ಭಾನುವಾರ ಬೆಳಗ್ಗೆ ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆ ಎಇಇ ವೆಂಕಟೇಶ್ವರ, ಕಿರಿಯ ಎಂಜಿನಿಯರ್ ನಾಗಪ್ಪ ಆಗಮಿಸಿ ನೀರನ್ನು ಸಮರ್ಪಕವಾಗಿ ಪೂರೈಸುತ್ತೇವೆ
ಕಾರಟಗಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ೩೧ನೇ ವಿತರಣಾ ಕಾಲುವೆ ಕೊನೆ ಭಾಗಕ್ಕೆ ಸಮರ್ಪಕ ನೀರು ಪೂರೈಸಬೇಕು ಮತ್ತು ನೀರುಗಳ್ಳತನ ತೆರವುಗೊಳಿಸಬೇಕೆಂದು ಒತ್ತಾಯಿಸಿ ಹತ್ತು ಹಳ್ಳಿಯ ರೈತರು ಭಾನುವಾರವೂ ತಮ್ಮ ಪ್ರತಿಭಟನೆ ಮುಂದುವರೆಸಿ ಇಲ್ಲಿನ ನೀರಾವರಿ ಕಚೇರಿ ಮುಂದೆ ಧರಣಿ ನಡೆಸಿ ಭಜನೆ ಮಾಡಿದರು.
೩೧ನೇ ವಿತರಣಾ ನಾಲೆಯ ೩೧/೬,೩೧/೮,೩೧/೯ ಮತ್ತು ಇತರೆ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಆಗ್ರಹಿಸಿ ಶನಿವಾರ ವಿತರಣಾ ನಾಲೆಯ ಕೊನೆ ಭಾಗದ ನೂರಾರು ರೈತರು ನೀರಾವರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಭಾನುವಾರ ಎರಡನೇ ದಿನಕ್ಕೆ ಮುಂದುವರೆಯಿತು.ಶನಿವಾರ ಸಂಜೆಯಾದರೂ ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಅಧಿಕಾರಿಗಳು ಆಗಮಿಸದೇ ಬೇಜವಾಬ್ದಾರಿ ವರ್ತನೆ ಖಂಡಿಸಿ ಕೊನೆ ಭಾಗಕ್ಕೆ ನೀರು ಮುಟ್ಟುವರೆಗೆ ಹೋರಾಟ ನಿಲ್ಲಿಸದೆ ಭಜನೆ ಮಾಡಿದರು.
ತೀವ್ರ ತರಾಟೆ:ಭಾನುವಾರ ಬೆಳಗ್ಗೆ ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆ ಎಇಇ ವೆಂಕಟೇಶ್ವರ, ಕಿರಿಯ ಎಂಜಿನಿಯರ್ ನಾಗಪ್ಪ ಆಗಮಿಸಿ ನೀರನ್ನು ಸಮರ್ಪಕವಾಗಿ ಪೂರೈಸುತ್ತೇವೆ, ಹೋರಾಟ ಕೈ ಬಿಡಿ ಎಂದು ಮನವಿ ಮಾಡಿದರು. ಆದರೆ ಇದಕ್ಕೆ ರೈತ ಮುಖಂಡರು ಒಪ್ಪಲಿಲ್ಲ. ಕಳೆದ ೧೪ ವರ್ಷಗಳಿಂದ ನಮ್ಮ ಮೂಲ ಸಮಸ್ಯೆ ಪರಿಹರಿಸಿಲ್ಲ. ಮೊದಲು ಹಾಳಾಗುತ್ತಿರುವ ಬೆಳೆ ಉಳಿಸಲು ನೀರು ಮುಟ್ಟಿಸಿ. ನಂತರ ನೀರಾವರಿ ವಲಯದ ಮುಖ್ಯ ಎಂಜಿನಿಯರ್ ಇವರನ್ನು ಸ್ಥಳಕ್ಕೆ ಕರೆಯಿಸಿ ಅಲ್ಲಿಯವರೆಗೂ ನಮ್ಮ ಹೋರಾಟ ಹೀಗೆ ಶಾಂತಿಯುತವಾಗಿ ನಡೆಯುತ್ತ ಎಂದು ಪ್ರತಿಕ್ರಿಯಿಸಿದರು.ಇದಕ್ಕೆ ಅಧಿಕಾರಿ ನೀರು ಹರಿಸುವ ಬಗ್ಗೆ ಯಾವುದೇ ಅನುಮಾನ ಬೇಡ ಈ ಬಗ್ಗೆ ಕ್ರಮ ಕೈಗೊಂಡಿರುವುದಾಗಿ ವೆಂಕಟೇಶ್ವರ ಭರವಸೆ ನೀಡಿದರೂ ಒಪ್ಪದ ಪ್ರತಿಭಟನಾನಿರತ ರೈತರು ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.
