ರಾಷ್ಟ್ರಭಕ್ತಿ ಹೆಸರಲ್ಲಿ ಲಿಂಗಾಯತ ಕರಗಿಸುವ ಕುತಂತ್ರ: ನಿಜಗುಣಾನಂದ ಶ್ರೀ ಎಚ್ಚರಿಕೆ

| Published : Nov 25 2024, 01:02 AM IST

ರಾಷ್ಟ್ರಭಕ್ತಿ ಹೆಸರಲ್ಲಿ ಲಿಂಗಾಯತ ಕರಗಿಸುವ ಕುತಂತ್ರ: ನಿಜಗುಣಾನಂದ ಶ್ರೀ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಬಸವ ಧರ್ಮಟ್ರಸ್ಟ್‌ ಅನುಭವ ಮಂಟಪದಿಂದ ಅನುಭವ ಮಂಟಪ ಪರಿಸರದಲ್ಲಿ ನಡೆಯುತ್ತಿರುವ 45ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದಲ್ಲಿ ಭಾನುವಾರ ಸಮಾರಂಭದ ಸಮಾರೋಪ ಜರುಗಿತು.

ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ

ರಾಷ್ಟ್ರಪ್ರಜ್ಞೆ, ರಾಷ್ಟ್ರಭಕ್ತಿಯ ತಳಹದಿಯ ಮೇಲೆ ಗೊತ್ತಿಲ್ಲದಂತೆ ಲಿಂಗಾಯತ ಧರ್ಮವನ್ನು ಕರಗಿಸುವ ಕುತಂತ್ರ ನಡೆದಿದೆ ಲಿಂಗಾಯತ ರಾಜಕೀಯ ನಾಯಕರು, ಸಾಹಿತಿಗಳು ಎಚ್ಚರವಾಗಬೇಕು ಇಲ್ಲವಾದಲ್ಲಿ ಎಂದು ಬೈಲೂರಿನ ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಎಚ್ಚರಿಸಿದರು.

ಇಲ್ಲಿಯ ವಿಶ್ವಬಸವ ಧರ್ಮಟ್ರಸ್ಟ್‌ ಅನುಭವ ಮಂಟಪದಿಂದ ಅನುಭವ ಮಂಟಪ ಪರಿಸರದಲ್ಲಿ ನಡೆಯುತ್ತಿರುವ 45ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಬಿಜ್ಜಳನ ಪ್ರಭುಪ್ರಭುತ್ವದಲ್ಲಿಯೇ ಪ್ರಜಾಪ್ರಭುತ್ವದ ಚಿಂತನೆ ಮಾಡಿದ ಬಸವಣ್ಣನಿಗೆ ಇದ್ದಷ್ಟು ರಾಷ್ಟ್ರ ಭಕ್ತಿ ಯಾವ ಮತೀಯವಾದಿ ಸ್ವಾಮಿಗಳಿಗಿಲ್ಲ, ಯಾವ ವೈದಿಕ ಸ್ವಾಮಿ ಗಳಿಗೂ ಇಲ್ಲ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಲಿಂಗಾಯತ ಧರ್ಮದ ಮೇಲೆ ಹೇಳಲಾರದಷ್ಟು ರೀತಿಯಲ್ಲಿ ದಾಳಿಯಾಗುತ್ತಿದೆ. ಬಸವಾದಿ ಪ್ರಮಥರ ವಚನಗಳನ್ನು ಹೇಳಲೂ ಜಿಗುಪ್ಸೆಗೆ ಒಳಪಡುವ ದುಸ್ಥಿತಿ ಬಂದಿದೆ. ಬಸವ ಪರ ಚಿಂತನೆಯುಳ್ಳವರನ್ನು ಸಭೆಗಳಿಗೆ ಕರೆಸುವದಕ್ಕೂ ಹಿಂದೇಟು ಹಾಕುವಂಥ ಮತೀಯವಾದಿ ಮಠಾಧೀಶರೂ ಇದ್ದಾರೆ ಎಂದರು.

