ಸಾರಾಂಶ
ಬುಧವಾರ ನಡೆದ ಅರ್ಬನ್ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಕದ ಸೀಟಿನಲ್ಲಿ ಕುಳಿತು ಸುಮಾರು ಹೊತ್ತು ಚರ್ಚಿಸಿದ್ದು ಗಮನ ಸೆಳೆಯಿತು.
ಜಮಖಂಡಿ : ಬುಧವಾರ ನಡೆದ ಅರ್ಬನ್ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಕದ ಸೀಟಿನಲ್ಲಿ ಕುಳಿತು ಸುಮಾರು ಹೊತ್ತು ಚರ್ಚಿಸಿದ್ದು ಗಮನ ಸೆಳೆಯಿತು.
ಡಿ.ಕೆ.ಶಿವಕುಮಾರ್ ಪಕ್ಕದ ಆಸನದಲ್ಲಿ ಕುಳಿತಿದ್ದ ಬ್ಯಾಂಕಿನ ಚೇರಮನ್ ರಾಹುಲ್ ಕಲೂತಿ ಅವರು ಅಧ್ಯಕ್ಷೀಯ ಭಾಷಣ ಮಾಡಲು ಎದ್ದು ಹೋದಾಗ ವೇದಿಕೆ ಮೇಲೆಯೇ ಇದ್ದ ಮಾಜಿ ಸಚಿವ ಮುರುಗೇಶ ನಿರಾಣಿ ತಮ್ಮ ಆಸನದಿಂದ ಎದ್ದು ಡಿಸಿಎಂ ಪಕ್ಕದ ಆಸನದಲ್ಲಿ ಆಸೀನರಾಗಿ ಅವರ ಕಿವಿಯಲ್ಲಿ ಏನೋ ಹೇಳುತ್ತಿದ್ದರು. ಅದಕ್ಕೆ ಡಿ.ಕೆ. ಶಿವಕುಮಾರ್ ಹೂಂ ಎನ್ನುವಂತೆ ತಲೆಯಾಡಿಸುತ್ತಿದ್ದರು. ಕೆಲವು ಬಾರಿ ಡಿಕೆಶಿ ಅವರೂ ಅವರಿಗೆ ಏನೋ ಹೇಳುತ್ತಿದ್ದರು. ಕೆಲ ಸಮಯ ಇಬ್ಬರ ಮಧ್ಯೆಯೂ ನಡೆದ ಈ ಮಾತುಕತೆ ನೆರದಿದ್ದ ಜನರ ಗಮನ ಸೆಳೆಯಿತು.