ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥನೊಬ್ಬ ತನ್ನ ಕಾರು ಮತ್ತು ಲೆಟರ್‌ಹೆಡ್‌ನಲ್ಲಿ ಭಾರತ ಸರ್ಕಾರದ ಹೆಸರು, ಲಾಂಛನವನ್ನು ದುರ್ಬಳಕೆ ಮಾಡಿಕೊಂಡಿರುವುದಲ್ಲದೇ, ಗ್ರಾಹಕ ವ್ಯವಹಾರಗಳ ಸಚಿವಾಲಯದ ಹೆಸರು ದುರುಪಯೋಗಪಡಿಸಿಕೊಂಡು ಓಡಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.ಸಿ.ಡಿ.ಕಿರಣ್ ಎಂಬಾತನೇ ಸರ್ಕಾರಿ ಅಧಿಕಾರಿಯಂತೆ ಬಿಂಬಿಸಿಕೊಳ್ಳುತ್ತಿರುವ ವ್ಯಕ್ತಿಯಾಗಿದ್ದು, ಈತ ವಿವಿಧ ಗ್ರಾಮ ಪಂಚಾಯ್ತಿಗಳಿಗೆ ತೆರಳಿ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆ ನಡೆಸುವುದು, ಗೆಜೆಟೆಡ್ ಅಧಿಕಾರಿಯಂತೆ ಹಸಿರು ಪೆನ್ ಬಳಸುತ್ತಿರುವುದು ಕಂಡುಬಂದಿದೆ. ಇದರ ನಡುವೆಯೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು, ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ಅಚ್ಚರಿ ಮೂಡಿಸಿದೆ.
ನ್ಯಾಷನಲ್ ಭಾರತ್ ಸೇವಕ್ ಸಮಾಜದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಹೆಸರಿನಲ್ಲಿ ತನ್ನ ಲೆಟರ್‌ಹೆಡ್‌ಗಳಲ್ಲಿ ಮತ್ತು ಸ್ವಂತ ಕಾರಿಗೆ ಭಾರತ ಸರ್ಕಾರದ ಹೆಸರು ಮತ್ತು ಲಾಂಛನವನ್ನು ಅಳವಡಿಸಿಕೊಂಡು ಗ್ರಾಹಕರ ವ್ಯವಹಾರಗಳ ಸಚಿವಾಲಯದ ಹೆಸರನ್ನು ದುರುಪಯೋಗಪಡಿಸಿಕೊಂಡು ಓಡಾಡುತ್ತಿದ್ದಾನೆ. ಅಲ್ಲದೇ, ಗ್ರಾಪಂ, ತಾಪಂ, ಜಿಪಂ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲೂ ಅನಧಿಕೃತ ಲೆಟರ್ ಹೆಡ್ ದುರ್ಬಳಕೆ ಮಾಡುತ್ತಾ, ಸರ್ಕಾರಿ ಅಧಿಕಾರಿಯಂತೆ ಹಸಿರು ಪೆನ್ ಬಳಕೆ ಮಾಡುತ್ತಿರುವುದು ಕಂಡುಬಂದಿದೆ.ಗ್ರಾಮ ಪಂಚಾಯ್ತಿಗಳಿಗೆ ತೆರಳಿ ಕೇಂದ್ರ ಯೋಜನೆಗಲಾದ ಜಲಜೀವನ್ ಮಿಷನ್ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾನೆ. ಪಂಚಾಯ್ತಿ ಅಧಿಕಾರಿಗಳು ಈತನನ್ನು ಸರ್ಕಾರಿ ಅಧಿಕಾರಿ ಎಂದು