ಬಸವ ಚಿಂತನೆ ಅಸ್ತಿತ್ವಕ್ಕೆ ತರುವ ಪಕ್ಷವು ಬರಲಿ :

ದಿನ ಬೆಳಗಾದರೆ ಒಂದೊಬ್ಬರು ಯೋಜನೆಗಳನ್ನು ಕೊಟ್ಟು, ಗ್ಯಾರಂಟಿಗಳನ್ನು ಕೊಟ್ಟು ಗೆಲ್ಲಬೇಕು ಇನ್ನೊಂದೆಡೆ ಮತ್ತೊಬ್ಬರು ಒಂದು ಧರ್ಮವನ್ನು ಟೀಕಿಸಿ ಗೆಲ್ಲಬೇಕು ಇವೆರಡೂ ಭಯಂಕರ ಹಾವುಗಳೇ ಒಂದು ಹಲ್ಲಿಲ್ಲದ ಹಾವು ಮತ್ತೊಂದು ಹಲ್ಲಿರುವ ಹಾವು. ಬಸವಣ್ಣನವರ ಕಲ್ಪನೆಯ ಪ್ರಜಾಪ್ರಭುತ್ವ ನೀಡುವ ಪಕ್ಷ ಹುಟ್ಟುವವರೆಗೆ ಈ ದೇಶಕ್ಕೆ ಭವ್ಯ ಭವಿಷ್ಯ ಕಷ್ಟ ಎಂದು ನಿಜಗುಣಾನಂದ ಸ್ವಾಮಿಗಳು ತಿಳಿಸಿದರು.

ಬಾಯಲ್ಲಿ ಬಸಪ್ಪ ಒಳಗಡೆ ನಾಗಪ್ಪ :

ಬಹಳ ಸಂಕ್ರಮಣದ ಕಾಲ. ಬಸವಣ್ಣನವರು ಕಟ್ಟಿದ ಸಮುದಾಯದ ಶರಣರನ್ನು ಇದೀಗ ಆಯಾ ಸಮುದಾಯದ ಜನ ಅವರವರನ್ನು ಕೊಂಡೊಯ್ದರು ಬಸವಣ್ಣನವರನ್ನು ಬಿಟ್ಟು ಬಿಟ್ಟರು. ಹೀಗೆಯೇ ಬಾಯಲ್ಲಿ ಬಸಪ್ಪ ಒಳಗಡೆ ನಾಗಪ್ಪ ಎಂಬ ಚಿಂತನೆಯುಳ್ಳ ಮತೀಯವಾದಿ ಮಠಾಧೀಶರಿಂದ ಮುಂದಿನ ದಿನಗಳಲ್ಲಿ ಆತಂಕ ಕಾಡುವಂತಿದೆ ಎಂದರು.

ಗುಡಿ ಗುಂಡಾರ ಕಟ್ಟಿ ಹೋಮ ಹವನ ಮಾಡಿಸಿ ಜನರಲ್ಲಿ ಮೂಢ ನಂಬಿಕೆಯನ್ನು ಬಿತ್ತುವ ಯತ್ನವನ್ನು ಲಿಂಗಾಯತರು ಮಾಡಲಿಲ್ಲ, ಆದರೆ ಶಿಕ್ಷಣ ಸಂಸ್ಥೆಗಳನ್ನು, ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಮಕ್ಕಳ ಅತ್ಯುತ್ತಮ ಶಿಕ್ಷಣ ಕಲ್ಪಿಸಿ ಸರ್ವ ಜನಾಂಗದವರ ಅಭಿವೃದ್ಧಿಗೆ ಹೆಜ್ಜೆ ಇಟ್ಟರು, ಹೀಗಾಗಿ ಬಸವ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಅತ್ಯಂತ ಜರೂರಿದೆ ಎಂದು ತಿಳಿಸಿದರು.

ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಮಾತೆ ಗಂಗಾದೇವಿ ಮಾತನಾಡಿ, ಲಿಂಗಾಯತ ಧರ್ಮದಲ್ಲಿಯ ಒಳಪಂಗಡ, ಭಿನ್ನಾಭಿಪ್ರಾಯ ಗಳನ್ನು ಮರೆತು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಿದೆ. ಸಂಘಟಿತ ಹೋರಾಟ ಮಾಡಬೇಕಿದೆ. ಅಂದಾಗ ಮಾತ್ರ ಲಿಂಗಾಯತ ಧರ್ಮ ಜಾಗತಿಕ ಧರ್ಮದ ಸಾಲಿನಲ್ಲಿ ನಿಲ್ಲಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು , ಶರಣ ಬಸವ ದೇವರು ಬೆಳದಿ ಶ್ರೀಗಳು, ಬಸವಾನಂದ ಸ್ವಾಮಿಗಳು , ಗುರುಬಸವ ಪಟ್ಟದೇವರು, ಸಾಹಿತಿ ಸೋಮನಾಥ ಯಾಳವಾರ, ಪ್ರೊ. ಶಿವಶರಣಪ್ಪ ಹುಗ್ಗೆಪಾಟೀಲ್‌ ಹಾಗೂ ಕಾಂಗ್ರೆಸ್‌ ಮುಖಂಡರಾದ ಧನರಾಜ್‌ ತಾಳಂಪಳ್ಳಿ, ಆನಂದ್ ದೇವಪ್ಪ, ಜಯರಾಜ ಖಂಡ್ರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಂಜೀವ ಕುಮಾರ ಜುಮ್ಮಾ ನಿರೂಪಿಸಿದರು.* ಜಗತ್ತಿಗೆ ಸಂಸತ್ತಿನ ಕಲ್ಪನೆ ಕೊಟ್ಟವರು ಬಸವಣ್ಣನವರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಮತ

ಬಸವಕಲ್ಯಾಣ: ಬಸವಾದಿ ಶರಣರು ಬಸವಕಲ್ಯಾಣದಲ್ಲಿ ಅನುಭವ ಮಂಟಪದ ಮುಖಾಂತರ ಸಾಮಾಜಿಕ ಕ್ರಾಂತಿಯನ್ನು ಮಾಡಿದರು ಈ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನವಾಗಿ ಅಧಿಕಾರ ನೀಡಲಾಗಿತ್ತು ಎಂದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ನುಡಿದರು.

