ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮನುಷ್ಯರ ನಡುವೆ ಇದ್ದಂತಹ ತಾರತಮ್ಯವನ್ನು ತೊಡೆದು ಹಾಕಿ ತಮ್ಮ ವಚನಗಳ ಮೂಲಕ ಬೆಳಕನ್ನು ಚೆಲ್ಲಿದವರು ಅಂಬಿಗರ ಚೌಡಯ್ಯ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಂಗಳವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಅವರು ಸಾವಿರಾರು ವಚನಗಳನ್ನು ಬರೆದಿದ್ದಾರೆ ಎಂಬ ಮಾಹಿತಿ ನಮಗೆ ಇದ್ದರೂ ಅನೇಕ ಗ್ರಂಥಗಳಲ್ಲಿ ಅವರ ಬಗ್ಗೆ ಹೇಳಬೇಕಾದರೆ ಅಂಬಿಗರ ಚೌಡಯ್ಯ ಎಂಬ ನಾಮಾಂಕಿತದೊಂದಿಗೆ ಅವರ ವಚನಗಳು ಕೊನೆಗೊಳ್ಳುತ್ತಿದ್ದವು. ಇಂತಹ ಸಂಗತಿಯ ನಡುವೆಯೂ ಕೆಲವು ಕಡೆ 275 ರಿಂದ 300 ವಚನಗಳು ಉಳಿದುಕೊಂಡಿದ್ದು, ಅವುಗಳು ಮಾತ್ರ ಸಂಗ್ರಹವಾಗಿವೆ ಎಂದರು.
ಅನುಭವ ಮಂಟಪದ ಸುತ್ತ ನದಿ, ಹೊಳೆ ಏನು ಇಲ್ಲ ಹೇಗೆ ನೀವು ಅಂಬಿಗರ ವೃತ್ತಿಯನ್ನು ಮಾಡುತ್ತೀರಾ ಎಂದು ಕೇಳಿದಾಗ ಮಾನವ ಎಂಬ ಸಂಪನ್ಮೂಲ ಏನಿದೆ ಅದರ ಹೊಳೆಯಲ್ಲಿ ಮನುಷ್ಯರ ನಡುವೆ ತಾರತಮ್ಯ ಹೊಡೆದು ಹಾಕಿ ಅವರೆಲ್ಲರನ್ನೂ ದಡ ಸೇರಿಸುತ್ತೇನೆ. ಅವರಲ್ಲಿ ಸಮಾಜ ಶೋಷಣೆಗೆ ಒಳಗಾದ ಮನುಷ್ಯರನ್ನು ಮೇಲೆತ್ತುವ ಕಾಯಕವೇ ನನ್ನ ಅಂಬಿಗನ ವೃತ್ತಿ ಎಂಬ ವಿಚಾರವನ್ನು ಅಂಬಿಗ ಚೌಡಯ್ಯ ಅವರು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.ಅಂಬಿಗರ ಚೌಡಯ್ಯ ವಚನವನ್ನು ಶುಭಕಾರ್ಯಗಳಲ್ಲಿ ಹೇಳುತ್ತಾ ಹೆಚ್ಚಿನ ಪ್ರಚಾರಕ್ಕೆ ಒಳಪಡಿಸುತ್ತ ಪ್ರಸ್ತುತದಲ್ಲಿಯೂ ಉಳಿದುಕೊಳ್ಳುವಂತೆ ಮಾಡಿದವರು ಅವರ ಮಗ. ಜೊತೆಗೆ ನಮ್ಮೆಲ್ಲರಿಗೂ ಈ ಕಾಲದಲ್ಲಿಯೂ ಬೆಳಕನ್ನು ಚೆಲ್ಲುತ್ತ ಇರುವುದು ಅಂಬಿಗ ಚೌಡಯ್ಯ ವಚನಗಳು ಎಂದರು.
ನಮ್ಮೆಲ್ಲರಿಗೂ ಮಾದರಿಮಹಾರಾಜ ಕಾಲೇಜು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಎನ್. ಪದ್ಮನಾಭ ಮಾತನಾಡಿ, ಅಂಬಿಗರ ಚೌಡಯ್ಯ ದೈತ್ಯ ಪ್ರತಿಭೆ, ಮಹಾಯೋಗಿ, ಭಾರತ ದರ್ಶನದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಂತ ಕವಿ, ಅವರ ಅನುಭವದಿಂದ ಸತ್ಯವನ್ನು ತಿಳಿಸಿದ ಮಹಾಪುರುಷ, ಮಹಾಹರಿಕಾರ, ಕ್ರಾಂತಿಕಾರಿ ಚಿಂತಕ, ಎಲ್ಲದಗಿಂತ ಹೆಚ್ಚಾಗಿ ಇವರು ಸಮಾಜ ಸುಧಾರಕರು ಹಾಗೂ ನೇರ ನುಡಿಯನ್ನು ಹೊಂದಿದ್ದವರು. ಇಂತಹವರು ನಿಜವಾಗಿಯೂ ನಮ್ಮೆಲ್ಲರ ಬದುಕಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ನಮ್ಮ ಬದುಕಿನಲ್ಲಿ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ ಹಾಗೂ ವಚನಗಳು ಎಂಬ ಐದು ಚಿನ್ನದ ಗಣಿಗಳಿದ್ದು, ಮೇಲಿನ ನಾಲ್ಕು ಗಣಿಗಳಿಗಿಂತ ವಚನ ಸಾಹಿತ್ಯ ತುಂಬಾ ಸುಲಭ, ಸಾಧಾರಣ ಹಾಗೂ ಸರಳವಾಗಿದೆ. ಈ 5 ಚಿನ್ನದ ಗಣಿಗಳನ್ನು ಯಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಅಂತಹವರು ಸಂತೋಷ, ಸುಖ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮುಖಂಡ ರಂಗಸ್ವಾಮಿ, ಅಂಬಿಗರ ಚೌಡಯ್ಯ ಸಮುದಾಯದ ಮುಖಂಡರು ಇದ್ದರು.