ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ವಿಜಯೇಂದ್ರ ಒಬ್ಬ ಯುವ ನಾಯಕ. ಅವರಿಗೆ ತಮ್ಮದೇ ಆದ ಶಕ್ತಿ ಇದೆ. ಮುಂದಿನ 2028ರ ಚುನಾವಣೆಯನ್ನು ವಿಜಯೇಂದ್ರ ಅವರ ನೇತೃತ್ವದಲ್ಲಿ ಸ್ಪರ್ಧಿಸಿ 140 ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಶ್ರೀ ಕ್ಷೇತ್ರ ಎಡಿಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ನಾಡಿನ ಜನತೆಗೆ ಒಳಿತಾಗಲಿ, ಯಡಿಯೂರಪ್ಪ ಅವರ ಕುಟುಂಬದ ಮೇಲೆ ಯಾವುದೇ ದುಷ್ಟ ಶಕ್ತಿಯ ಕಣ್ಣು ಬೀಳದಿರಲಿ, ನರೇಂದ್ರ ಮೋದಿ ವಿಜಯೇಂದ್ರ ಹಾಗೂ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂದು ಅವರ ಮನೆ ದೇವರಾದ ಶ್ರೀ ಎಡಿಯೂರು ಸಿದ್ದಲಿಂಗೇಶ್ವರ ಅವರಿಗೆ ಪೂಜೆ ಸಲ್ಲಿಸಿದ್ದೇವೆ. ಯಡಿಯೂರಪ್ಪನವರು ಅಂದು ಸೈಕಲ್ ತುಳಿದ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ನಂತರ ಹಲವಾರು ವಿಶೇಷ ಯೋಜನೆಗಳನ್ನು ತಂದ ಧೀಮಂತ ನಾಯಕ ಬಿಎಸ್‌ವೈ ಅವರ ಜೊತೆಯಲ್ಲಿ ಮಲ್ಲಿಕಾರ್ಜುನ, ಶಂಕರ್ ಮೂರ್ತಿ ಸೇರಿದಂತೆ ಹಲವರು ಮಹಾನ್ ನಾಯಕರು ಹೋರಾಟ ಮಾಡಿದ್ದರು. ಬಿಎಸ್‌ವೈ ಸಹ 45 ವರ್ಷಕ್ಕೆ ರಾಜ್ಯಾಧ್ಯಕ್ಷರಾಗಿದ್ದರು. ಅದೇ ರೀತಿ ವಿಜಯೇಂದ್ರ ಕೂಡ ಚಿಕ್ಕ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೆ ತಪ್ಪೇನು ಎಂದರು. ಪಕ್ಷದಿಂದ ಕೊಟ್ಟಿರುವ ನೋಟಿಸ್ ಅನ್ನು ಫೇಕ್ ನೋಟಿಸ್ ಅನ್ನುವುದೇಕೆ ? ಎಂದು ಹೆಸರು ಹೇಳದೆ ಯತ್ನಾಳಗೆ ಟಾಂಗ್ ನೀಡಿದರು.
ರಾಹುಲ್ ಗಾಂಧಿ ಅವರನ್ನು ಕೂಡ ನಾವು ವಿರೋಧ ಪಕ್ಷದ ನಾಯಕ ಎಂದು ಒಪ್ಪಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಯುವ ನಾಯಕರಿಗೆ ಅವಕಾಶ ನೀಡುವುದು ಉತ್ತಮ ಎಂದರು. ಡಿಸೆಂಬರ್ ಹತ್ತರಂದು ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಈ ಸಮಾವೇಶಕ್ಕೆ ಮಾಜಿ ಸಚಿವರು ಸೇರಿದಂತೆ ಆರ್ ಅಶೋಕ್ ಹಾಗೂ ಕೇಂದ್ರ ಸಚಿವರನ್ನು ಆಹ್ವಾನಿಸಿದ್ದೇವೆ ಎಲ್ಲರೂ ಕೂಡ ಭಾಗವಹಿಸುತ್ತಾರೆ ಎಂದರು. ಈ ಸಂದರ್ಭದಲ್ಲಿ ನೆಲಮಂಗಲ ತುಮಕೂರು ದಾಬಸ್ ಪೇಟೆ, ಕುಣಿಗಲ್ ನ ಹಲವಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ , ನೆಲಮಂಗಲ ಮಾಜಿ ಶಾಸಕ ನಾಗರಾಜ್, ದಿಲೀಪ್, ತುಮಕೂರು ಜಿಲ್ಲಾ ವಕ್ತಾರ ಸದಾಶಿವಯ್ಯ , ಬಿಎಂಟಿಸಿ ಮಾಜಿ ನಿರ್ದೇಶಕ ಭೃಂಗೇಶ್ , ಯುವ ಮೋರ್ಚಾ ಅಧ್ಯಕ್ಷ ಚೇತನ್ ಸೇರಿದಂತೆ ಇತರರು ಇದ್ದರು.