ಸಾರಾಂಶ
ಮುಂಡರಗಿ: ಶಿವಮೊಗ್ಗ, ಚಿಕ್ಕಮಂಗಳೂರು ಸೇರಿದಂತೆ ಮಲೆನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ತಾಲೂಕಿನ ಹಮ್ಮಿಗಿ ಹತ್ತಿರವಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ ಶುಕ್ರವಾರ 2 ಲಕ್ಷ 9735 ಕ್ಯೂಸೆಕ್ ನೀರು ಬಂದಿದ್ದು, 19 ಗೇಟುಗಳ ಮೂಲಕ ಅಷ್ಟೂ ನೀರನ್ನು ನದಿಗೆ ಹರಿಬಿಡಲಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನದಿ ದಡದಲ್ಲಿರುವ ಮುಂಡರಗಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಗುರುವಾರ ಸಂಜೆ 16 ರಿಂದ 20 ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮಸ್ಥರಿಗೆ ಆತಂಕ ಮನೆ ಮಾಡಿದೆ. ಅಲ್ಲದೇ ನದಿ ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ತಾಲೂಕಿನ ಹಳೇ ಸಿಂಗಟಾಲೂರು ಗ್ರಾಮಕ್ಕೂ ಸಹ ನೀರು ಹರಿದು ಬರುತ್ತಿದ್ದು, ಈ ಮೊದಲು ಅಲ್ಲಿ ಕೆಲವು ಕುಟುಂಬಗಳು ವಾಸವಾಗಿದ್ದವು. ಇದೀಗ ಅಲ್ಲಿ ಯಾವುದೇ ಕುಟುಂಬ ವಾಸವಾಗಿಲ್ಲ ಅಲ್ಲಿ ವಾಸವಾಗಿದ್ದ ಸುಮಾರು 15 ಕುಟುಂಬಗಳು ನೀರಾವರಿ ವಸತಿ ನಿಲಯಗಳಲ್ಲಿ ವಾಸವಾಗಿವೆ. ಹೀಗಾಗಿ ಅಲ್ಲಿ ಯಾವುದೇ ಆತಂಕ ಇಲ್ಲ.ಆದರೆ ವಿಠಲಾಪುರ ಗ್ರಾಮವು ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗಿರುವ ಗ್ರಾಮವಾಗಿದ್ದು, ಅಲ್ಲಿನ ಸುಮಾರು 16 ರಿಂದ 20 ಮನೆಗಳಿಗೆ ಗುರುವಾರ ಸಂಜೆ ನೀರು ನುಗ್ಗಿದ್ದು, ಎಲ್ಲ ಕುಟುಂಬಗಳನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿ ಅಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಆದರೆ ಶುಕ್ರವಾರದ ವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಮತ್ತೆ ಯಾವುದೇ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿಲ್ಲ.
ನೀರಾವರಿ ಇಲಾಖೆ ಹೇಳುವ ಪ್ರಕಾರ ಶುಕ್ರವಾರ ಸಂಜೆ ಅಥವಾ ಶನಿವಾರ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದ್ದು, 2019ರಲ್ಲಿ ನದಿಗೆ ಸುಮಾರು 3 ಲಕ್ಷ ಕ್ಯೂಸೆಕ್ ನೀರು ಬಂದಿತ್ತು. ಹೀಗೆ ನೀರು ಬಂದರೆ ವಿಠಲಾಪೂರ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗುವ ಆತಂಕವಿದೆ ಎನ್ನಲಾಗುತ್ತಿದೆ.ನಮ್ಮ ಮನೆಗಳಿಗೆ ಗುರುವಾರ ಸಂಜೆ ನೀರು ನುಗ್ಗಿದ್ದು, ಎಲ್ಲರನ್ನೂ ಸರ್ಕಾರಿ ಶಾಲೆಗೆ ಕರೆದುಕೊಂಡು ಬಂದು ಊಟದ ವ್ಯವಸ್ಥೆ ಮಾಡಿದ್ದಾರೆ.ಶುಕ್ರವಾರ ಜಿಲ್ಲಾಧಿಕಾರಿಗಳು ಸಹ ಆಗಮಿಸಿ ನಮ್ಮನ್ನು ಮಾತನಾಡಿಸಿ ಇಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥೆ ದುರಗವ್ವ ನೆಗಳೂರು ತಿಳಿಸಿದ್ದಾರೆ.
ಈಗಾಗಲೇ ನಮ್ಮ ಸಿಬ್ಬಂದಿ ವಿಠಲಾಪುರ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,ತಾವೂ ಸಹ ನಿರಂತರವಾಗಿ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದು, ಹೆಚ್ಚಿನ ನದಿಗೆ ನೀರು ಹರಿದು ಬಂದು ಮತ್ತೆ ಮನೆಗಳಿಗೆ ನೀರು ನುಗ್ಗಿದಲ್ಲಿ ತಕ್ಷಣವೇ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ ಧನಂಜಯ ಮಾಲಗತ್ತಿ ಹೇಳಿದ್ದಾರೆ.