ಕನಕಪುರ: ರೈತರ ಹೆಸರೇಳಿ ಅಧಿಕಾರಕ್ಕೆ ಬಂದ ಬಳಿಕ ನಾಡಿನ ಮೂರುವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅನ್ನ ಹಾಕುವ ರೈತನ ಬದುಕು ಬೀದಿಗೆ ಬಂದಿದೆ ಸರ್ಕಾರದಲ್ಲಿ ಕುಳಿತಿರುವ ಜನಪ್ರತಿನಿಧಿಗಳು ಜಿಲ್ಲೆಯ ಹೆಸರನ್ನು ಮಾತ್ರ ಬದಲಿಸಿದ್ದಾರೆಯೇ ಹೊರತು, ರೈತರ ಸಮಸ್ಯೆ ಆಲಿಸದೇ ರಿಯಲ್ ಎಸ್ಟೇಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಗುಡುಗಿದರು
ಕನಕಪುರ: ರೈತರ ಹೆಸರೇಳಿ ಅಧಿಕಾರಕ್ಕೆ ಬಂದ ಬಳಿಕ ನಾಡಿನ ಮೂರುವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅನ್ನ ಹಾಕುವ ರೈತನ ಬದುಕು ಬೀದಿಗೆ ಬಂದಿದೆ ಸರ್ಕಾರದಲ್ಲಿ ಕುಳಿತಿರುವ ಜನಪ್ರತಿನಿಧಿಗಳು ಜಿಲ್ಲೆಯ ಹೆಸರನ್ನು ಮಾತ್ರ ಬದಲಿಸಿದ್ದಾರೆಯೇ ಹೊರತು, ರೈತರ ಸಮಸ್ಯೆ ಆಲಿಸದೇ ರಿಯಲ್ ಎಸ್ಟೇಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಗುಡುಗಿದರು.
ನಗರದ ಹೊರವಲಯದ ಶಿವ ಪಾರ್ವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜೆಡಿಎಸ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ರೈತ ಸ್ವಾಭಿಮಾನಿ ಪಾದಯಾತ್ರೆಗೆ ಚಾಲನೆ ನೀಡಿ, ಕಾರ್ಯಕರ್ತರ ಜೊತೆ ಚನ್ನಬಸಪ್ಪ ವೃತ್ತದವರೆಗೂ ಹೆಜ್ಜೆ ಹಾಕಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರೈತರ, ಬಡವರ ಬಗ್ಗೆ ಅರ್ಥ ಮಾಡಿಕೊಳ್ಳಲು ಮಾತೃ ಹೃದಯ ಬೇಕು. ಆ ಹೃದಯ ಇರುವುದು ಕುಮಾರಣ್ಣನಿಗೆ ಮಾತ್ರ. ಅತ್ಯಲ್ಪ ಅವಧಿಯ ಆಡಳಿತ ಮಾಡಿದರೂ ಕುಮಾರಣ್ಣ ನಾಡಿನ ಜನರ, ರೈತರ, ಹೆಣ್ಣು ಮಕ್ಕಳ, ಶೋಷಿತರ ನೋವಿಗೆ ಸ್ಪಂದಿಸಿದ್ದಾರೆ. ನಿಮ್ಮ ಜಿಲ್ಲೆಯವರು ಸಿಎಂ ಆಗಿದ್ದಾರೆ, ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ನಾವೆಲ್ಲರೂ ನೀವು ಸಿಎಂ ಆಗಿರುವುದಕ್ಕೆ ಹೊಟ್ಟೆಕಿಚ್ಚು ಪಡುವುದಿಲ್ಲ, ಇಲ್ಲಿ ನಿಮಗೆ ಮತ ಹಾಕಿರುವ ಜನತೆ ಪರ ಕೆಲಸ ಮಾಡಿ, ನಿಮಗೆ ನಾವೇ ಶಾಲು, ಹಾರ ಹಾಕಿ ಸನ್ಮಾನಿಸುತ್ತೇವೆ. ಆದರೆ ಹಲವು ದಿನಗಳಿಂದ ಬೈರಮಂಗಲದ ರೈತ ಮಹಿಳೆಯರಿಗೆ ಕಣ್ಣೀರು ಹಾಕಿಸಿದ್ದೀರಿ, ಬಹಳ ದಿನ ನೀವು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.