ಸಾರಾಂಶ
ಸ್ಮಶಾನ ಜಾಗದಲ್ಲಿ ಚಿಂದಿ ಆಯುವವರಿಗೆ ಸಿಕ್ಕ ಮೃತ ದೇಹ. ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗಿರುವ ಮಕ್ಕಳು ಎಲ್ಲರೂ ಚೆನ್ನಾಗಿದ್ದಾರೆ ಎಂಬುದಾಗಿ ಮಾಹಿತಿ ತರಿಸಿಕೊಂಡಿದ್ದೇನೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಡಾ. ಆರ್.ವಿ. ನಾಯಕ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸುರಪುರ
ನವಜಾತು ಶಿಶುವಿನ ಶವ (ಮೃತದೇಹ) ಪತ್ತೆಯಾದ ಘಟನೆ ನಗರದ ಝಂಡದಕೇರಿಯ ಸಂತ್ರಸ್ತವಾಡಿಯ ಸಮೀಪದ ಖಬರಸ್ತಾನದಲ್ಲಿ (ಸ್ಮಶಾನ ಜಾಗ) ಪತ್ತೆಯಾಗಿದೆ.ಎಂದಿನಂತೆ ಚಿಂದಿ ಆಯುವವರು ಚೀಲವನ್ನು ಜಾಡಿಸಿದಾಗ ಮೃತಪಟ್ಟ ಮಗುವಿನ ದೇಹ ಕೆಳಗೆ ಬಿದ್ದಿದೆ. ಇದನ್ನು ನೋಡುತ್ತಿದ್ದಂತೆ ಚೀರುತ್ತಾ ಅಕ್ಕಪಕ್ಕದಲ್ಲಿದ್ದ ಜನರನ್ನು ಕೂಗಿ ಕರೆದಿದ್ದಾರೆ. ಬಳಿಕ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದ ಪರಿಶೀಲಿಸಿದ ಬಳಿಕ ನಗರಸಭೆ ಸಿಬ್ಬಂದಿ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ. ನಾಯಕ ಪ್ರತಿಕ್ರಿಯಿಸಿ, ಇತ್ತೀಚೆಗೆ ನವಜಾತು ಶಿಶು ಮೃತಪಟ್ಟ ಎರಡನೇ ಪ್ರಕರಣವಾಗಿದೆ. ಕುಂಬಾರಪೇಟೆ ಮತ್ತು ಝಂಡದಕೇರಿಯ ಖಬರಿಸ್ತಾನದಲ್ಲಿ ಪತ್ತೆಯಾಗಿರುವುದು ಹಲವು ಅನುಮಾನ ಮೂಡಿಸಿದೆ. ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗಿರುವ ಮಕ್ಕಳು ಎಲ್ಲರೂ ಚೆನ್ನಾಗಿದ್ದಾರೆ ಎಂಬುದಾಗಿ ಮಾಹಿತಿ ತರಿಸಿಕೊಂಡಿದ್ದೇನೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನನವಾಗಿದ್ದು, ಆಸ್ಪತ್ರೆಯ ಗುರುತುಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲೇ ಜನಿಸಿರುವ ಮಗುವಾಗಿದೆ ಎಂಬುದನ್ನು ಖಚಿತವಾಗಿ ಹೇಳುತ್ತೇವೆ ಎಂದು ನಗರಸಭೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.