ಕಾವೇರಿ ನೀರಿನ ದರ ಏರಿಕೆ : ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಹಿತಿ - ಎಷ್ಟು ?

| N/A | Published : Apr 03 2025, 02:50 AM IST / Updated: Apr 03 2025, 07:36 AM IST

ಸಾರಾಂಶ

ಹಾಲು, ವಿದ್ಯುತ್‌, ಡೀಸೆಲ್‌ ದರ ಹೆಚ್ಚಳದ ನಂತರ ಇದೀಗ ಮತ್ತೊಂದು ದರ ಏರಿಕೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್‌ ನೀರಿಗೆ 1 ಪೈಸೆಯಷ್ಟು ಬೆಲೆ ಹೆಚ್ಚಿಸುವುದಾಗಿ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

  ಬೆಂಗಳೂರು : ಹಾಲು, ವಿದ್ಯುತ್‌, ಡೀಸೆಲ್‌ ದರ ಹೆಚ್ಚಳದ ನಂತರ ಇದೀಗ ಮತ್ತೊಂದು ದರ ಏರಿಕೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್‌ ನೀರಿಗೆ 1 ಪೈಸೆಯಷ್ಟು ಬೆಲೆ ಹೆಚ್ಚಿಸುವುದಾಗಿ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಈಗಾಗಲೇ ಹಲವು ವಿಚಾರದಲ್ಲಿ ಜನರ ಮೇಲೆ ಬೆಲೆ ಏರಿಕೆ ಹೊರೆ ಹೊರೆಸಿರುವ ರಾಜ್ಯ ಸರ್ಕಾರ ಇದೀಗ ನೀರಿನ ದರ ಹೆಚ್ಚಳಕ್ಕೂ ಮುಂದಾಗಿದೆ. 10 ವರ್ಷಕ್ಕೂ ಹೆಚ್ಚಿನ ಕಾಲದಿಂದ ನೀರಿನ ಬೆಲೆ ಹೆಚ್ಚಳ ಮಾಡದ ಕಾರಣ ಜಲಮಂಡಳಿಗೆ ವಾರ್ಷಿಕ ₹600 ಕೋಟಿಗೂ ಹೆಚ್ಚಿನ ಆದಾಯ ನಷ್ಟವುಂಟಾಗುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.

 ಹೀಗಾಗಿ ನೀರಿನ ಬೆಲೆ ಹೆಚ್ಚಳದ ಕುರಿತು ಹಲವು ದಿನಗಳಿಂದ ಚರ್ಚೆ ನಡೆಸಲಾಗುತ್ತಿದ್ದು, ಈಗ ಅಂತಿಮ ಸ್ವರೂಪ ಪಡೆದುಕೊಂಡಿದೆ. ಬೆಲೆ ಏರಿಕೆಗೆ ಸರ್ಕಾರದಿಂದಲೂ ಅನುಮತಿ ದೊರೆತಿದೆ. ಅದರಂತೆ ಪ್ರತಿ ಲೀಟರ್‌ ನೀರಿಗೆ 1 ಪೈಸೆ ಬೆಲೆ ಹೆಚ್ಚಿಸುವ ಸಾಧ್ಯತೆಗಳಿವೆ. ಜಲಮಂಡಳಿ ಬೆಲೆ ಏರಿಕೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಆರಂಭಿಸಿದ್ದು, ಶೀಘ್ರದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.

ಸದ್ಯ ಜಲಮಂಡಳಿಗೆ ವಾರ್ಷಿಕ ಸರಾಸರಿ ₹1,435 ಕೋಟಿ ಆದಾಯ ಬರುತ್ತಿದ್ದು, ₹2 ಸಾವಿರ ಕೋಟಿಗೂ ಹೆಚ್ಚಿನ ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ ಜಲಮಂಡಳಿಗೆ ವಾರ್ಷಿಕ ₹600 ಕೋಟಿಗೂ ಹೆಚ್ಚಿನ ನಷ್ಟವುಂಟಾಗುತ್ತಿದೆ. ಇದೀಗ ಪ್ರತಿ ಲೀ. ನೀರಿಗೆ ತಲಾ 1 ಪೈಸೆ ಬೆಲೆ ಹೆಚ್ಚಳದಿಂದ ಮಂಡಳಿಗೆ ವಾರ್ಷಿಕ ₹700 ಕೋಟಿಗೂ ಹೆಚ್ಚಿನ ಆದಾಯ ಬರುವ ಅಂದಾಜಿಸಲಾಗಿದೆ. ಅಲ್ಲದೆ, ವಾರ್ಷಿಕ ಆದಾಯ ₹2,200 ಕೋಟಿವರೆಗೆ ತಲುಪುವ ಸಾಧ್ಯತೆಗಳಿವೆ.

ಸದ್ಯ ಜಲಮಂಡಳಿಯು ಪ್ರತಿ ಸಾವಿರ ಲೀಟರ್‌ಗೆ ಗೃಹ ಬಳಕೆಗೆ ₹7 ರಿಂದ ₹45, ಗೃಹ ಬಳಕೆ (ಅಪಾರ್ಟ್‌ಮೆಂಟ್‌ಗೆ) ₹22 ನೀರಿನ ಶುಲ್ಕ ವಿಧಿಸುತ್ತಿದೆ. ಹಾಗೆಯೇ, ಗೃಹ ಬಳಕೇತರ ಸಂಪರ್ಕಕ್ಕೆ ಪ್ರತಿ ಸಾವಿರ ಲೀ.ಗೆ ₹50 ರಿಂದ ₹70, ಕೈಗಾರಿಕೆಗಳಿಗೆ ₹90 ವಿಧಿಸಲಾಗುತ್ತಿದೆ. ದರ ಹೆಚ್ಚಳದಿಂದಾಗಿ ಪ್ರತಿ ಸಾವಿರ ಲೀ. ನೀರಿಗೆ ₹10 ಹೆಚ್ಚಳವಾಗಲಿದೆ.

ದರ ಏರಿಕೆ ಅನಿವಾರ್ಯ: ಶಿವಕುಮಾರ್‌ ಸ್ಪಷ್ಟನೆ

ನೀರಿನ ದರ ಹೆಚ್ಚಳದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಬೆಂಗಳೂರಿನಲ್ಲಿ ಕಾವೇರಿ ನೀರಿನ ಬೆಲೆ ಹೆಚ್ಚಿಸಲೇಬೇಕಿದೆ. ಅದರಂತೆ ಪ್ರತಿ ಲೀ.ಗೆ ಕನಿಷ್ಠ 1 ಪೈಸೆಯಷ್ಟು ಬೆಲೆ ಏರಿಕೆ ಮಾಡುವ ಉದ್ದೇಶವಿದೆ. ಆದರೂ, ಜನರಿಗೆ ಹೊರೆಯಾಗದಂತೆ ನೀರಿನ ದರ ಹೆಚ್ಚಳಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸದ್ಯ ಜಲಮಂಡಳಿಗೆ ವಾರ್ಷಿಕ ₹1 ಸಾವಿರ ಕೋಟಿ ನಷ್ಟವುಂಟಾಗುತ್ತಿದೆ. ಹಾಗೆಯೇ, ಮುಂದಿನ ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದರೆ ದರ ಏರಿಕೆ ಅನಿವಾರ್ಯವಾಗಿದೆ. ಅಲ್ಲದೆ, ಜನರೂ ನೀರಿನ ಪ್ರಾಮುಖ್ಯತೆ ಅರಿಯಬೇಕು ಎಂದರು.