ನವದಂಪತಿಗಳು ಚೊಕ್ಕ ಸಂಸಾರ ನಡೆಸಿ: ಸಂಸದ ಗದ್ದಿಗೌಡರ

| Published : Feb 27 2025, 12:36 AM IST

ಸಾರಾಂಶ

ನವದಂಪತಿಗಳು ಕುಟುಂಬದಲ್ಲಿ ಅನೋನ್ಯವಾಗಿ ಇದ್ದು, ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಬೇಕು.

ಕನ್ನಡಪ್ರಭ ವಾರ್ತೆ ಬಾದಾಮಿ

ಲಕ್ಷಾಂತರ ರು. ಹಣ ದುಂದುವೆಚ್ಚ ಮಾಡುವ ಬದಲಾಗಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಬಡವರಿಗೆ ಅನುಕೂಲವಾಗುತ್ತದೆ. ನವದಂಪತಿಗಳು ಪತಿ, ಅತ್ತೆ, ಮಾವ ಸೇರಿದಂತೆ ಕುಟುಂಬದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ನವದಂಪತಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಶ್ರೀ ದಿಗಂಬರೇಶ್ವರರ 82ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನವದಂಪತಿಗಳು ಕುಟುಂಬದಲ್ಲಿ ಅನೋನ್ಯವಾಗಿ ಇದ್ದು, ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಬೇಕು. ಮಿತ ಸಂತಾನದ ಸೂತ್ರ ಅನುಸರಿಸಿ ಚಿಕ್ಕ ಸಂಸಾರ ಚೊಕ್ಕ ಸಂಸಾರದೊಂದಿಗೆ ಜೀವನ ನಡೆಸಬೇಕು ಎಂದರು.

ಮಾಜಿ ಜಿಪಂ ಉಪಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಇಂದು ದುಂದುವೆಚ್ಚದ ಬದಲಾಗಿ ಸರಳವಾಗಿ ವಿವಾಹ ಮಾಡಿ ಉತ್ತಮವಾಗಿ ಜೀವನ ನಡೆಸಬಹುದು. ಗ್ರಾಮೀಣ ಜನರು ಇಂತಹ ಸಾಮೂಹಿಕ ವಿವಾಹದಲ್ಲಿ ತಮ್ಮ ಮಕ್ಕಳ ಮದುವೆ ಮಾಡುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದಾಗಿದೆ. ಪ್ರತಿ ವರ್ಷ ದಿಗಂಬರೇಶ್ವರದ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಮಾಡುತ್ತಿರುವುದು ತುಂಬಾ ಬಡವರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ದಿಗಂಬರೇಶ್ವರ ಮಠದ ಷಡಕ್ಷರ ಮಹಾಸ್ವಾಮೀಜಿ ಅಶೀರ್ವಚನ ನೀಡಿದರು. ವೇದಿಕೆಯ ಮೇಲೆ ನಿವೃತ್ತ ಮುಖ್ಯಶಿಕ್ಷಕ ಎಸ್.ಎ.ಭರಮಗೌಡರ, ಅನಿಲಕುಮಾರ ದೇಸಾಯಿ, ಚಂದ್ರಣ್ಣ, ಹಲಕುರ್ಕಿ ಗ್ರಾ.ಪಂ.ಉಪಾಧ್ಯಕ್ಷೆ ರೇಖಾ ತಳವಾರ ಹಾಜರಿದ್ದರು. ಇದೇ ಸಂದರ್ಭದಲ್ಲಿ 15 ಜೋಡಿಗಳು ನವದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜನಪ್ರತಿನಿಧಿಗಳು, ಗಣ್ಯರು ನವ ವಧು ವರರಿಗೆ ಶುಭ ಕೋರಿದರು. ಯುವಮುಖಂಡ ಪ್ರಕಾಶ ನಾಯ್ಕರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಬಿ.ಎಸ್.ಹಡಗಲಿ ಸ್ವಾಗತಿಸಿದರು. ಆರ್.ಬಿ.ಲೆಂಕೆನ್ನವರ ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಕೆ.ಆಡಗಲ್ ವಂದಿಸಿದರು.

----

ಬಾಕ್ಸ್... ಇಂದು ಶ್ರೀ ದಿಗಂಬರೇಶ್ವರ ಮಹಾರಥೋತ್ಸವ

ಬಾದಾಮಿ: ತಾಲೂಕಿನ ಹಲಕುರ್ಕಿ ಗ್ರಾಮದ ಶ್ರೀ ದಿಗಂಬರೇಶ್ವರ ಮಹಾರಥೋತ್ಸವ ಫೆ.27ರಂದು ಸಂಜೆ 5.30ಕ್ಕೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಆಡಗಲ್ ಗ್ರಾಮಸ್ಥರಿಂದ ರಥದ ಗಾಲಿಗೆ ಪೂಜೆ, 3.30ಕ್ಕೆ ಕಬ್ಬಲಗೇರಿ ಗ್ರಾಮದಿಂದ ರಥದ ಹಗ್ಗದ ಆಗಮನ, 4ಕ್ಕೆ ಮೇಲಿನ ಹಲಕುರ್ಕಿ ಗ್ರಾಮದಿಂದ ರಥದ ಕಳಸ ಆಗಮನ ಸಂಜೆ 5.30ಕ್ಕೆ ಶ್ರೀ ದಿಗಂರೇಶ್ವರ ಮಹಾರಥೋತ್ಸವ ಜರುಗುವುದು. ಸ್ಥಳೀಯ ದಿಗಂಬರೇಶ್ವರ ಮಠದ ಶ್ರೀ ಷಡಕ್ಷರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

----

26-ಬಾದಾಮಿ-1ಎ

ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸಿದರು.

26-ಬಾದಾಮಿ-1ಬಿ;15

ಜೋಡಿ ನವ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.