ರಸ್ತೆ ಸಮೀಪ ಇರುವ ಶಿಕ್ಷಕರ ಕಾಲೋನಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹೊಸ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಶಾಸಕ ಎಚ್. ಪಿ. ಸ್ವರೂಪ್, ಕೋಟಿ ಕೋಟಿ ಹಣ ಸಂಪಾದಿಸಿದರೂ ಸಹ ಎಲ್ಲರೂ ಒಂದೇ ಕಡೆ ಮನೆ ಕಟ್ಟಿಕೊಂಡು ಒಟ್ಟಾಗಿ ಬದುಕುತ್ತಿರುವುದು ಅಪಾರ ಸಂತೋಷದ ವಿಷಯ ಎಂದರು. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಒಗ್ಗಟ್ಟಿನಿಂದ ಬದುಕಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಅರಸೀಕೆರೆ ರಸ್ತೆ ಸಮೀಪ ಇರುವ ಶಿಕ್ಷಕರ ಕಾಲೋನಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹೊಸ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಉದ್ಘಾಟಿಸಿ ಚಾಲನೆ ನೀಡಿದರು.

ಕಾಲೋನಿಯ ನಿವಾಸಿಗಳ ಒಗ್ಗಟ್ಟು, ಸಂಭ್ರಮ ಮತ್ತು ಪರಸ್ಪರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಚ್. ಪಿ. ಸ್ವರೂಪ್, ಕೋಟಿ ಕೋಟಿ ಹಣ ಸಂಪಾದಿಸಿದರೂ ಸಹ ಎಲ್ಲರೂ ಒಂದೇ ಕಡೆ ಮನೆ ಕಟ್ಟಿಕೊಂಡು ಒಟ್ಟಾಗಿ ಬದುಕುತ್ತಿರುವುದು ಅಪಾರ ಸಂತೋಷದ ವಿಷಯ ಎಂದರು. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಒಗ್ಗಟ್ಟಿನಿಂದ ಬದುಕಬೇಕು ಎಂದು ಕರೆ ನೀಡಿದರು. ಈ ಭಾಗದಲ್ಲಿ ಇನ್ನೂ ಹಲವು ಮೂಲಭೂತ ಸೌಕರ್ಯಗಳ ಅಗತ್ಯವಿದ್ದು, ಈಗಾಗಲೇ ತಮ್ಮ ತಂದೆ ಎಚ್.ಎಸ್. ಪ್ರಕಾಶ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ರಸ್ತೆಗಳು ಹಾಗೂ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿತ್ತು. ಈಗ ನಾವು ಕೂಡ ಅದೇ ಹಾದಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.

ಇಲ್ಲಿನ ಪಾರ್ಕ್ ಅಭಿವೃದ್ಧಿಗೊಂಡಿದ್ದು, ಉಳಿದ ಚಿಕ್ಕಪುಟ್ಚ ಚರಂಡಿ, ರಸ್ತೆ ಹಾಗೂ ಇತರೆ ಕೆಲಸಗಳನ್ನು ಖಂಡಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಮಹಾನಗರ ಪಾಲಿಕೆ ಸಿಬ್ಬಂದಿಯೊಂದಿಗೆ ತಿಂಗಳಿಗೆ ಒಮ್ಮೆ ಸ್ವಚ್ಛತಾ ಕಾರ್ಯ ನಡೆಸೋಣ, ಇಂಟರ್‌ಲಾಕ್ ರಸ್ತೆ ಹಾಗೂ ಪಾರ್ಕ್ ಸ್ವಚ್ಛತೆಯನ್ನು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಮಾಡೋಣ ಎಂದು ಸಲಹೆ ನೀಡಿದರು. ಕಸದ ನಿರ್ವಹಣೆಗೆ ಕಸ ವಿಲೇವಾರಿ ವಾಹನ ಈಗಾಗಲೇ ಬರುತ್ತಿದ್ದು, ಕಾಲೋನಿಗೆ ಅಗತ್ಯವಿರುವ ಆರ್ಚ್ ನಿರ್ಮಾಣಕ್ಕೆ ೫ ಲಕ್ಷ ರು. ಅನುದಾನ ನೀಡಲಾಗುವುದು ಎಂದರು. ತಮ್ಮ ಅನುದಾನದಲ್ಲಿ ಹೆಚ್ಚಿನ ಮೊತ್ತವನ್ನು ಈ ಬಡಾವಣೆಗೆ ನೀಡಲಾಗಿದ್ದು, ಇನ್ನೂ ಎರಡು ವರ್ಷ ಅವಧಿಯೊಳಗೆ ಹಂತಹಂತವಾಗಿ ಎಲ್ಲಾ ಕೆಲಸಗಳನ್ನು ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂತಹ ಹೊಸ ವರ್ಷದ ಆಚರಣೆಯಲ್ಲಿ ಪ್ರತಿವರ್ಷವೂ ಭಾಗವಹಿಸುವುದಾಗಿ ಹೇಳಿದರು.

ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಂಬರೀಶ್ ಮಾತನಾಡಿ, ೪೦ ಅಡಿ ರಸ್ತೆಗೆ ಮೆಟಲಿಂಗ್ ಆಗಿದ್ದರೂ ಜಲ್ಲಿ ಹಾಕಿದ ಅರ್ಧ ಕೆಲಸದಿಂದ ವಾಹನಗಳಿಗೆ ಪಂಚರ್‌ ಆಗುತ್ತಿದ್ದು, ಜನರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಗಮನ ಸೆಳೆದರು. ಬಡಾವಣೆಯ ಎಲ್ಲಾ ಮಣ್ಣಿನ ರಸ್ತೆಗಳು ಮೆಟಲಿಂಗ್ ಆಗಬೇಕು ಎಂದು ಮನವಿ ಮಾಡಿದರು. ೨.೦೧ ಎಕರೆ ಪಾರ್ಕ್‌ನ ಗಿಡಗಳನ್ನು ದನಕರುಗಳು ಹಾನಿಗೊಳಿಸುತ್ತಿದ್ದು, ಪಾರ್ಕ್ ಅಭಿವೃದ್ಧಿ ಹಾಗೂ ವರಸಿದ್ಧಿ ವಿನಾಯಕ ದೇವಸ್ಥಾನದಿಂದ ಪಾರ್ಕಿನವರೆಗೆ ಡಾಂಬರೀಕರಣ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದರು. ಪಾರ್ಕ್ ಒಳಗೆ ರಾತ್ರಿ ವೇಳೆ ಕತ್ತಲೆ ಇರುವುದರಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗುತ್ತಿದ್ದು, ಹೈಮಾಸ್ಕ್ ದೀಪ ಅಳವಡಿಸಿ ಸೂಕ್ತ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬಡಾವಣೆಯಲ್ಲಿ ವಾಸಿಸುವ ಸರ್ಕಾರಿ ಸೇವೆಯಿಂದ ನಿವೃತ್ತರಾದವರನ್ನು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ವಾಮಿ ವಿವೇಕಾನಂದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದಲೂ ಬಡಾವಣೆಯ ಅಭಿವೃದ್ಧಿ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಎಂಜಿನಿಯರ್ ಕವಿತಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ಮೋಹನ್ ಕುಮಾರ್, ಗೌರವಾಧ್ಯಕ್ಷ ಶಿವರಾಮೇಗೌಡ, ರುದ್ರೇಗೌಡ, ಕಾರ್ಯಕಾರಿ ಮಂಡಳಿ ಸದಸ್ಯ ನಂಜುಂಡೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿವಾಸಿ ಶಿಲ್ಪ ಅವರು ಪಕ್ಷಿ ನೋಟದ ವಿವರ ನೀಡಿದರು. ಧನ್ಯಶೀಲಾ ವಸಂತಕುಮಾರ್ ಸ್ವಾಗತಿಸಿದರು. ಕುಮಾರಿ ಧನ್ಯ ಹಾಗೂ ಸಾನ್ನಿಧ್ಯ ಪ್ರಾರ್ಥನೆ ನೆರವೇರಿಸಿದರು.