ಹೊಸ ಪಕ್ಷ ಕಟ್ಟಿದವರ್‍ಯಾರೂ ಯಶಸ್ವಿಯಾಗಿಲ್ಲ ಎಂದ ನಿರಾಣಿ ಡಿಕೆಶಿ ಜೊತೆ ಪಿಸುಮಾತು

| N/A | Published : Apr 03 2025, 12:19 PM IST

Murugesh nirani

ಸಾರಾಂಶ

ಯತ್ನಾಳರು ಈಗಾಗಲೇ ಎರಡು ಬಾರಿ ಉಚ್ಚಾಟನೆ ಆಗಿ, ಈಗ ಮೂರನೇ ಬಾರಿಗೆ ಪಕ್ಷದಿಂದ ಉಚ್ಚಾಟನೆ ಆಗಿದ್ದಾರೆ. ಉಚ್ಚಾಟನೆ ಮಾಡ್ತಾರೆ, ಮತ್ತೆ ಮರಳಿ ಕರ್ಕೊಳ್ತಾರೆ ಅಂತಾಗಬಾರದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಬಾಗಲಕೋಟೆ : ಯತ್ನಾಳರು ಈಗಾಗಲೇ ಎರಡು ಬಾರಿ ಉಚ್ಚಾಟನೆ ಆಗಿ, ಈಗ ಮೂರನೇ ಬಾರಿಗೆ ಪಕ್ಷದಿಂದ ಉಚ್ಚಾಟನೆ ಆಗಿದ್ದಾರೆ. ಉಚ್ಚಾಟನೆ ಮಾಡ್ತಾರೆ, ಮತ್ತೆ ಮರಳಿ ಕರ್ಕೊಳ್ತಾರೆ ಅಂತಾಗಬಾರದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಆ ಮೂಲಕ ಯತ್ನಾಳರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಜಮಖಂಡಿಯಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳರು ಹೊಸ ಪಕ್ಷ ಮಾಡುತ್ತಾರೆಂದು ನನಗೆ ಅನ್ನಿಸುವುದಿಲ್ಲ. ಹೊಸ ಪಕ್ಷ ಕಟ್ಟಲು ಇನ್ನೂ ನಿರ್ಧರಿಸಿಲ್ಲ, ವಿಚಾರ ಮಾಡ್ತಿದಿನಿ, ಸರ್ವೆ ಮಾಡಿ ನಿರ್ಧಾರ ಕೈಗೊಳ್ತೀನಿ ಎಂದು ಹೇಳಿದ್ದಾರೆ. ಅವರು ಅನುಭವಿ ರಾಜಕಾರಣಿ. ಹಿಂದೆ ಹೊಸ ಪಕ್ಷ ಕಟ್ಟಿದವರು ಯಾರೂ ಯಶಸ್ವಿ ಆಗಿಲ್ಲ ಅನ್ನೋದು ಚಿಕ್ಕ ಮಕ್ಕಳಿಗೂ ಗೊತ್ತು. ಅದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ ಎಂದರು.

ಇದೇ ವೇಳೆ, ಡಿ.ಕೆ.ಶಿವಕುಮಾರ್‌ ಬಿಜೆಪಿಗೆ ಬರ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಡಿಕೆಶಿ ಬಿಜೆಪಿಗೆ ಬರುವುದು ನಮ್ಮ ನಡುವೆ ಇಲ್ಲ. ಇಂತಹ ವಿಚಾರ ನಾಲ್ಕು ಗೋಡೆ ಮಧ್ಯೆ ನಡೆಯುತ್ತದೆ. ಆದರೆ, ಅವರು ಕೇಂದ್ರದ ಮುಖಂಡರನ್ನು ಭೇಟಿಯಾಗುತ್ತಿರುವುದು ಕರ್ನಾಟಕದ ಅನುಕೂಲಕ್ಕಾಗಿ ಎಂದರು.

ಡಿಕೆಶಿ ಜೊತೆ ನಿರಾಣಿ ಪಿಸುಮಾತು:

ಜಮಖಂಡಿಯಲ್ಲಿ ನಡೆದ ಅರ್ಬನ್‌ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಕದ ಸೀಟಿನಲ್ಲಿ ಕುಳಿತು ಸುಮಾರು ಹೊತ್ತು ಚರ್ಚಿಸಿದ್ದು ಗಮನ ಸೆಳೆಯಿತು. ಡಿಕೆಶಿ ಪಕ್ಕದ ಆಸನದಲ್ಲಿ ಕುಳಿತಿದ್ದ ಬ್ಯಾಂಕಿನ ಚೇರಮನ್‌ ರಾಹುಲ್ ಕಲೂತಿ ಅವರು ಅಧ್ಯಕ್ಷೀಯ ಭಾಷಣ ಮಾಡಲು ಎದ್ದು ಹೋದಾಗ ವೇದಿಕೆ ಮೇಲೆಯೇ ಇದ್ದ ನಿರಾಣಿ ತಮ್ಮ ಆಸನದಿಂದ ಎದ್ದು ಡಿಸಿಎಂ ಪಕ್ಕದ ಆಸನದಲ್ಲಿ ಆಸೀನರಾಗಿ ಅವರ ಕಿವಿಯಲ್ಲಿ ಏನೋ ಹೇಳುತ್ತಿದ್ದರು. ಅದಕ್ಕೆ ಡಿ.ಕೆ.ಶಿವಕುಮಾರ್‌ ಹೂಂ ಎನ್ನುವಂತೆ ತಲೆಯಾಡಿಸುತ್ತಿದ್ದರು. ಈ ಮಾತುಕತೆ ನೆರೆದಿದ್ದ ಜನರ ಗಮನ ಸೆಳೆಯಿತು.