ರೈತರ ಸಮಸ್ಯೆ ಆಲಿಸಲು ಸ್ವಾಭಿಮಾನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಕುಸಿದು ಕೆರೆ ಕಟ್ಟೆಗಳು ಬರಿದಾಗಿ, ಬರ ತಾಂಡವಾಡುತ್ತಿದ್ದರೂ ಸರ್ಕಾರ ಅನ್ನದಾತರ ನೆರವಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಕಡೆ ಕೈ ತೋರಿಸಿ ಸುಮ್ಮನೆ ಕುಳಿತುಕೊಳ್ಳುವುದು ನಾಚಿಕೆಗೇಡಿನ ವಿಷಯ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಬರಗಾಲದ ಸಮಯದಲ್ಲಿ ಕೇಂದ್ರದತ್ತ ನೋಡದೇ ರೈತರ ಸಾಲಮನ್ನಾ ಮಾಡಿದ್ದರು. ಸಿಎಂ ಕ್ಷೇತ್ರದಲ್ಲೇ ಬರ ಆವರಿಸಿದ್ದರೂ ಇದುವರೆಗೂ ಬಂದು ರೈತರ ಸಮಸ್ಯೆ ಆಲಿಸದ ಮುಖ್ಯಮಂತ್ರಿಗಳು ಕೇವಲ 2500 ರು ಪರಿಹಾರ ಘೋಷಣೆ ಮಾಡಿ ಮೂಗಿಗೆ ತುಪ್ಪ ಸವರುತ್ತಿರುವುದರಿಂದ ಸಿಎಂ ತವರು ಕ್ಷೇತ್ರದಿಂದಲೇ ರೈತ ಸ್ವಾಭಿಮಾನ ಯಾತ್ರೆ ಆರಂಭಿಸಿರುವುದಾಗಿ ತಿಳಿಸಿದರು.ರಾಜ್ಯದ 234 ತಾಲೂಕುಗಳಲ್ಲಿ 217 ತಾಲೂಕು ಬರ ಪೀಡಿತ ಎಂದು ಘೋಷಿಸಿದ್ದೀರಿ. ಕೆಎಸ್‌ಎನ್‌ಡಿಎಂಸಿ ವರದಿ ಬಂದು ಮೂರು ತಿಂಗಳಾದರೂ ಬರ ಘೋಷಿಸಲು ಮುಖ್ಯಮಂತ್ರಿಗಳು ಮೀನಮೇಷ ಎಣಿಸುತ್ತಿರುವುದು ವಿಷಾದಕರ. ಉಳುಮೆ, ಬೀಜ, ಕೂಲಿ, ಗೊಬ್ಬರ ಎಂದು ಎಕರೆಗೆ 50 ಸಾವಿರ ಖರ್ಚಾಗುತ್ತಿದೆ. ನೀವು ಕೊಡುತ್ತಿರುವುದು ಕೇವಲ 2500 ರು. ಬರ ಪರಿಹಾರ. ಇದು ಬರೀ ಘೋಷಣೆ ಮಾತ್ರ. ಸಿದ್ದರಾಮಣ್ಣ ಬಜೆಟ್ ಮಾಡಿ ಹೋದ ಬಳಿಕ ಖಜಾನೆಯಲ್ಲಿ ಹಣವೇ ಇಲ್ಲ. ಹೊಸ ಘೋಷಣೆ ಮಾಡಬೇಡಿ ಎಂದು ಆರ್ಥಿಕ ಇಲಾಖೆಯೇ ಹೇಳಿದೆ. ಇದು ದಿವಾಳಿಯಾದ ಸರ್ಕಾರ. ಗ್ಯಾರಂಟಿ ಹೆಸರಲ್ಲಿ ಹಣ ಗುಳುಂ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಣ್ಣ ಸರ್ಕಾರದ ರೀತಿ ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು. ರೈತರಿಗೆ ಕನಿಷ್ಠ 8 ಗಂಟೆ 3 ಪೇಸ್ ವಿದ್ಯುತ್ ಪೂರೈಸಬೇಕು. ಜಾನುವಾರುಗಳಿಗೆ ಉಚಿತ ಮೇವು ಹಾಗೂ ಕುಡಿಯುವ ನೀರು ಪೂರೈಸಬೇಕು. ಬರ ಪರಿಹಾರವಾಗಿ ಕನಿಷ್ಠ 25 ಸಾವಿರ ರು. ನೀಡಬೇಕೆಂದು ಒತ್ತಾಯಿಸಿದರು.