ಸಾರಾಂಶ
ನವದೆಹಲಿ: ಬೆಂಗಳೂರಿನ ಆರ್‌ಎಸ್‌ಎಸ್ ಕಾರ್ಯಕರ್ತ ಆರ್. ರುದ್ರೇಶ್ ಅವರನ್ನು 2016ರಲ್ಲಿ ಹತ್ಯೆ ಮಾಡಿದ್ದ ಪ್ರಕರಣದ ಆರೋಪಿ ಮೊಹಮ್ಮದ್ ಗೌಜ್ ನಿಯಾಜಿ಼ಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆಫ್ರಿಕಾ ಖಂಡದ ತಾಂಜೇನಿಯಾದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ನಿಷೇಧಿತ ಪಿಎಫ್‌ಐ ಕಾರ್ಯಕರ್ತ ಮೊಹಮ್ಮದ್ ಗೌಸ್ ನಿಯಾಜಿ಼ 8 ವರ್ಷ ಹಿಂದೆ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಸಂಚಿನ ಮುಖ್ಯ ಪಾತ್ರಧಾರಿ ಆಗಿದ್ದ ಎಂಬ ಆರೋಪ ಕೇಳಿಬಂದಿತ್ತು. ಕೊಲೆ ಆದ ನಂತರ ಈತ ತಲೆಮರೆಸಿಕೊಂಡಿದ್ದ. ಬಳಿಕ ಈತನ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರು. ಬಹುಮಾನವನ್ನು ಘೋಷಿಸಲಾಗಿತ್ತು.ನಂತರ ಗುಜರಾತ್ ಉಗ್ರ ನಿಗ್ರಹ ದಳ (ಎಟಿಎಸ್) ಕೂಡ ತನಿಖೆಯನ್ನು ತೀವ್ರಗೊಳಿಸಿ ಈತ ಆಫ್ರಿಕಾದಲ್ಲಿ ಇರುವುದನ್ನು ಪತ್ತೆ ಮಾಡಿತ್ತು. ಅಲ್ಲಿನ ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಸಹಕಾರದೊಂದಿಗೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಗಡೀಪಾರು ಆದ ನಂತರ ಈತ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ. ಅಲ್ಲಿ ಈತನನ್ನು ಎನ್‌ಐಎ ಬಂಧಿಸಿದೆ. ಇದರೊಂದಿಗೆ ರುದ್ರೇಶ್ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ರುದ್ರೇಶ್‌ರನ್ನು 2016ರ ಅ.16ರಂದು ಶಿವಾಜಿನಗರದಲ್ಲಿ ಬೈಕ್‌ನಲ್ಲಿ ಬಂದ 4 ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆರೆಸ್ಸೆಸ್ ಕಾರ್ಯಕರ್ತರಲ್ಲಿ ಭೀತಿ ಮೂಡಿಸಲು ಹೀಗೆ ಮಾಡಲಾಗಿತ್ತು. ಎಸ್‌ಡಿಪಿಐ ಹೆಬ್ಬಾಳ ಕ್ಷೇತ್ರದ ಅಧ್ಯಕ್ಷ ಅಸೀಂ ಶರೀಫ್ ಹಾಗೂ ನಯಾಜಿ ಅವರು ತಮ್ಮ ನಾಲ್ವರು ಸಹಚರರಿಗೆ ರುದ್ರೇಶ್ ಹತ್ಯೆ ಮಾಡಲು ಸೂಚಿಸಿದ್ದರು. ಆರೆಸ್ಸೆಸ್ ವಿರುದ್ಧ ಮಾಡುವುದು ಪವಿತ್ರ ಯುದ್ಧ ಎಂದು ಹಂತಕರ ಬ್ರೇನ್‌ವಾಶ್ ಮಾಡಿದ್ದರು ಎಂದು ಎನ್‌ಐಎ ಹೇಳಿದೆ.