ಹೋರಾಟಗಾರರಾದ ಸಂಗಮೇಶಗೌಡ, ರಾಜುಗೌಡ ಬಾದರ್ಲಿ ಮಾತನಾಡಿ, ನೀರು ಹೇಗೆ ಮುಟ್ಟಿಸಲು ಸಾಧ್ಯ ನಮ್ಮ ನೀರನ್ನು ಮೇಲು ಭಾಗದಲ್ಲಿ ಅಕ್ರಮ ನೀರಾವರಿ ಹೆಚ್ಚಾಗಿದೆ. ಕಾಲುವೆಗಳಿಗೆ ಅಕ್ರಮ ಪೈಪ್‌ಲೈನ್, ಪಂಪ್‌ಸೆಟ್ ಇಟ್ಟುಕೊಂಡು ದೂರದವರೆಗೂ ನೀರು ಸಾಗಿಸಲಾಗುತ್ತಿದೆ. ಅಧಿಕೃತ ನೀರಾವರಿ ನಮ್ಮ ಭಾಗಕ್ಕೆ ನೀರಿನ ಕೊರತೆ ಹೆಚ್ಚಾಗಿದೆ. ಅಕ್ರಮ ತಡೆಗಟ್ಟಲು ಅಧಿಕಾರಿಗಳು ಮುಂದೆ ಬರುತ್ತಿಲ್ಲ. ೩೧/೨ ನೀರು ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ. ಅಲ್ಲಿನ ನೀರನ್ನು ಹಳ್ಳಕ್ಕೆ ಹಾಕಿಕೊಂಡು ಅನಧಿಕೃತ ನೂರಾರು ಎಕರೆ ಜಮೀನಿಗೆ ನೀರು ಹರಿಸುತ್ತಾರೆ. ನೀರಾವರಿ ಇಲಾಖೆ, ಟಾಸ್ಕ್ ಫೋರ್ಸ್ ಸಮಿತಿಗೂ ತಿಳಿದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಜೆ ಐದರೊಳಗೆ ಮುಖ್ಯ ಎಂಜಿನಿಯರ್ ಸ್ಥಳಕ್ಕೆ ಬರಬೇಕು, ನಮಗೆ ಅಧಿಕೃತವಾಗಿ ಭರವಸೆ ನೀಡಬೇಕು, ಜತೆಗೆ ಅಕ್ರಮ ನೀರಾವರಿ ತಡೆಗಟ್ಟಲು ಪ್ರಕರಣ ದಾಖಲಿಸಬೇಕು ಅಲ್ಲಿಯವರೆಗೂ ನಾವು ನಿಮ್ಮ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಸ್ಪಷ್ಟ ತಾಕೀತು ಮಾಡಿದರು. ಅಧಿಕಾರಿಗಳ ಓಲೈಕೆಗೆ ರೈತರು ಬಗ್ಗದ ಕಾರಣಕ್ಕೆ ನೀರಾವರಿ ಅಧಿಕಾರಿಗಳು ಅಲ್ಲಿಂದ ಜಾಗ ಖಾಲಿ ಮಾಡಿ ಅಕ್ರಮ ನೀರುಗಳ್ಳತನ ಪತ್ತೆಗೆ ಮೇಲ್ಭಾಗಕ್ಕೆ ದಾಳಿಗೆ ತೆರಳಿದರು.
ರೈತರ ಉಪವಾಸ: ಶನಿವಾರದಿಂದ ಧರಣಿ ನಡೆಸುತ್ತಿರುವ ರೈತ ಬಸವನಗೌಡ ಹುಡಾ ಮತ್ತು ರಾಮಚಂದ್ರರೆಡ್ಡಿ ಮುಕ್ಕಂದಾ ನೀರು ಆಹಾರ ಸೇವಿಸಿದೆ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಸೋಮವಾರ ಹೋರಾಟ ಮುಂದುವರೆದರೆ ಇನ್ನೂ ೨೫ಕ್ಕೂ ಹೆಚ್ಚು ರೈತರು ಅಮರಣಾಂತ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ದಶರೆಡ್ಡಿ ಚೆನ್ನಳ್ಳಿ ಕನ್ನಡಪ್ರಭಕ್ಕೆ ತಿಳಿಸಿದರು. ಈ ಇಬ್ಬರು ರೈತರನ್ನು ನೀರು ಬಳಕೆದಾರರ ಸಂಘದ ಸದಸ್ಯರು ಭಾನುವಾರ ಸನ್ಮಾನಿಸಿದರು.ನೀರು ಕೊಡಿ ಇಲ್ಲ ಸಾಯಿತ್ತೇವೆ: ಉಪವಾಸ ನಿರತ ಬಸನಗೌಡ ಹುಡಾ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಮಾತನಾಡಿ, ಮೊದಲು ಮೇಲ್ಭಾಗದಲ್ಲಿ ಅಕ್ರಮ ನೀರಾವರಿ, ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿದರೆ ಮಾತ್ರ ಅಧಿಕೃತ ನೀರಾವರಿ ರೈತರು ಬದುಕಲು ಸಾಧ್ಯ. ಇಲ್ಲವಾದರೆ ನೀರಾವರಿ ಕಚೇರಿ ಮುಂದೆ ರೈತರು ಸಾಯಿತ್ತಾರೆ ಎಂದು ಎಚ್ಚರಿಸಿದರು.
ಕೆಳಭಾಗದ ರೈತರಿಗೆ ಬೆಳೆ ಬರುವವರೆಗೂ ಕಾಳಜಿ ವಹಿಸಿ ನೀರು ಪೂರೈಕೆ ಮಾಡಬೇಕು. ಇದು ನೀರಾವರಿ ಅಧಿಕಾರಿಗಳ ಮತ್ತು ಟಾಸ್ಕ್‌ಫೋರ್ಸ್ ಜವಾಬ್ದಾರಿ. ೩೧/೩ ಮತ್ತು ೩೧/೪ರ ಭಾಗದ ಎಲ್ಲರಿಗೂ ನೀರು ತಲುಪಿಸಿ ಅವರು ರೈತರೆ, ಆದರೆ ವಾರಾಬಂದಿ ನಿರ್ವಹಣೆ ಮಾಡಿ ಎಲ್ಲ ಸಮಸ್ಯೆ ಸರಿಪಡಿಸಿ ಎಂದು ಪಟ್ಟಿ ಮಾಡಿ ಒತ್ತಾಯಿಸಿದರು.