ಎಂಡಿಎ, ವಾಲ್ಮೀಕಿ ಹಗರಣ ತಾರ್ಕಿಕ ಅಂತ್ಯಕ್ಕಾಗಿ ಪಾದಯಾತ್ರೆ

| Published : Aug 03 2024, 12:32 AM IST

ಎಂಡಿಎ, ವಾಲ್ಮೀಕಿ ಹಗರಣ ತಾರ್ಕಿಕ ಅಂತ್ಯಕ್ಕಾಗಿ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ನಿಗಮದಲ್ಲಿ ಇತಿಹಾಸದಲ್ಲೇ ಈ ರೀತಿಯ ಹಗರಣ ಯಾವತ್ತೂ ನಡೆದಿರಲಿಲ್ಲ. ಮುಖ್ಯಮಂತ್ರಿಗಳೇ 89 ಕೋಟಿ ಹಗರಣ ನಡೆದಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಎಂಡಿಎ ಹಗರಣ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದೇ ಪಾದಯಾತ್ರೆ ಉದ್ದೇಶವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕೃಷಿ ಚಟುವಟಿಕೆಯಿಂದಾಗಿ ಪಾದಯಾತ್ರೆ ಮುಂದೂಡಲು ಮನವಿ ಮಾಡಲಾಗಿತ್ತು. ಆದರೆ, ಬಿಜೆಪಿ ವರಿಷ್ಠರು ಮುಂದೂಡುವುದು ಸರಿಯಲ್ಲ ಎಂದು ಹೇಳಿದ್ದರಿಂದ ಪಾದಯಾತ್ರೆಗೆ ಒಪ್ಪಿದ್ದೇವೆ. ರಾಜ್ಯದ ಜನರ ಪರವಾಗಿ ಈ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಪಾದಯಾತ್ರೆ ಡೈವರ್ಟ್ ಮಾಡಲು ಕಾಂಗ್ರೆಸ್ ಪರ್ಯಾಯ ಸಮಾವೇಶ ಮಾಡುತ್ತಿದೆ ಎಂದರು.

ವಾಲ್ಮೀಕಿ ನಿಗಮದಲ್ಲಿ ಇತಿಹಾಸದಲ್ಲೇ ಈ ರೀತಿಯ ಹಗರಣ ಯಾವತ್ತೂ ನಡೆದಿರಲಿಲ್ಲ. ಮುಖ್ಯಮಂತ್ರಿಗಳೇ 89 ಕೋಟಿ ಹಗರಣ ನಡೆದಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆದರೆ, ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಧಿಕಾರಿಗಳು ಸರ್ಕಾರದ ಕೆಳಗೆ ಕೆಲಸ ಮಾಡುತ್ತಾರೆ. ಹೀಗಾಗಿ ಸರ್ಕಾರವೇ ಇದಕ್ಕೆ ಹೊಣೆ, ಇದರ ವಿರುದ್ಧ ನಮ್ಮ ಹೋರಾಟ ಎಂದು ಅವರು ಹೇಳಿದರು.

ರಾಮನಗರದಲ್ಲಿ ನಮ್ಮ ಆಸ್ತಿ ಎಷ್ಟಿದೆ ಎನ್ನುವುದು ಜಾಗಜ್ಜಾಹೀರು. 1985 ರಲ್ಲಿ ಕುಮಾರಸ್ವಾಮಿ ಅವರು ಕೇತಗಳ್ಳಿ ಬಳಿ ಜಮೀನು ಖರೀದಿ ಮಾಡಿದ್ದರು. ಸಿನಿಮಾ ವಿತರಣೆಯಲ್ಲಿ ಬಂದಿದ್ದ ಹಣದಲ್ಲಿ ಜಮೀನು ಖರೀದಿಸಿದ್ದಾರೆ. ಇದನ್ನು ಹೊರತುಪಡಿಸಿ ರಾಮನಗರದಲ್ಲಿ ಬೇರೆ ಯಾವುದೇ ಆಸ್ತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ- ಜೆಡಿಎಸ್ ಭ್ರಷ್ಟಾಚಾರದ ಪಟ್ಟಿ ಮಾಡಿದ್ದೇವೆ ಎಂಬ ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಷ್ಟು ದಿನ ಕಾಂಗ್ರೆಸ್‌ ನವರು ಯಾಕೆ ಸುಮ್ಮನಿದ್ದರು. 2013 ರಿಂದ 18 ರವರೆಗೆ ಅವರೇ ಅಧಿಕಾರದಲ್ಲಿದ್ದರು. ಆಗ ಯಾಕೆ ಈ ಬಗ್ಗೆ ತನಿಖೆ ನಡೆಸಲಿಲ್ಲ. ಈಗ ಕಾಂಗ್ರೆಸ್‌ ನವರು ಭ್ರಷ್ಟಾಚಾರದ ವಿಷಯವನ್ನು ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರಿಂದ ನೋಟೀಸ್ ಕುರಿತು ಪ್ರತಿಕ್ರಿಯಿಸಿದ ಅವರು, ಆರ್‌.ಟಿ.ಐ ಕಾರ್ಯಕರ್ತರ ದೂರನ್ನು ಆಧರಿಸಿ ನೋಟಿಸ್ ನೀಡಲಾಗಿದೆ. ಆದರೆ, ಸರ್ಕಾರ ರಾಜ್ಯಪಾಲರ ವಿರುದ್ಧವೇ ನಿರ್ಣಯ ಕೈಗೊಂಡಿದೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಮುಂದೆ ಇದು ಯಾವ ರೀತಿ ಆಗಲಿದೆ ಎಂಬುದನ್ನು ಕಾದು ನೋಡಿ ಎಂದರು.

ಮೈತ್ರಿಗೆ ಜನರ ಬೆಂಬಲ ಸಿಕ್ಕಿದೆ. ಅದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚು ಸ್ಥಾನ ನೀಡಿದ್ದಾರೆ. ಇದನ್ನು ಅರ್ಥ ಮಾಡಿಕೊಂಡರೆ ಸಾಕು. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಮೈತ್ರಿ ಹೋರಾಟ ನಿರಂತರವಾಗಿರುತ್ತದೆ ಎಂದು ಅವರು ಹೇಳಿದರು.