ಅನುಭವಮಂಟಪದ 45ನೇ ಶರಣ ಕಮ್ಮಟ ಎರಡನೇ ದಿನದ ಕಾರ್ಯಕ್ರಮದ ಬಸವಕಲ್ಯಾಣ ಅಂದು ಇಂದು ಮುಂದು ಗೋಷ್ಠಿಯಲ್ಲಿ ಮಾತನಾಡಿದ ಅವರು ಇಲ್ಲಿ ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತಾಗಿತ್ತು. ಹೀಗಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರದೊಂದಿಗೆ ಕೆಲಸ ಪ್ರಾರಂಭಿಸಿದ್ದು ನಮ್ಮೆಲ್ಲರ ಬೇಡಿಕೆ ಈಡೇರಿದಂತಾಗಿದೆ.ಈಗಿನ ಸರ್ಕಾರ ಸಹ ಒಳ್ಳೆಯ ರೀತಿಯಿಂದ ಈ ಕಟ್ಟಡ ಕಾಮಗಾರಿಗೆ ಸಹಕರಿಸುತ್ತಿರುವುದು ಸ್ವಾಗತಾರ್ಹವಾಗಿದೆ ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣವಾದ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ ಅವರೆಲ್ಲರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಪ್ರಥಮ ಆದ್ಯತೆಯಾಗಿದೆ.ರೈಲ್ವೆ ಸಂಪರ್ಕ ರಸ್ತೆ ಸಂಪರ್ಕ, ವಾಯು ಸಂಪರ್ಕ ಇವುಗಳೆಲ್ಲಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಈ ರೀತಿಯಲ್ಲಿ ನಾವು ಹಾಗೂ ಸರ್ಕಾರ ಸಮಾಜದ ಮುಖಂಡರು ಕೂಡಿಕೊಂಡು ಮಾಡಬೇಕಾದ ಕೆಲಸಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಗದ್ಗುರು ಗಂಗಾ ಮಾತಾಜಿ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಎಲ್ಲರೂ ಶ್ರಮಿಸಬೇಕು ಧರ್ಮದ ಒಳಪಂಗಡಗಳು ಒಟ್ಟಿಗೆ ಸೇರಿ ಹೋರಾಟ ಮಾಡಿದರೆ ಸ್ವತಂತ್ರ ಧರ್ಮದ ಮಾನ್ಯತೆ ಶೀಘ್ರವೇ ಲಭಿಸುವುದು ಎಂದು ಮಾತನಾಡಿದರು.ಬೀದರ್ ಸಂಸದ ಸಾಗರ್ ಖಂಡ್ರೆ ಮಾತನಾಡಿ, ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಕೇಂದ್ರ ಸರ್ಕಾರದಿಂದ ಬಸವ ಜಯಂತಿ ರಜೆ ಘೋಷಿಸಲು ಪ್ರಧಾನಮಂತ್ರಿ ಅವರ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.ವೇದಿಕೆ ಮೇಲೆ ಪಟ್ಟದೇವರು, ವಿಧಾನ ಪರಿಷತ್ ಸದಸ್ಯ ಎಂಜಿ ಮೂಳೆ,, ಜಿಕೆ ಸಿದ್ದರಾಂ, ಡಾ. ಸೋಮನಾಥ ಯಳವಾರ್, ಗುರುಬಸವ ಪಟ್ಟದೇವರು, ಬಸವಾನಂದ ಶ್ರೀಗಳು, ಹುಮ್ನಾಬಾದ್ ಶಾಸಕ ಡಾ.ಸಿದ್ದು ಪಾಟೀಲ್, ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಮುಂತಾದವರು ಉಪಸಿತರಿದ್ದರು.* ಬಸವಕಲ್ಯಾಣ ಅಂದು-ಇಂದು-ಮುಂದು: ಗೋಷ್ಠಿಬಸವಕಲ್ಯಾಣ: ಶರಣ ಕಮ್ಮಟ ಮತ್ತು ಅನುಭವಮಂಟಪ ಉತ್ಸವದಲ್ಲಿ ಗೋಷ್ಠಿ-2ರಲ್ಲಿ ಬಸವಕಲ್ಯಾಣ ಅಂದು-ಇಂದು-ಮುಂದು ವಿಷಯ ಕುರಿತು ಪ್ರಮುಖವಾದ ಚಿಂತನೆಯನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಆಯೋಜಿಸಲಾಗಿತ್ತು.

ಕೂಡಲಸಂಗಮದ ಡಾ.ಮಾತೆ ಗಂಗಾದೇವಿ, ಶರಣಬಸವ ಮಹಾಸ್ವಾಮಿಗಳು, ಚರಮೂರ್ತಿ ಚರಂತೇಶ್ವರ ವಿರಕ್ತಮಠ, ಬಸವಬೆಳವಿ ಬಸವಾನಂದ ಮಹಾಸ್ವಾಮಿಗಳು, ಮನಗುಂಡಿ ಮತ್ತು ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್, ಬೀದರ ಸಂಸದ ಸಾಗರ ಖಂಡ್ರೆ, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಬಸವಕಲ್ಯಾಣ ಸಮಗ್ರ ರೀತಿಯಲ್ಲಿ ಬೆಳವಣಿಗೆಯಾಗಲು ಮೂಲಭೂತ ಸೌಕರ್ಯಗಳು ಆಗುವ ಅಗತ್ಯವಿದೆ ಎಂದರು.