ಪಾದಯಾತ್ರೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಶರವಣ, ರಮೇಶ್, ಜಿಲ್ಲಾಧ್ಯಕ್ಷ ಜಯಮುತ್ತು, ವಿಧಾನ ಪರಿಷತ್ ಸದಸ್ಯ ಜವರೇಗೌಡ, ಮಹಿಳಾ ಮುಖಂಡೆ ರತ್ನಮ್ಮ, ಯುವ ಘಟಕದ ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ, ತಾಲೂಕು ಅಧ್ಯಕ್ಷ ಬಿ.ನಾಗರಾಜು, ದಿಶಾ ಸಮಿತಿ ಸದಸ್ಯರಾದ ರಾಜೇಶ್, ಶೋಭಾ, ನಗರಸಭಾ ಮಾಜಿ ಸದಸ್ಯರಾದ ಪುಟ್ಟರಾಜು, ಕುರುಪೇಟೆ ಲೋಕೇಶ್, ಸ್ಟುಡಿಯೋ ಚಂದ್ರು, ಹಿರಿಯ ಮುಖಂಡ ಸಿದ್ದಮರಿಗೌಡ, ಯುವ ಮುಖಂಡರಾದ ಅರಳಾಳು ರಾಜೇಂದ್ರ, ತಿಮ್ಮೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಿ. ಜಯಮುತ್ತು, ಹಾರೋಹಳ್ಳಿ ತಾಲೂಕು ಅಧ್ಯಕ್ಷ ರಾಮು ಇತರರು ಪಾಲ್ಗೊಂಡಿದ್ದರು.
ಬಾಕ್ಸ್...........ಪಿಂಚಣಿ ಸಿಗದ ವೃದ್ಧೆಯ ಅಳಲು:
ನಿಖಿಲ್ ಕುಮಾರಸ್ವಾಮಿ ನೇತೃತ್ವದ ರೈತ ಸ್ವಾಭಿಮಾನ ಯಾತ್ರೆ ವೇದಿಕೆಯಲ್ಲಿ ವೃದ್ಧೆಯೊಬ್ಬರು ವೃದ್ಧಾಪ್ಯ ವೇತನ ಬಾರದ ಬಗ್ಗೆ ಹೇಳಿಕೊಂಡು, ಕಣ್ಣೀರು ಹಾಕಿ, ಮಗಾ, 3 ತಿಂಗಳಿಂದ ಪಿಂಚಣಿ ಬಂದಿಲ್ಲ. ಬದುಕೋದು ಕಷ್ಟ ಆಗಿದೆ ಎಂದು ದುಃಖ ತೋಡಿಕೊಂಡರು. ಸಿಎಂ ಕ್ಷೇತ್ರದಲ್ಲೇ ವೃದ್ಧಾಪ್ಯ ಪಿಂಚಣಿ ಬರುತ್ತಿಲ್ಲ ಎಂಬುದು ಸರ್ಕಾರದ ಆರ್ಥಿಕ ಪರಿಸ್ಥಿತಿ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.ತಕ್ಷಣ ಸ್ಪಂದಿಸಿದ ನಿಖಿಲ್ ಕುಮಾರಸ್ವಾಮಿ, ವೃದ್ಧೆಗೆ ಧೈರ್ಯ ತುಂಬಿ ಅಜ್ಜಿ ಚಿಂತೆ ಮಾಡಬೇಡಿ, ನಾನಿದ್ದೇನೆ, ಅಧಿಕಾರಿಗಳ ಜೊತೆ ಮಾತನಾಡಿ ನಿಮ್ಮ ಪಿಂಚಣಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಕೆ ಕೆ ಪಿ ಸುದ್ದಿ 02:ಕನಕಪುರದಲ್ಲಿ ಜೆಡಿಎಸ್ ಕೈಗೊಂಡಿರುವ ನರೈತ ಸ್ವಾಭಿಮಾನಿ ಪಾದಯಾತ್ರೆಗೆ ಚಾಲನೆ ನೀಡಿದ ನಿಖಿಲ್ ಕುಮಾರಸ್ವಾಮಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಮಾಜಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಶರವಣ, ರಮೇಶ್, ಜಿಲ್ಲಾಧ್ಯಕ್ಷ ಜಯಮುತ್ತು, ವಿಧಾನ ಪರಿಷತ್ ಸದಸ್ಯ ಜವರೇಗೌಡ ಇತರರಿದ್ದರು.