ನವದಂಪತಿಗಳು ಸಾಮಾಜಿಕ ಕಟ್ಟಳೆಗಳನ್ನು ಪಾಲಿಸುವುದರ ಜತೆಗೆ ನಿಮ್ಮ ಭವಿಷ್ಯಕ್ಕಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿದ ತಂದೆ- ತಾಯಿಗಳನ್ನು ಪ್ರೀತಿಯಿಂದ ಕಾಣಬೇಕು.
ಹೊಳೆಆಲೂರ: ಭಾರತೀಯ ಸಂಪ್ರದಾಯದಲ್ಲಿ ಮದುವೆ ಧಾರ್ಮಿಕ ಮತ್ತು ಭಾವನಾತ್ಮಕ ಅಂಶಗಳನ್ನು ಒಳಗೊಂಡ ಸಾಮಾಜಿಕ ಪದ್ಧತಿಯಾಗಿದೆ. ಇಂದಿನ ದುಬಾರಿ ಕಾಲದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ನವದಂಪತಿಗಳು ಸಾಮೂಹಿಕ ವಿವಾಹದಲ್ಲಿ ನೂತನ ಜೀವನಕ್ಕೆ ಪದಾರ್ಪಣೆ ಮಾಡುತ್ತಿರುವುದು ಅಗತ್ಯ ಮತ್ತು ಹೆಮ್ಮೆಯ ಸಂಗತಿ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ತಿಳಿಸಿದರು.ಸಮೀಪದ ಬೆನಹಾಳ ಗ್ರಾಮದ ಕನ್ನೂರ ಸಿದ್ದಲಿಂಗೇಶ್ವರ ಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆಯ 15ನೇ ವಾರ್ಷಿಕೋತ್ಸವ ಅಂಗವಾಗಿ ಶ್ರೀಮಠದ ಆವರಣದಲ್ಲಿ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನವದಂಪತಿಗಳು ಸಾಮಾಜಿಕ ಕಟ್ಟಳೆಗಳನ್ನು ಪಾಲಿಸುವುದರ ಜತೆಗೆ ನಿಮ್ಮ ಭವಿಷ್ಯಕ್ಕಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿದ ತಂದೆ- ತಾಯಿಗಳನ್ನು ಪ್ರೀತಿಯಿಂದ ಕಾಣಬೇಕು. ಮಕ್ಕಳನ್ನು ಹೆತ್ತು ಅವರಿಗೆ ನೈತಿಕ ಮೌಲ್ಯಗಳು, ಸಂಸ್ಕೃತಿ, ಸಂಸ್ಕಾರ ಕಲಿಸಿ ಕೊಡುವುದರ ಮೂಲಕ ಶಾಂತಿ, ಪರಸ್ಪರ ಸಹಬಾಳ್ವೆ ಹಾಗೂ ಸಾಮರಸ್ಯದ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಮಾರ್ಗದರ್ಶನ ಮಾಡಿದರೆ ಮಾತ್ರ ಸಾಮೂಹಿಕ ವಿವಾಹದಲ್ಲಿ ಜೀವನಕ್ಕೆ ಕಾಲಿಟ್ಟಿದ್ದು ಸಾರ್ಥಕವಾಗುತ್ತದೆ ಎಂದರು.ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ, ಸಾಧು ಸತ್ಪುರಷರ ತ್ಯಾಗ ಪರಂಪರೆ ಹೊಂದಿರುವ ಹಾಗೂ ಮನುಕುಲದ ಹಿತ ಬಯಸುವ ಹಿಂದು ಧರ್ಮದ ಆಚಾರ ವಿಚಾರ, ವಿವಾಹ ಪದ್ಧತಿ, ಜೀವನ ಶೈಲಿಗೆ ಇತ್ತೀಚಿಗೆ ಪಾಶ್ಚಿಮಾತ್ಯರು ಸಹ ಆಕರ್ಷಿತರಾಗುತ್ತಿದ್ದಾರೆ. ಆದರೆ ವಿದ್ಯಾವಂತರು ಎನಿಸಿಕೊಳ್ಳುವ ನಾವೇ ಅಸಡ್ಡೆತನದಿಂದ ವರ್ತಿಸುತ್ತಿದ್ದೇವೆ. ಗುಟಕಾ, ಮದ್ಯಪಾನ ಇತ್ಯಾದಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಹಿರಿಯರು ಗಂಭೀರವಾಗಿ ಪರಿಗಣಿಸಬೇಕು ಎಂದರು.ಈ ವೇಳೆ ಸದಾಶಿವ ಮಹಾಂತ ಶಿವಾಚಾರ್ಯರು, ನವಲಗುಂದ ಗವಿಮಠದ ಬಸವಲಿಂಗ ಸ್ವಾಮಿಗಳು, ಶಾಪಾನುಗ್ರಹದ ಮಲ್ಲಿಕಾರ್ಜುನ ಶ್ರೀಗಳು, ನರಗುಂದ ಮುಗಳಕೋಡ ಶಾಖಾ ಮಠದ ಬಸವರಾಜ ದೇವರು, ಯಚ್ಚರೇಶ್ವರ ಶ್ರೀಗಳು, ಬೆನಕಟ್ಟಿ ವೀರಯ್ಯ ಅಜ್ಜನವರು, ವಿದ್ಯಾಗಿರಿಯ ವಿಶ್ವರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸೋಮಣ್ಣ ಉಮಚಗಿ, ಮಲ್ಲಿಕಾರ್ಜುನ ಕೋಳೇರಿ, ದಶರಥ ಗಾಣಗೇರ, ನಿಂಗಪ್ಪ ಬದಾಮಿ, ಬಸನಗೌಡ ಕರಿಗೌಡ್ರ, ಮುತ್ತು ಪಾಟೀಲ, ಕಾಶಪ್ಪ ಬಳಗಾನೂರ, ಲಲಿತಾ ಕೋರಣ್ಣವರ ಇತರರು ಇದ್ದರು.