ಪ್ರಗತಿಪರ ಚಿಂತಕರಾದ ಶಿವಶರರಣಪ್ಪ ಹುಗ್ಗೆ ಪಾಟೀಲ ಮತ್ತು ಸಿದ್ಧಪ್ಪ ಮೂಲಗೆ ಬಸವಕಲ್ಯಾಣದಲ್ಲಿ ಇಂದು ಕಾಣುವ ಸಮಗ್ರ ಅಭಿವೃದ್ಧಿಗೆ ವಾರದ ಮಲ್ಲಮ್ಮ, ಡಾ.ಚನ್ನಬಸವ ಪಟ್ಟದ್ದೇವರು, ಜಗದ್ಗುರು ಮಾತೆ ಮಹಾದೇವಿ ಮತ್ತು ಪೂಜ್ಯ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಅವರ ಪ್ರಮುಖ ಪಾತ್ರವಿದೆ ಎಂದರು. ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಅಧ್ಯಕ್ಷತೆ ವಹಿಸಿದ್ದರು.ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಡೋಹರ ಕಕ್ಕಯ್ಯ, ನಿಜಯೋಗಿ ಆದಯ್ಯ, ಶಂಕರ ದಾಸಿಮಯ್ಯ, ಹಾವಿಹಾಳ ಕಲ್ಲಯ್ಯ ಮೊದಲ್ಗೊಂಡು 11 ಕೃತಿಗಳು ಜಗದೀಶ ಶೆಟ್ಟರ್ ಅವರಿಂದ ಲೋಕಾರ್ಪಣೆಗೊಂಡವು.

ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ವೇದಪ್ರಕಾಶ, ಡಾ.ಗುರುಲಿಂಗಪ್ಪ ಧಬಾಲೆ, ಕಿರಣ್ ಎಂ. ಗಾಜನೂರು, ಶ್ರೀದೇವಿ ಕಟ್ಟಿಮನಿ ಅವರಿಗೆ ಸನ್ಮಾನಿಸಲಾಯಿತು. ವಿಶೇಷ ಆಹ್ವಾನಿತರಾಗಿ, ಸಂಜಯ ಬನಸೋಡೆ, ಸೋಮನಾಥ ಪಟ್ನೆ, ರಮೇಶ ಅಂಬರಖಾನೆ, ಹರೀಶ ಹಿರೇಮಠ, ಕಾವೇರಿ ಪಾಟೀಲ್, ಡಾ.ದೇವಕಿ ಡಾ.ಅಶೋಕ ನಾಗೂರೆ ಇದ್ದರು.

ಡಾ.ಎಸ್.ಬಿ.ದುರ್ಗೆ ಬಸವಗುರುಪೂಜೆ ನೆರವೇರಿಸಿಕೊಟ್ಟರು. ಜೈರಾಜ ಖಂಡ್ರೆ, ಸುರೇಶ ಚನ್ನಶೆಟ್ಟಿ, ಕುಪೇಂದ್ರ ಪಾಟೀಲ, ಶಿವರಾಜ ಪಾಟೀಲ, ಮಾಲತಿ ಇವಳೆ, ಕುಶಾಲರಾವ ಪಾಟೀಲ, ರಾಜೇಂದ್ರಕುಮಾರ ಗಂದಗೆ, ಕಂಟೆಪ್ಪ ಗಂದಿಗೂಡೆ, ಸಿದ್ಧಣ್ಣ ಭೂಮಾ, ಡಾ.ಸಂಜುಕುಮಾರ ಜುಮ್ಮಾ ವೀರೇಶ ಕುಂಬಾರ ಉಪಸ್ಥಿತರಿದ್ದರು.ಶರಣ ಕಮ್ಮಟದಲ್ಲಿ 4 ನಿರ್ಣಯಗಳು:

ಬಸವಕಲ್ಯಾಣ: ಬಸವಕಲ್ಯಾಣದಲ್ಲಿ ನಡೆದ 45ನೆಯ ಶರಣ ಕಮ್ಮಟ ಅನುಭವಮಂಟಪ ಉತ್ಸವದಲ್ಲಿ ನಾಲ್ಕು ಒಮ್ಮತದ ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಮನವಿ ಮಾಡಲಾಯಿತು.ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ದೇಶಾದ್ಯಂತ ಕೇಂದ್ರ ಸರ್ಕಾರದಿಂದ ಆಚರಿಸುವಂತಾಗಬೇಕು.

ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮ ಎಂದು ಕೇಂದ್ರ ಸರ್ಕಾರದಿಂದ ಘೋಷಣೆಯಾಗಬೇಕು.ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು. ಹಾಗೂ ದೇಶದಲ್ಲಿದ್ದ ಶರಣರ ಸ್ಮಾರಕಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸ್ವತಂತ್ರ ಸಚಿವಾಲಯ ಸ್ಥಾಪಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.