ಭಾವಿಸಿ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಹಕರ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಯಾಗಿದ್ದರೆ ಅಥವಾ ಅಲ್ಲಿಂದ ನೇಮಕಗೊಂಡಿದ್ದರೆ ಜಿಲ್ಲಾಧಿಕಾರಿ ಅಥವಾ ಜಿಪಂ ಸಿಇಓ ಅವರಿಗೆ ಕೇಂದ್ರದಿಂದ ಪತ್ರ ಬರಬೇಕಿತ್ತು. ಆ ರೀತಿಯ ಯಾವುದೇ ಪತ್ರ ಬಂದಿಲ್ಲ. ಸಿ.ಡಿ.ಕಿರಣ್ ಎಂಬ ವ್ಯಕ್ತಿ ಯಾರು, ಆತನ ಕಚೇರಿ ಎಲ್ಲಿದೆ, ಯಾವ ಸಂಸ್ಥೆಯನ್ನು ನಡೆಸುತ್ತಿದ್ದಾನೆ, ಅವನ ಕಾರ್ಯಚಟುವಟಿಕೆಗಳೇನು ಎನ್ನುವುದು ಯಾರಿಗೂ ಅರಿವಿಲ್ಲ. ಆದರೂ ರಾಜಾರೋಷವಾಗಿಯೇ ಭಾರತ ಸರ್ಕಾರದ ಹೆಸರು, ಲಾಂಛನ, ಗ್ರಾಹಕರ ವ್ಯವಹಾರಗಳ ಸಚಿವಾಲಯದ ಹೆಸರನ್ನು ದುರುಪಯೋಗಪಡಿಸಿಕೊಂಡು ಓಡಾಡುತ್ತಿದ್ದಾನೆ. ರಾಜಕೀಯ ಪ್ರಭಾವ ಬಳಸಿ ಈ ರೀತಿ ಸರ್ಕಾರಿ ಅಧಿಕಾರಿಯಂತೆ ಫೋಸ್ ನೀಡುತ್ತಿದ್ದಾನೆಯೋ ಅಥವಾ ದರ್ಪ, ದುರಹಂಕಾರದಿಂದ ಈ ರೀತಿ ವರ್ತಿಸುತ್ತಿದ್ದಾನೆಯೋ ಎಂಬುದನ್ನು ಪ್ರಶ್ನೆಯಾಗಿದೆ.‘ಕಾನೂನು ಕ್ರಮ ಕೈಗೊಳ್ಳುತ್ತೇವೆ’ಕಿರಣ್ ಎಂಬಾತ ತನ್ನ ಸ್ವಂತ ಕಾರಿಗೆ ಭಾರತ ಸರ್ಕಾರ ಎಂಬ ನಾಮಫಲಕ ಹಾಕಿಕೊಂಡು ಓಡಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಲೆಟರ್ ಹೆಡ್ ಬಳಸಿ ಪಂಚಾಯ್ತಿಗಳಿಂದ ಮಾಹಿತಿ ಕೂಡ ಪಡೆಯುತ್ತಿದ್ದಾರೆ. ಈ ಬಗ್ಗೆಯೂ ನಮಗೆ ಮಾಹಿತಿ ಇದೆ. ಯಾವುದೇ ವ್ಯಕ್ತಿ, ತಮ್ಮ ಸ್ವಂತ ವಾಹನಕ್ಕೆ ಈ ರೀತಿ ನಾಮಫಲಕ ಹಾಕಿ ಓಡಾಡುವಂತಿಲ್ಲ. ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಈ ವಿಷಯವನ್ನು ಎಸ್ಪಿ ಹಾಗೂ ಜಿಪಂ ಸಿಇಒ ಅವರ ಗಮನಕ್ಕೆ ತಂದಿದ್ದೇನೆ. ಎಸ್ಪಿ ಅವರ ಮೂಲಕ ಕಾನೂನು ಕ್ರಮ ಕೈಗೊಳ್ಳುತ್ತೇವೆ. ವ್ಯಕ್ತಿಗೆ ಸ್ಪಂದಿಸಿದಂತೆ ಸಿಇಒ ಮೂಲಕ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗುವುದು. ಆತನ ನೇಮಕದ ಬಗ್ಗೆ ನಮಗೆ ಕೇಂದ್ರ ಸರ್ಕಾರದಿಂದ ಯಾವುದೇ ಪತ್ರ, ಸೂಚನೆ ಬಂದಿಲ್ಲ. ಹೀಗಾಗಿ ಕ್ರಮ ಕೈಗೊಳ್ಳುತ್ತೇವೆ.
- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