ಹಾರೋಹಳ್ಳಿ: ತಾಲೂಕಿನ ದೊಡ್ಡ ಕುರುಬರಹಳ್ಳಿ ಗ್ರಾಮದ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಾಲಯ ಪ್ರವೇಶಿಸಲು ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ

ಹಾರೋಹಳ್ಳಿ: ತಾಲೂಕಿನ ದೊಡ್ಡ ಕುರುಬರಹಳ್ಳಿ ಗ್ರಾಮದ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಾಲಯ ಪ್ರವೇಶಿಸಲು ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ಅನಿಲ್, ಈ ತಿಂಗಳ 12,13ರಂದು ಎರಡು ದಿನಗಳ ಕಾಲ ದೇವಾಲಯ ಲೋಕಾರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 13ರಂದು ನಿಖಿಲ್ ಕುಮಾರಸ್ವಾಮಿ ಗ್ರಾಮಕ್ಕೆ ಆಗಮಿಸುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಮೈಕ್ ಸ್ಥಗಿತಗೊಂಡಿತ್ತು. ಇದೇ ವಿಚಾರವಾಗಿ ಗ್ರಾಮದಲ್ಲಿ ಗೊಂದಲ ಉಂಟಾಗಿ, ಮಾತಿನ ಚಕಮಕಿ ನಡೆದು ಕೆಲವರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದರು. ಇದರಿಂದ ಆತ್ಮರಕ್ಷಣೆಗಾಗಿ ದೇವಾಲಯದೊಳಗೆ ತೆರಳಿ ಬಾಗಿಲು ಹಾಕಿಕೊಂಡಿದ್ದೆ. ಇದೇ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಗ್ರಾಮಕ್ಕೆ ಆಗಮಿಸಿದ್ದರಿಂದ ಘಟನೆಗೆ ಬೇರೆ ರೀತಿಯ ಅರ್ಥ ಕಲ್ಪಿಸಲಾಯಿತು ಎಂದು ಸ್ಪಷ್ಟಪಡಿಸಿದರು.

ನಿಖಿಲ್ ಕುಮಾರಸ್ವಾಮಿ ಅವರನ್ನು ದೇವಾಲಯ ಪ್ರವೇಶಿಸದಂತೆ ತಡೆಯುವ ಯಾವುದೇ ಉದ್ದೇಶವಾಗಲಿ, ರಾಜಕೀಯ ಪ್ರೇರಣೆಯಾಗಲಿ ಇರಲಿಲ್ಲ. ನಡೆದ ಘಟನೆಯಿಂದ ಗ್ರಾಮಕ್ಕೆ ರಾಜ್ಯಮಟ್ಟದಲ್ಲಿ ಕೆಟ್ಟ ಹೆಸರು ಬಂದಿದ್ದು, ಇದಕ್ಕಾಗಿ ಗ್ರಾಮಸ್ಥರು ಹಾಗೂ ದೇವಾಲಯದ ಆಡಳಿತ ಮಂಡಳಿ ಪರವಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸುತ್ತೇವೆ. ಅವರು ಯಾವ ಸಮಯದಲ್ಲಿ ಗ್ರಾಮಕ್ಕೆ ಬಂದರೂ ದೇವಾಲಯ ಸಮಿತಿಯಿಂದ ಅದ್ಧೂರಿಯಾಗಿ ಸ್ವಾಗತಿಸಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಗ್ರಾಮಸ್ಥ ರವಿಕುಮಾರ್ ಮಾತನಾಡಿ, ನ.12ರಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹಾಗೂ ಬಿಜೆಪಿ ಮುಖಂಡ ಗೌತಮ್ ಗೌಡ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನ.13ರಂದು ಶಾಸಕ ಇಕ್ಬಾಲ್ ಹುಸೇನ್ ಗ್ರಾಮಕ್ಕೆ ಆಗಮಿಸುವ ಕುರಿತು ಮೈಕ್‌ನಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಗೊಂದಲ ಉಂಟಾಯಿತು. ಈ ವಿಚಾರವಾಗಿ ವಾಗ್ವಾದ ನಡೆದಿದೆಯೇ ಹೊರತು ನಿಖಿಲ್ ಕುಮಾರಸ್ವಾಮಿ ಅವರನ್ನು ಅವಮಾನಿಸುವ ಅಥವಾ ತಡೆಯುವ ಯಾವುದೇ ಉದ್ದೇಶ ಇರಲಿಲ್ಲ ಎಂದು ತಿಳಿಸಿದರು.

ಯಾವುದೇ ಪಕ್ಷದ ಮುಖಂಡರು ಹಾಗೂ ಗಣ್ಯರು ಗ್ರಾಮಕ್ಕೆ ಆಗಮಿಸಿದರೂ ಸ್ವಾಗತಿಸುವುದು ನಮ್ಮ ಸಂಪ್ರದಾಯ. ನಿಖಿಲ್ ಕುಮಾರಸ್ವಾಮಿ ಅವರು ಗ್ರಾಮಕ್ಕೆ ಆಗಮಿಸಿ ಬಿಸಿಲು ಮಾರಮ್ಮ ದೇವಿಯ ದರ್ಶನ ಪಡೆದು ಹೋಗಬೇಕು. ಈಗಾಗಲೇ ನಡೆದಿರುವ ವಿವಾದಕ್ಕೆ ತೆರೆ ಎಳೆಯಬೇಕು. ಮತ್ತೆ ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿದರು.

ಈ ವೇಳೆ ಗ್ರಾಮಸ್ಥರಾದ ಸುರೇಶ್, ವಿನೋದ್, ಅಶೋಕ್, ಚಿಕ್ಕಣ್ಣ, ಮಹದೇವ್, ಚೆನ್ನಪ್ಪ, ಸುನಿಲ್, ನಾಗಣ್ಣ, ಪುಟ್ಟಣ್ಣ, ನಾಗರಾಜು, ಕೃಷ್ಣ, ನಂಜಪ್ಪ ,ಶಿವಕುಮಾರ್, ಮಾದಪ್ಪ ಇತರರಿದ್ದರು.

17ಕೆಆರ್ ಎಂಎನ್ 5.ಜೆಪಿಜಿ

ಹಾರೋಹಳ್ಳಿ ತಾಲೂಕಿನ ದೊಡ್ಡ ಕುರುಬರಹಳ್ಳಿ ಗ್ರಾಮದ ಬಿಸಿಲು ಮಾರಮ್ಮ ದೇವಾಲಯ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ದೇವಾಲಯದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.