ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿನ ಮಾಧ್ಯಮದ ಅಬ್ಬರ ಜೋರಾಗಿದೆ. ಆದರೂ ಮುದ್ರಣ ಮಾಧ್ಯಮವಾದ ದಿನಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆ ಬೇಕು ಎಂದು ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಹೇಳಿದರು.ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಯೋಗದಲ್ಲಿ ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ - ಉಪನ್ಯಾಸ- ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಭಾಷೆಯನ್ನು ೨ನೇ ರಾಜ್ಯ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಈ ಕಾರ್ಯದಲ್ಲಿ ಒತ್ತಡ ಹೇರುವ ಕೆಲಸವನ್ನು ಈ ಭಾಗದ ಪತ್ರಕರ್ತರು ಮಾಡಬೇಕಾಗಿದೆ. ಪಶ್ಚಿಮ ಬಂಗಾಳ ಸೇರಿದ ಅನೇಕ ರಾಜ್ಯಗಳಲ್ಲಿ ೨ನೇ ರಾಜ್ಯಭಾಷೆ ಘೋಷಣೆ ಸಂದರ್ಭ ಯಾವೆಲ್ಲ ಮಾನದಂಡ ಅನುಸರಿಸಲಾಗಿದೆ ಎಂಬುದರ ಅಧ್ಯಯನ ನಡೆಸಿ ವರದಿ ತಯಾರಿಸಲಾಗಿದೆ. ಅದೇ ರೀತಿ ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸುವ ವಿಚಾರದಲ್ಲೂ ಕೇಂದ್ರದ ಮೇಲೆ ರಾಜ್ಯದಿಂದ ಒತ್ತಡ ತರುವ ಕೆಲಸ ಮಾಡಲಾಗುವುದು ಎಂದರು.ಪತ್ರಿಕಾ ವಿತರಕರಾದ ವಿಶ್ವನಾಥ್ ಅವರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ದೇಶ ಕಟ್ಟುವಲ್ಲಿ ಪತ್ರಿಕೆಗಳ ಪಾತ್ರ ಬಹಳಷ್ಟು ದೊಡ್ಡದು. ಸೋಷಿಯಲ್ ಮೀಡಿಯಾದಿಂದ ಉಪಯೋಗವಿದೆಯಾದರೂ ಅಷ್ಟೇ ಕೆಟ್ಟದೂ ಇದೆ ಎಂದರು.
ಪತ್ರಕರ್ತರ ಸಾಧಕ ಮಕ್ಕಳನ್ನು ಪುರಸ್ಕರಿಸಿ, ಉಪನ್ಯಾಸ ನೀಡಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಮಾಧ್ಯಮ ವರದಿ ಇವತ್ತು ಪ್ರತಿಯೊಬ್ಬರ ಕೈಗೂ ಬಂದಿದೆ. ಜಗತ್ತಿನಲ್ಲಿ ಜೀವರಕ್ಷಕ ಔಷಧಿ ಮೊದಲ ಸ್ಥಾನದಲ್ಲಿದ್ದರೆ, ೨ನೇ ಸ್ಥಾನದಲ್ಲಿ ಮುದ್ರಣ ಮಾಧ್ಯಮಗಳಿವೆ. ಇಷ್ಟಾದರೂ ಮಾಧ್ಯಮಗಳು ಕೆಲವೊಂದು ಅಪವಾದಗಳನ್ನು ಕೂಡ ಎದುರಿಸುತ್ತಿವೆ. ಆರೋಪಿಯೊಬ್ಬನನ್ನು ನ್ಯಾಯಾಲಯ ವಿಚಾರಣೆ ನಡೆಸುವ ಮೊದಲೇ ಮಾಧ್ಯಮಗಳು ವಿಚಾರಣೆ ನಡೆಸಿ ತಪ್ಪಿತಸ್ಥನೆಂದು ಘೋಷಿಸುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವನಿಕೃಷ್ಣ, ಎಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ಸ್ ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ., ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸಿದ್ಧಿಕ್ ನೀರಾಜೆ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಾದ ಹಷೇಂದ್ರ ಪ್ರಸಾದ್, ಮಹೇಶ್ ಪ್ರಸಾದ್, ದೀಪ್ತಿ ಭಟ್, ಎ.ಯು. ಅವನೀಶ್ ಕುಮಾರ್, ಸಮ್ಯಕ್, ಸಿಹಾ ಶಮ್ರಾ, ಪುಣ್ಯಶ್ರೀ ಪಿ. ಅವರನ್ನು ಸನ್ಮಾನಿಸಲಾಯಿತು.ಪುತ್ತೂರಿನ ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ಪತ್ರಿಕಾ ಭವನದಲ್ಲಿ ಕೊಡುಗೆಯಾಗಿ ನೀಡಲಾದ ಸಿಸಿ ಕ್ಯಾಮರಾವನ್ನು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಂಘಕ್ಕೆ ಹಸ್ತಾಂತರಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುಧಾಕರ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕಾರಿ ಸಮಿತಿ ಸದಸ್ಯ ಮೇಘ ಪಾಲೆತ್ತಾಡಿ ಮತ್ತು ರೋಟರಿ ಯುವ ಸಂಸ್ಥೆಯ ಕಾರ್ಯದರ್ಶಿ ವಚನಾ ಜಯರಾಂ ಸನ್ಮಾನ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ವಂದಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ನಿರೂಪಿಸಿದರು.