ಹಾವೇರಿ: ಬೀದಿ ಬದಿ ವ್ಯಾಪಾರ ಮಾಡುವ ಬಡ ವ್ಯಾಪಾರಿಗಳಿಗೆ ಉಚಿತ ಸ್ಟಾಲ್‌ ಛತ್ರಿ ವಿತರಣೆ ಹಾಗೂ ತಮಗೆ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಮೂಲಕ ಇಲ್ಲೊಂದು ಜೋಡಿ ಹಸೆಮಣೆ ಏರಿದ್ದಾರೆ.ಇಂತಹ ವಿನೂತನ ಹಾಗೂ ಅಪರೂಪದ ಕ್ಷಣಕ್ಕೆ ಇಲ್ಲಿಯ ಭಗತ್‌ಸಿಂಗ್‌ ಕಾಲೇಜು ಆವರಣದಲ್ಲಿ ಸೇರಿದ್ದ ಸಾವಿರಾರು ಜನರು ಸಾಕ್ಷಿಯಾದರು.ಇಲ್ಲಿಯ ಭಗತ್‌ಸಿಂಗ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಸತೀಶ ಎಂ.ಬಿ. ಅವರ ವಿವಾಹದ ನಿಮಿತ್ತ ಶುಕ್ರವಾರ ಈ ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಕಾರ್ಮಿಕದ ದಿನದಂದೇ ಹಸೆ ಮಣೆ ಏರಿದ ಅವರು, ಬಡ ವ್ಯಾಪಾರಿಗಳಿಗೆ ನೆರವಾಗಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದ ಜನ ತತ್ತರಿಸಿ ಹೋಗಿದ್ದಾರೆ. ಹೊಟ್ಟೆಪಾಡಿಗಾಗಿ ಬೀದಿ ಬದಿ ವ್ಯಾಪಾರ ಮಾಡೋ ಬಡ ವ್ಯಾಪಾರಸ್ಥರು ಬಿಸಿಲಿನ ತಾಪಕ್ಕೆ ದಂಗಾಗಿ ಹೋಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಕಷ್ಟ ನೋಡಲಾಗದೇ ಸತೀಶ ಅವರು ತಮ್ಮ ಮದುವೆ ಪ್ರಯುಕ್ತ ಉಚಿತ ಸ್ಟಾಲ್ ಛತ್ರಿಗಳನ್ನು ವಿತರಿಸಿದ್ದಾರೆ. ಹಾವೇರಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಭಗತ್ ಸಿಂಗ್ ಪಿಯು ಕಾಲೇಜಿನ ಸಂಸ್ಥಾಪಕರಾದ ಸತೀಶ್ ಭಾಗಣ್ಣನವರ್ ಹಾಗೂ ಮಹಾರಾಣಿ ಅವರ ವಿವಾಹದ ಸಂದರ್ಭದಲ್ಲಿ ಈ ನೂತನ ಜೋಡಿ ಬಡ ವ್ಯಾಪಾರಿಗಳಿಗೆ ಛತ್ರಿಗಳನ್ನು ನೀಡಿ ಗೌರವಿಸಿತು.

ಸುಮಾರು 200 ಬೀದಿಬದಿಯ ವ್ಯಾಪರಸ್ಥರಿಗೆ ಉಚಿತವಾಗಿ ಸ್ಟಾಲ್ ಛತ್ರಿ ವಿತರಣೆ ಮಾಡಿದರು. ಇದರ ಜೊತೆಗೆ ತಮಗೆ ಅಕ್ಷರ ಕಲಿಸಿದ ಗುರುಗಳನ್ನೆಲ್ಲಾ ಮದುವೆಗೆ ಆಹ್ವಾನಿಸಿ ವೇದಿಕೆ ಮೇಲೆ ಕರೆತಂದು ಗೌರವ ಸಲ್ಲಿಸಿದರು. ಭಗತ್‌ಸಿಂಗ್‌ ಪಿಯು ಕಾಲೇಜು, ಪದವಿ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ಚಿಕ್ಕ ವಯಸ್ಸಿನಲ್ಲೇ ಕಟ್ಟಿ ಬೆಳೆಸಿದ ಸತೀಶ ಕಡುಬಡತನದಲ್ಲೇ ಶಿಕ್ಷಣ ಮುಗಿಸಿದವರು. ಬಡತನದ ಕಷ್ಟಗಳನ್ನು ಅರಿತಿರುವ ಅವರು, ತಾವೇ ಶಿಕ್ಷಣ ಸಂಸ್ಥೆ ಕಟ್ಟಿ ಇಂದು ಹೆಮ್ಮರವಾಗಿ ಬೆಳೆಸುತ್ತಿದ್ದಾರೆ. ಜತೆಗೆ, ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ತಮಗೆ ಕಲಿಸಿದ ಗುರುಗಳನ್ನೆಲ್ಲ ಆಹ್ವಾನಿಸಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಅವರೆಲ್ಲರೂ ನವಜೋಡಿಗೆ ಅಕ್ಷತೆ ಹಾಕಿ ಶುಭಕೋರಿದರು.

15 ದಿನಗಳ ಹಿಂದೆಯೇ ಉಚಿತ ಸ್ಟಾಲ್‌ ಛತ್ರಿ ವಿತರಣೆಗೆ ಬೀದಿಬದಿ ವ್ಯಾಪಾರಸ್ಥರಿಗೆ ನೋದಣಿಗೆ ಅವಕಾಶ ನೀಡಿದ್ದೆವು. ಮೊದಲು ಬಂದ 200 ಜನರಿಗೆ ಛತ್ರಿ ವಿತರಿಸಲು ಉದ್ದೇಶಿಸಿದ್ದೆವು. ಆದರೆ, 400ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರು ಛತ್ರಿಗಳಿಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. 200 ಜನರಿಗೆ ಈಗಾಗಲೇ ಸ್ಟಾಲ್ ಛತ್ರಿ ವಿತರಣೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲರಿಗೂ ಸ್ಟಾಲ್ ಛತ್ರಿ ನೀಡುತ್ತೇವೆ. ಪ್ರಸಕ್ತ ವರ್ಷ ಹಾವೇರಿ ಜಿಲ್ಲೆಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇದೆ. ಬೀದಿ ಬದಿಯ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ಅಲ್ಲದೇ ಕಾರ್ಮಿಕರ ದಿನಾಚರಣೆಯಂದೇ ನಾವು ಹಸೆಮಣೆ ಏರುತ್ತಿರುವುದರ ಸವಿ ನೆನಪಿಗಾಗಿ ಬೀದಿಬದಿಯ ವ್ಯಾಪಾರಸ್ಥರಿಗೆ ಉಚಿತವಾಗಿ ಛತ್ರಿ ವಿತರಿಸಿದ್ದೇವೆ ಎಂದು ಭಗತ್‌ಸಿಂಗ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸತೀಶ ಎಂ.ಬಿ. ಹೇಳಿದರು.