‘ನಿಗರಾಣಿ’ ವಿನೂತನ ಯೋಜನೆ ಜಿಲ್ಲೆಯಲ್ಲಿ ಜಾರಿ: ಎಸ್ಪಿ ಚನ್ನಬಸವಣ್ಣ

| Published : Feb 14 2024, 02:20 AM IST

‘ನಿಗರಾಣಿ’ ವಿನೂತನ ಯೋಜನೆ ಜಿಲ್ಲೆಯಲ್ಲಿ ಜಾರಿ: ಎಸ್ಪಿ ಚನ್ನಬಸವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಕಳ್ಳತನ ಪ್ರಕರಣಗಳು ಈ ಯೋಜನೆಯಿಂದ ಕಡೆಯಾಗಲಿದೆ: ಎಸ್‌ಪಿ ಚನ್ನಬಸವಣ್ಣ । ರಾಜ್ಯದಲ್ಲಿಯೇ ವಿನೂತನ ಯೋಜನೆ ಜಾರಿ. ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಂದ ನೆರೆ ಮನೆ ನಿಗಾರಾಣಿ ಮಾಡಲು ಮನವಿ. ಮನೆಗೆ ಬೀಗ ಹಾಕಿ ಹೊರಹೋದಲ್ಲಿ 8277975068 ಮೊಬೈಲ್‌ಗೆ ಮಾಹಿತಿ ನೀಡಿ ಎಂದು ಎಸ್ಪಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬೀಗ ಹಾಕಿದ ಮನೆಗಳ ಮೇಲೆ ಗಸ್ತು ಸಿಬ್ಬಂದಿ ನಿಗಾ ಇಡಲು ಜಿಲ್ಲಾ ಪೊಲೀಸ್‌ ವತಿಯಿಂದ ವಿನೂತನ ಯೋಜನೆ ನಿಮ್ಮ ಮನೆ ನಮ್ಮ ನಿಗಾರಾಣಿ (ಕಾಳಜಿ ವಹಿಸುವುದು) ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಹೇಳಿದರು.

ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಕಳ್ಳತನ ಪ್ರಕರಣಗಳು ಈ ಯೋಜನೆಯಿಂದ ಜಿಲ್ಲೆಯಲ್ಲಿ ಕಡಿಮೆಯಾಗಲಿವೆ. ರಾಜ್ಯದಲ್ಲಿ ವಿನೂತನ ಯೋಜನೆ ಇದಾಗಿದ್ದು ಇದನ್ನು ಮೊದಲಿಗೆ ತಾಲೂಕು ಕೇಂದ್ರಗಳಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ಬೀಗ ಹಾಕಿ ಹೊರಗೆ ಹೋದಲ್ಲಿ 8277975068 ಮೊಬೈಲ್‌ಗೆ ಮಾಹಿತಿ ನೀಡಿ:

ಸಾರ್ವಜನಿಕರಿಗಾಗಿ ವಾಟ್ಸಪ್‌ ನಂಬರ್‌ ಹಂಚಿಕೊಳ್ಳಲಾಗುವುದು. ಅವರು ಮನೆ ಬೀಗ ಹಾಕಿ ಹೊರಗಡೆ ಹೋದಲ್ಲಿ 8277975068 ಈ ಮೊಬೈಲ್‌ ನಂಬರ್‌ನ ವಾಟ್ಸಪ್‌ಗೆ ತಮ್ಮ ಹೆಸರು, ಪೋನ್‌ ನಂಬರ್‌, ಠಾಣೆಯ ವ್ಯಾಪ್ತಿ, ಯಾವ ದಿನಾಂಕದಿಂದ ಎಲ್ಲಿಯವರೆಗೆ ತಾವು ಮನೆಯಲ್ಲಿ ಇರುವುದಿಲ್ಲ ಎಂಬ ಮಾಹಿತಿ ನೀಡಿದರೆ ನಿಮ್ಮ ಮನೆಗಳ ಮೇಲೆ ನಮ್ಮ ಪೊಲೀಸ್‌ ಸಿಬ್ಬಂದಿ ನಿಗಾರಾಣಿ ಮಾಡುವರು ಎಂದು ಹೇಳಿದರು. ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಂದ ನೆರೆಮನೆ ನಿಗಾರಾಣಿ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ ಎಂದರು.

ಹರ್ಯಾಣಾ ಮೂಲದವರಿಂದ ಎಟಿಎಂ ಕಳ್ಳತನ, ಮೂವರ ಬಂಧನ:

ಹಳ್ಳಿಖೇಡ (ಬಿ) ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಒಟ್ಟು 7 ಜನ ಆರೋಪಿಗಳಲ್ಲಿ ಇನ್ನೂ ನಾಲ್ಕು ಜನ ತಲೆಮರಿಸಿಕೊಂಡಿದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ. ಇವರಿಂದ 9,50,000 ರು. ನಗದು ಹಣ ಮತ್ತು ಬಿಳಿ ಬಣ್ಣದ ಕ್ರೆಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ದಸ್ತಗಿರಿಯಾದ ಮೂರು ಆರೋಪಿಗಳೆಲ್ಲ ಹರ್ಯಾಣಾ ಮೂಲದವರಾಗಿದ್ದಾರೆ ಎಂದು ಎಸ್‌ಪಿ ಚನ್ನಬಸವಣ್ಣ ಮಾಹಿತಿ ನೀಡಿದರು.

ನೂತನ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳವಾದ ಮಹಿಂದ್ರಾ ಅರ್ಜುನ ಟ್ರ್ಯಾಕ್ಟರ್‌ನ್ನು ಆರೋಪಿ ಚೋಂಡಿ ತಾಂಡಾ ಮೂಲದ ಅಶೋಕ ಲಾಲಸಿಂಗ್‌ ಎಂಬಾತನಿಂದ ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಹುಮನಾಬಾದ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾದ 12 ಮೋಟಾರು ಬೈಕ್‌ಗಳು ಹಾಗೂ 4.60.000 ರು.ಗಳನ್ನು ಆರೋಪಿ ಚಿಟಗುಪ್ಪ ತಾಲೂಕಿನ ಚಾಂಗಲೇರಾ ಗ್ರಾಮ ಮೂಲದ ಸಲ್ಮಾನ ಸುಲೇಮಾನ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪೊಲೀಸರು ಉತ್ತಮವಾಗಿ ಕೆಲಸಗಳನ್ನು ನಿರ್ವಹಿಸುತ್ತಿರುವುದರಿಂದ ಹಲವಾರು ಪ್ರಕರಣಗಳನ್ನು ಬೇಧಿಸಿ ಕಳುವಾದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗುತ್ತಿದೆ ಎಂದು ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಅಧಿಕ್ಷಕರಾದ ಮಹೇಶ ಮೇಘಣ್ಣವರ್‌, ಚಂದ್ರಕಾಂತ ಪೂಜಾರಿ ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ್‌, ಜೆ.ಎಸ್‌ ನ್ಯಾಮೇಗೌಡ, ಸಿಪಿಐ ಹನುಮರೆಡ್ಡಿ, ಪಿಎಸ್‌ಐ ಸೇರಿದಂತೆ ಇತರರು ಉಪಸ್ಥಿತರಿದ್ದರು.