ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಭೀಕರ ಹತ್ಯೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದು, ದಕ್ಷಿಣ ಕನ್ನಡದ ಸಮಸ್ತ ಹಿಂದೂ ಸಮಾಜ ಇದನ್ನು ಮನಪೂರ್ವಕವಾಗಿ ಸ್ವಾಗತಿಸುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.ಸುಹಾಸ್ ಶೆಟ್ಟಿ ಅವರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಪಿಎಫ್‌ಐ ಹಾಗೂ ಇನ್ನಿತರ ಜಿಹಾದಿ ಸಂಘಟನೆಗಳ ಬೇರುಗಳನ್ನು ಬುಡ ಸಮೇತ ಕಿತ್ತು ಹಾಕಲು ಮತ್ತು ಈ ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಿ, ಈ ಸಂಚಿಗೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಒದಗಿಸಿದ ದೇಶ ಹಾಗೂ ಪರದೇಶಗಳ ಹಣದ ಮೂಲಗಳನ್ನು ಪತ್ತೆಹಚ್ಚಲು ಎನ್‌ಐಎ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎನ್ನುವ ವಿಶ್ವಾಸ ನನಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಬೇರು ಬಿಟ್ಟಿರುವ ಜಿಹಾದಿಗಳನ್ನು, ಮೂಲಭೂತವಾದಿ ಸಂಘಟನೆಗಳನ್ನು ಮಟ್ಟ ಹಾಕಲು ರಾಷ್ಟ್ರೀಯ ತನಿಖಾ ದಳ ನಡೆಸುವ ತನಿಖೆ ಅತ್ಯಂತ ಸಹಕಾರಿಯಾಗಲಿದೆ ಎನ್ನುವ ವಿಶ್ವಾಸ ನಮಗಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ತುಷ್ಟಿಕರಣದ ರಾಜಕೀಯವನ್ನು ಮುಂದುವರಿಸಿ ಸುಹಾಸ್ ಶೆಟ್ಟಿಯವರ ಹತ್ಯೆಯ ತನಿಖೆಯನ್ನು ಎನ್‌ಐಎಗೆ ವಹಿಸಲು ನಿರಾಕರಿಸಿದಾಗ ಪ್ರಧಾನಿ ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರ ಮುಂದಾಳತ್ವವನ್ನು ವಹಿಸಿಕೊಂಡು ಈ ತನಿಖೆಯನ್ನು ಎನ್‌ಐಎಗೆ ವಹಿಸಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಹಾಗೂ ದಕ್ಷಿಣ ಕನ್ನಡದ ಸಮಸ್ತ ಹಿಂದೂ ಸಂಘಟನೆಗಳ ಹಿರಿಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.